ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಲೋಪದಿಂದ ‘ಬಂಧಮುಕ್ತ’: ಕಟ್ಟುನಿಟ್ಟಿನ ಕ್ರಮ ಅನುಸರಿಸಲು ನಿರ್ದೇಶನ

ಗೂಂಡಾಕಾಯ್ದೆ: ಪ್ರಸ್ತಾವ ಸಲ್ಲಿಕೆ ವೇಳೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲು ನಿರ್ದೇಶನ
-ಆದಿತ್ಯ ಕೆ.ಎ.
Published 20 ಜನವರಿ 2024, 22:10 IST
Last Updated 20 ಜನವರಿ 2024, 22:10 IST
ಅಕ್ಷರ ಗಾತ್ರ

ಬೆಂಗಳೂರು: ಗೂಂಡಾಕಾಯ್ದೆ ಅಡಿ ಬಂಧನಕ್ಕೆ ಒಳಗಾದ ಆರೋಪಿಗಳು, ಹೈಕೋರ್ಟ್‌ನಲ್ಲಿ ‘ಹೇಬಿಯಸ್‌ ಕಾರ್ಪಸ್‌’ ಸಲ್ಲಿಕೆ ವೇಳೆ ಹಲವು ನ್ಯೂನತೆ ಎತ್ತಿಹಿಡಿದು ‘ಬಂಧಮುಕ್ತ’ ಆಗುತ್ತಿದ್ದಾರೆ. ಇದಕ್ಕೆ ಪೊಲೀಸರು ಸಲ್ಲಿಸುತ್ತಿರುವ ಪ್ರಸ್ತಾವದಲ್ಲಿರುವ ‘ತಾಂತ್ರಿಕ ಲೋಷದೋಷವೇ ಕಾರಣ’ ಎಂಬುದು ಕಂಡುಬಂದಿದೆ.

ರಾಜ್ಯದಲ್ಲಿ ಬಹಳಷ್ಟು ಪ್ರಕರಣಗಳಲ್ಲಿ ಕೆಲವು ಲೋಪಗಳಿಂದಾಗಿ ಗೂಂಡಾಕಾಯ್ದೆ ಅಡಿ ಬಂಧನಕ್ಕೆ ಒಳಗಾದವರು  ಸುಲಭವಾಗಿ ಬಂಧಮುಕ್ತ ಆಗುತ್ತಿದ್ದಾರೆ. ಆ ರೀತಿಯ 13 ಪ್ರಕರಣಗಳನ್ನು ಉಲ್ಲೇಖಿಸಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ.

‘ಗೂಂಡಾಕಾಯ್ದೆ ಅಡಿ ಪ್ರಸ್ತಾವ‌ ಸಲ್ಲಿಸುವಾಗ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ ಎಲ್ಲ ಘಟಕಾಧಿಕಾರಿಗಳಿಗೆ ಮಹಾನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

‘ರಾಷ್ಟ್ರರಕ್ಷಣಾ ಪಡೆ ಸಂಘಟನೆ’ಯ ಮುಖಂಡ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್ ಕೆರೆಹಳ್ಳಿ ವಿರುದ್ಧ ನಗರದ ಚಾಮರಾಜಪೇಟೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್‌ ಠಾಣೆ, ರಾಮನಗರದ ಸಾತನೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ದೊಂಬಿ, ಕೊಲೆ, ಹಲ್ಲೆ, ಪ್ರಾಣ ಬೆದರಿಕೆ ಪ್ರಕರಣಗಳು ದಾಖಲಾಗಿದ್ದವು. ಅದಾದ ಮೇಲೆ ಪ್ರಸ್ತಾವನೆ ಸಿದ್ಧಪಡಿಸಿ ಅವರ ವಿರುದ್ಧ ರೌಡಿಪಟ್ಟಿ ತೆರೆದು ಬಂಧಿಸಲಾಗಿತ್ತು. ನಂತರ, ಅವರು ಜಾಮೀನ ಮೇಲೆ ಬಿಡುಗಡೆಯಾಗಿದ್ದರು.

‘ಪುನೀತ್‌ ಕೆರೆಹಳ್ಳಿ, ಬೆಂಗಳೂರಿನ ಶ್ರೀಕಾಂತ್‌, ಹಾಸನ ಜಿಲ್ಲೆಯ ಸಂದೀಪಗೌಡ ಪ್ರಕರಣಗಳಲ್ಲಿ ಬಂಧನಕ್ಕೆ ಸಾಕಷ್ಟು ಕಾರಣಗಳು ಇಲ್ಲ’ ಎಂದು ಹೇಳಿ ಹೈಕೋರ್ಟ್‌ನ ಸಲಹಾ ಮಂಡಳಿ ಅವರ ಬಿಡುಗಡೆಗೆ ಆದೇಶಿಸಿತ್ತು. ಬರೀ ರೂಢಿಗತ ಅಪರಾಧಿ ಎಂಬ ಕಾರಣಕ್ಕೆ ಗೂಂಡಾಕಾಯ್ದೆ ಅಡಿ ಬಂಧಿಸುವಂತಿಲ್ಲ. ಈ ಕಾಯ್ದೆಯಡಿ ಬಂಧಿಸುವಾಗ ಬಂಧಿಯ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ನಿರ್ದೇಶಿಸಿದ್ದಾರೆ.

ಬಂಧಿಗೆ ಒದಗಿಸಿರುವ ದಾಖಲಾತಿಗಳು ಸ್ಪಷ್ಟವಾಗಿ ಓದುವಂತೆ ಇರಬೇಕು. ಬಂಧಿತ ಜಾಮೀನು ಪಡೆದಿದ್ದರೆ, ಜಾಮೀನು ಉಲ್ಲಂಘಿಸಿದ್ದರೆ ಅದರ ವಿವರಗಳನ್ನು ಒದಗಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‘ಬ್ಯಾಟರಿ’ ಜಯಂತ್‌ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.

ಸಲಹಾ ಮಂಡಳಿ ಎದುರು ವಿಚಾರಣೆ ನಡೆಯುವ ಸಮಯದಲ್ಲಿ ನಿಯೋಜಿತ ಅಧಿಕಾರಿಗಳು, ಪ್ರಕರಣವನ್ನು ಸಮರ್ಥನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ‘ಪ್ರಕರಣವನ್ನು ಅರ್ಥೈಸಿಕೊಂಡು ಸಮರ್ಥ ವಿಡಿಯೊ, ಚಿತ್ರಗಳ ಸಿಡಿಆರ್‌ ಅನ್ನು ಮಂಡಳಿ ಎದುರು ಪ್ರಸ್ತುತ ಪಡಿಸಬೇಕು’ ಎಂದು ನಿರ್ದೇಶಿಸಲಾಗಿದೆ.

ಗೂಂಡಾಕಾಯ್ದೆಯನ್ನು ಕೊನೆ ಅಸ್ತ್ರವಾಗಿ ಬಳಸುವುದು ಅವಶ್ಯ. ವೈಯಕ್ತಿಕ ಹಿತಾಸಕ್ತಿ ಅಥವಾ ಯಾರದ್ದೋ ವಿರುದ್ಧ ಜಾರಿಗೊಳಿಸುವಂತಿಲ್ಲ. ಒಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕಿನ ವಿಷಯವನ್ನೂ ಆಯಾ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ಆಯುಕ್ತರು ಗಮನದಲ್ಲಿ ಇಡುವುದು ಅವಶ್ಯ.
– ಅಲೋಕ್‌ ಮೋಹನ್‌ ರಾಜ್ಯ ಪೊಲೀಸ್‌ ಮಹಾನಿರ್ದೇಶಕ

‘ಮಾತೃಭಾಷೆಯಲ್ಲೂ ಕಾರಣ ಇರಲಿ’

ಗೂಂಡಾಕಾಯ್ದೆ ಅಡಿ ಬಂಧನದ ಆದೇಶ ಬಂಧನದ ಕಾರಣಗಳನ್ನು ಕನ್ನಡ ಇಂಗ್ಲಿಷ್‌ನಲ್ಲಿ ಒದಗಿಸಲಾಗುತ್ತಿದೆ. ಬಂಧನಕ್ಕೆ ಒಳಗಾದವರಿಗೆ ಈ ಎರಡೂ ಭಾಷೆಯನ್ನು ಓದಲು ಬರೆಯಲು ಅರ್ಥ ಮಾಡಿಕೊಳ್ಳಲು ಬಾರದಿದ್ದಲ್ಲಿ ಆರೋಪಿಯ ಮಾತೃ ಭಾಷೆಯಲ್ಲೂ ಬಂಧನಕ್ಕೆ ಕಾರಣ ತಿಳಿಸಬೇಕು ಎಂದು ವಿಜಯಪುರದ ಗೂಂಡಾಕಾಯ್ದೆ ಅಡಿ ಬಂಧನಕ್ಕೆ ಒಳಗಾದ ‘ಹುಚ್ಚಪ್ಪ’ ಅಲಿಯಾಸ್‌ ಧನರಾಜ್‌ ಪ್ರಕರಣ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT