ಗುರುವಾರ , ಜೂನ್ 30, 2022
27 °C
ಯುವತಿಯರ ಬಳಸಿ ಡ್ರಗ್ಸ್ ದಂಧೆ

ಎನ್‌ಸಿಬಿ ಕಾರ್ಯಾಚರಣೆ: ₹ 54.50 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಲ್ಲಿ ವ್ಯವಸ್ಥಿತವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಜಾಲ ಭೇದಿಸಿರುವ ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು, ₹ 54.50 ಕೋಟಿ ಮೌಲ್ಯದ 34 ಕೆ.ಜಿ 89 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ.

‘ದೆಹಲಿ ಕೇಂದ್ರವನ್ನಾಗಿಸಿಕೊಂಡು ವಿವಿಧ ರಾಜ್ಯಗಳಲ್ಲಿ ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಕಿಂಗ್‌ಪಿನ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಐವರು ಯುವತಿಯರಿದ್ದಾರೆ’ ಎಂದು ಎನ್‌ಸಿಬಿ ವಲಯ ಕಚೇರಿ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ: ‘ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಬಂದಿದ್ದರಿಂದ ಕಾರ್ಯಾಚರಣೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿಮಾನದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಸುಳಿವು ಸಿಕ್ಕಿದ್ದರಿಂದ, ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಲಾಗಿತ್ತು’ ಎಂದು ಘಾವಟೆ ಹೇಳಿದರು.

‘ಜಿಂಬಾಬ್ವೆಯಿಂದ ವಿಮಾನದಲ್ಲಿ ಮೇ 24ರಂದು ಬೆಂಗಳೂರಿಗೆ ಬಂದಿದ್ದ ಯುವತಿ, ನಿಲ್ದಾಣದಲ್ಲಿ ಇಳಿದಿದ್ದಳು. ಆಕೆ ಮೇಲೆ ಅನುಮಾನ ಬರುತ್ತಿದ್ದಂತೆ, ತಪಾಸಣೆ ನಡೆಸಲಾಯಿತು. ಆಕೆ ಬಳಿಯ ಸೂಟ್‌ಕೇಸ್‌ನ ಕೆಳಭಾಗದಲ್ಲಿ ಬಚ್ಚಿಟ್ಟಿದ್ದ 7 ಕೆ.ಜಿ ಹೆರಾಯಿನ್ ಪತ್ತೆಯಾಯಿತು. ಆಕೆ ಹಾಗೂ ಜೊತೆಗಿದ್ದ ಮತ್ತೊಬ್ಬ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಡ್ರಗ್ಸ್ ಜಾಲದ ಪ್ರಮುಖ ರೂವಾರಿಗಳ ಹೆಸರುಗಳು ಬಯಲಾದವು’ ಎಂದೂ ತಿಳಿಸಿದರು.

‘ಬೆಂಗಳೂರಿನ ವಸತಿಗೃಹವೊಂದರಲ್ಲಿ ತಂಗಿರುವ ಯುವತಿ ಬಳಿಯೂ ಡ್ರಗ್ಸ್ ಇರುವುದಾಗಿ ಯುವತಿಯರು ಬಾಯ್ಬಿಟ್ಟಿದ್ದರು. ವಸತಿಗೃಹದ ಮೇಲೂ ದಾಳಿ ಮಾಡಿ, 6 ಕೆ.ಜಿ 890 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಯಿತು’ ಎಂದೂ ಹೇಳಿದರು.

ರೈಲಿನಲ್ಲೂ ಸಾಗಣೆ: ‘ಜಾಲದ ಮೂವರು ಯುವತಿಯರು, ಬೆಂಗಳೂರಿನಿಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಗೆ ಹೆರಾಯಿನ್ ಸಾಗಿಸುತ್ತಿದ್ದರು. ಈ ಬಗ್ಗೆ ಮಧ್ಯಪ್ರದೇಶದ ಇಂಧೋರ್‌ನ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮೂವರನ್ನು ಬಂಧಿಸಲಾಯಿತು. ಅವರ ಬಳಿ 21 ಕೆ.ಜಿ ಹೆರಾಯಿನ್ ಪತ್ತೆಯಾಯಿತು’ ಎಂದೂ ಘಾವಟೆ ತಿಳಿಸಿದರು.

ಕಿಂಗ್‌ಪಿನ್ ಬಂಧನ: ‘ನೈಜೀರಿಯಾ ಪ್ರಜೆಯೊಬ್ಬ ಡ್ರಗ್ಸ್ ದಂಧೆಯ ಕಿಂಗ್‌ಪಿನ್ ಆಗಿದ್ದ. ಆತ ದೆಹಲಿಯಲ್ಲಿರುವ ಮಾಹಿತಿ ಯುವತಿಯರ ವಿಚಾರಣೆಯಿಂದ ಗೊತ್ತಾಗಿತ್ತು. ಮೂರು ವಿಶೇಷ ತಂಡಗಳು ತನಿಖೆ ನಡೆಸಿ, ಕಿಂಗ್‌ಪಿನ್ ಬಂಧಿಸುವಲ್ಲಿ ಯಶಸ್ವಿಯಾಗಿವೆ’ ಎಂದು ಘಾವಟೆ ಹೇಳಿದರು.

‘ಪ್ರಮುಖ ಆರೋಪಿಯಾದ ನೈಜೀರಿಯಾ ಪ್ರಜೆ, ಯುವತಿಯರನ್ನು ಮುಂದಿಟ್ಟುಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ. ಪೊಲೀಸರು ಯುವತಿಯರನ್ನು ಹೆಚ್ಚು ತಪಾಸಣೆ ಮಾಡವುದಿಲ್ಲವೆಂದು ತಿಳಿದಿದ್ದ. ದಾಳಿ ವೇಳೆಯೂ ಎನ್‌ಸಿಬಿ ಸಿಬ್ಬಂದಿ ಜೊತೆ ಆರೋಪಿಗಳು ಕಿರಿಕ್ ಮಾಡಿದ್ದರು. ಮಹಿಳಾ ಸಿಬ್ಬಂದಿ ಮೂಲಕವೇ ಯುವತಿಯರನ್ನು ತಪಾಸಣೆ ನಡೆಸಲಾಗಿತ್ತು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು