ಶನಿವಾರ, ಮಾರ್ಚ್ 25, 2023
23 °C
ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಭಿಮತ

ನೀತಿಯಿಲ್ಲದ ಶಿಕ್ಷಣದಿಂದ ಸಮಾಜ ಅಧಃಪತನಕ್ಕೆ: ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ‘ಸಮಾಜ ಅಧಃಪತನಗೊಳ್ಳಲು ನೀತಿ ಇಲ್ಲದ ಶಿಕ್ಷಣ ಹಾಗೂ ಭೀತಿ ಇಲ್ಲದ ಶಾಸನವೇ ಕಾರಣ’ ಎಂದು ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಗರ ಗ್ರಾಮದ ಸಾಹಿತ್ಯ ಸಂಸ್ಕೃತಿ ವೇದಿಕೆ ಆಯೋಜಿಸಿದ್ದ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.

‘ಪ್ರಸಕ್ತ ಶಿಕ್ಷಣವು ಲೌಕಿಕ ಜ್ಞಾನ ಸಂಪಾದನೆಗೆ ಅನುಗುಣವಾಗಿ ರೂಪಿತ
ಗೊಂಡಿದೆ. ಶಿಕ್ಷಣವು ಪಾರಮಾರ್ಥಿಕ ಅಂತಃಸತ್ವವನ್ನೂ ಜಾಗೃತಗೊಳಿಸುವಂತಿರಬೇಕು. ನ್ಯಾಯ, ನೀತಿಗಳು ಅವಸಾನದ ಅಂಚು ತಲುಪುತ್ತಿವೆ. ಇದೊಂದು ಅಪಾಯಕಾರಿ ಬೆಳವಣಿಗೆ’ ಎಂದು ಎಚ್ಚರಿಸಿದರು.

ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ‘ದೇಹ ರಕ್ಷಣೆಗಾಗಿ ಉತ್ತಮ ಆಹಾರ ಪಡೆದುಕೊಳ್ಳುವಂತೆ, ಸ್ವಸ್ಥ ಮನಸ್ಸಿಗಾಗಿ ಆರೋಗ್ಯ ಪೂರ್ಣ ಚಿಂತನೆಗಳು ಅವಶ್ಯಕ. ಮಾತಿನ ಮೇಲೆ ನಿಗಾ ಇಡುವಂತೆ ಋಣಾತ್ಮಕ ಚಿಂತನೆಗಳ ಮೇಲೂ ಕಡಿವಾಣ ಹಾಕಬೇಕು’ ಎಂದು ಹೇಳಿದರು.

ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ, ‘ಯಾವ ವಿದ್ಯೆ ಮನುಜರನ್ನು ಚೈತನ್ಯಶೀಲರನ್ನಾಗಿ, ಶೀಲ ಸಂಪನ್ನರಾಗಿ ರೂಪಿಸುವುದಿಲ್ಲವೇ ಅದು ಶಿಕ್ಷಣವಲ್ಲ. ಪ್ರಸಕ್ತ ಶಿಕ್ಷಣವು ಮಾನವ ಜನಾಂಗವನ್ನು ಜಡತ್ವಕ್ಕೆ ದೂಡುತ್ತಿದೆ. ಕಂಪ್ಯೂಟರ್ ಮೂಲಕ ಪ್ರಪಂಚವನ್ನು ಗ್ರಹಿಸುವ ಪರಿಕ್ರಮ ಎಂದಿಗೂ ಸಾಧುವಲ್ಲ’ ಎಂದರು.

‘ಅಕ್ಷರವು ಜ್ಞಾನ ಸಂಪಾದನೆಯ ಮಾಧ್ಯಮವಾಗಿದೆ. ಅಕ್ಷರಸ್ಥ
ರೆಲ್ಲ ಜ್ಞಾನಿಗಳಾಗಲು ಸಾಧ್ಯವಿಲ್ಲ. ಅಕ್ಕಮಹಾದೇವಿ, ಅಲ್ಲಮರು ಅಕ್ಷರ ಕಲಿತವರಲ್ಲ. ಇಂದಿನ ಅಕ್ಷರಸ್ಥರು ಶಿಕ್ಷಣದ ರೂಪದಲ್ಲಿ ಅವರ ಬದುಕನ್ನು ಅರಿಯುತ್ತಿದ್ದಾರೆ’ ಎಂದು ಹೇಳಿದರು.

ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಲಂಡನ್ ಮಹಾದೇವಯ್ಯ, ‘ಬಸವ ತತ್ವಗಳನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಳಿಸಲು ಹಲವಾರು ಕಾರ್ಯಗಳನ್ನು ರೂಪಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು