ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಇಂದಿನಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ
Published 4 ಮಾರ್ಚ್ 2024, 23:30 IST
Last Updated 4 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು/ಹೆಸರಘಟ್ಟ: ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮಂಗಳವಾರದಿಂದ ಮೂರು ದಿನಗಳು ‘ರಾಷ್ಟ್ರೀಯ ತೋಟಗಾರಿಕೆ ಮೇಳ– 2024’ ನಡೆಯಲಿದೆ.

‘ಸುಸ್ಥಿರ ಅಭಿವೃದ್ಧಿಗಾಗಿ ನವೀನ ತೋಟಗಾರಿಕೆ ತಂತ್ರಜ್ಞಾನಗಳು‘ ಎಂಬ ಶೀರ್ಷಿಕೆಯಡಿ ನಡೆಯುವ ಈ ಮೇಳದಲ್ಲಿ ಪ್ರಮುಖವಾಗಿ ಚತುರ ನೀರಾವರಿ ವ್ಯವಸ್ಥೆ, ನಿಯಂತ್ರಿತ ಪರಿಸರ ಕೃಷಿ, ಸುಸ್ಥಿರ ಅಭಿವೃದ್ಧಿಗಾಗಿ ಪರಿಸರಸ್ನೇಹಿ ಪದ್ಧತಿಗಳು, ಡಿಜಿಟಲ್‌ ತೋಟಗಾರಿಕೆ ಸೇರಿದಂತೆ, ನವೀನ ತಂತ್ರಜ್ಞಾನಗಳ ಕುರಿತ ಪ್ರದರ್ಶನಗಳಿವೆ.

‘13 ವಿಭಾಗಗಳಲ್ಲಿ, 250ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಿರುತ್ತವೆ. ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳು ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳು, ರೈತ ಉತ್ಪಾದಕ  ಸಂಘಗಳು (ಎಫ್‌ಪಿಒ) ಮೇಳದಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ. ಜತೆಗೆ ಬೀಜಗಳು, ಹಣ್ಣಿನ ಗಿಡಗಳ ಮಾರಾಟವಿರುತ್ತದೆ‘ ಎಂದು ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ನಂದೀಶ್ ಮಾಹಿತಿ ನೀಡಿದರು.

‘ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಮೇಳದ ಪ್ರಮುಖ ಆಕರ್ಷಣೆಗಳಲ್ಲೊಂದು. ಜತೆಗೆ, ತೋಟಗಾರಿಕೆ ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಶೇಖರಣಾ ತಂತ್ರಜ್ಞಾನಗಳ ಕುರಿತ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ನಗರ ತೋಟಗಾರಿಕೆ, ಮಣ್ಣು ರಹಿತ ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಕುರಿತು ಪ್ರದರ್ಶನ ಮಳಿಗೆಗಳಿರುತ್ತವೆ’ ಎಂದು ತಿಳಿಸಿದರು.

ಮೇಳದಲ್ಲಿ 18 ರಾಜ್ಯಗಳ ರೈತರು ಭಾಗವಹಿಸಲಿದ್ದಾರೆ. ಐಐಎಚ್ಆರ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಗುತ್ತದೆ. 

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

11 ಗಂಟೆಗೆ ಉದ್ಘಾಟನೆ

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬುಡಕಟ್ಟು ವ್ಯವಹಾರಗಳು ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ವರ್ಚುವಲ್‌ ವೇದಿಕೆ ಮೂಲಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಬಿಇಎಲ್‌ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಭಾನುಪ್ರಕಾಶ್ ಶ್ರೀವಾಸ್ತವ ದೆಹಲಿಯ ಐಸಿಎಆರ್‌ ಉಪ ಮಹಾನಿರ್ದೇಶಕ (ತೋಟಗಾರಿಕೆ ವಿಜ್ಞಾನಗಳ ವಿಭಾಗ) ಸಂಜಯ್ ಕುಮಾರ್ ಸಿಂಗ್ ಮತ್ತು ಐಐಎಚ್‌ಆರ್‌ ನಿರ್ದೇಶಕ(ಪ್ರಭಾರ) ಪ್ರಕಾಶ್ ಪಾಟೀಲ್ ಹಾಜರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT