ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ: ನೀರಿಗಾಗಿ ನಗರಸಭೆ ಎದುರು ಧರಣಿ

Published 22 ಮಾರ್ಚ್ 2024, 17:32 IST
Last Updated 22 ಮಾರ್ಚ್ 2024, 17:32 IST
ಅಕ್ಷರ ಗಾತ್ರ

ನೆಲಮಂಗಲ: ‘ನೀರು ಪೂರೈಕೆ ವಿಷಯವಾಗಿ ಜನರಿಗೆ ಉತ್ತರಿಸಲು ಆಗುತ್ತಿಲ್ಲ, ಪರ್ಯಾಯ ವ್ಯವಸ್ಥೆ ಕಲ್ಪಿಸಿ’ ಎಂದು ಆಗ್ರಹಿಸಿ ನಗರಸಭೆ ಸದಸ್ಯ ಎನ್‌.ಜಿ. ರವಿಕುಮಾರ್‌ ಅವರು ವಾರ್ಡ್‌ ಜನರೊಂದಿಗೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ನವೆಂಬರ್‌ ತಿಂಗಳಿನಿಂದ 9ನೇ ವಾರ್ಡ್‌ ವ್ಯಾಪ್ತಿಯ ಗಜಾರಿಯಾ ಬಡಾವಣೆ, ಬೆತ್ತನಗೆರೆ ರಸ್ತೆ, ಎಂ.ಜಿ.ರಸ್ತೆ, ವಾಜರಹಳ್ಳಿ ಸುತ್ತಮುತ್ತ ನೀರಿನ ಸಮಸ್ಯೆ ಇದೆ. ಕೊಳವೆಬಾವಿಗಳನ್ನೇ ಆಶ್ರಯಿಸಿರುವ ನಮ್ಮ ವಾರ್ಡ್‌ನಲ್ಲಿ ಬೇಕಾದಷ್ಟು ನೀರು ಇತ್ತು, ಇಲ್ಲಿನ ಕೊಳವೆಬಾವಿಗಳಿಂದ ಬೇರೆ ವಾರ್ಡ್‌ಗಳಿಗೂ ನೀರು ಪೂರೈಕೆಯಾಗುತ್ತಿತ್ತು, ಎಲ್ಲರಿಗೂ ಕೊಟ್ಟು ನಮಗೇ ನೀರು ಇಲ್ಲದಂತಾಗಿದೆ, ಇರುವ ಎಲ್ಲ ಆರು ಕೊಳವೆಬಾವಿಗಳು ಬತ್ತಿಹೋಗಿವೆ. 15 ದಿನಗಳಿಂದ ನೀರು ಬಿಟ್ಟಿಲ್ಲ, ಟ್ಯಾಂಕರ್‌ ಮೂಲಕ ಪೂರೈಸಲಾಗುತ್ತಿದೆ. ಅದು ಸಾಕಾಗುತ್ತಿಲ್ಲ’ ಎಂದು ದೂರಿದರು.

‘ಕೊಳವೆಬಾವಿಗಳಲ್ಲಿ ನೀರಿಲ್ಲ ಎಂಬುದನ್ನು ನಗರಸಭೆ ಆಯುಕ್ತರ ಗಮನಕ್ಕೆ ತಂದರೆ ಜನರನ್ನು ಸಮಾಧಾನಪಡಿಸಿ ಎಂದು ಸಲಹೆ ನೀಡುತ್ತಾರೆ. ಎಂಜಿನಿಯರ್‌ಗಳನ್ನು ಕೇಳಿದರೆ, ತಮಗೆ ಸಂಬಂಧವೇ ಇಲ್ಲದಂತೆ ಮಾತನಾಡುತ್ತಾರೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅಧಿಕಾರಿಗಳು ಪರಿಹಾರ ಕಲ್ಪಿಸಲು ಚಿಂತನೆ ನಡೆಸಬೇಕೇ ಹೊರತು ಹಾರಿಕೆ ಉತ್ತರ ಕೊಡುವುದಲ್ಲ’ ಎಂದು ಟೀಕಿಸಿದರು.

‘ನಗರಸಭೆಯವರು ಪ್ರತಿವರ್ಷ ಕಂದಾಯ ಪಡೆಯುತ್ತಾರೆ. ಕಂದಾಯ ಪಾವತಿಸಲು ತಡವಾದರೆ ಅದಕ್ಕೆ ಬಡ್ಡಿ ಹಾಕುತ್ತಾರೆ. ನೀರು ಮಾತ್ರ ಪೂರೈಸುತ್ತಿಲ್ಲ. ಸರಿಯಾಗಿ ನೀರು ಪೂರೈಕೆ ಮಾಡದೇ ಇದ್ದರೆ ಇನ್ನು ಮುಂದೆ ಕಂದಾಯ ಕಟ್ಟುವುದಿಲ್ಲ’ ಎಂದು ಗಜಾರಿಯಾ ಬಡಾವಣೆ ನಿವಾಸಿ ಅನಿತಾ ಎಚ್ಚರಿಸಿದರು.

‘ಪಟ್ಟಣ ಪಂಚಾಯಿತಿಯಿಂದ ಪುರಸಭೆ, ಪುರಸಭೆಯಿಂದ ನಗರಸಭೆ ಆಯಿತು. ಜನಸಂಖ್ಯೆ ಹೆಚ್ಚುತ್ತಲಿದೆ. ಆದರೆ, ನೀರು ಸಂಗ್ರಹಿಸುವ ಪಂಪ್‌ಹೌಸ್‌ನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಲ್ಲ. 20 ವರ್ಷಗಳಿಂದ ಯಾವುದೇ ಶಾಶ್ವತ ಪರಿಹಾರ ಕಾರ್ಯ ಕೈಗೊಂಡಿಲ್ಲ. ಕೆರೆಗಳ ಅಭಿವೃದ್ಧಿಯನ್ನೂ ಮಾಡಿಲ್ಲ’ ಎಂದು ಪುರಸಭೆ ಮಾಜಿ ಸದಸ್ಯ ಎನ್‌. ರಾಜಶೇಖರ್‌ ದೂರಿದರು.

‘ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಧರಣಿ ನಿಲ್ಲಿಸಿ’ ಎಂದು ನಗರಸಭೆ ಆಯುಕ್ತ ಮನುಕುಮಾರ್‌ ಮತ್ತು ಸಿಬ್ಬಂದಿ ಕೇಳಿಕೊಂಡರೂ ರವಿಕುಮಾರ್‌ ಮತ್ತು ನಾಗರಿಕರು ಜಗ್ಗಲಿಲ್ಲ. ‘ಪರಿಹಾರ ಕಲ್ಪಿಸುವವರೆಗೆ ಇಲ್ಲೇ ಇರುತ್ತೇವೆ’ ಎಂದು ಪಟ್ಟುಹಿಡಿದರು.

ಪಂಪ್‌ಹೌಸ್‌ನ ಏಳು ಲೈನ್‌ಗಳಲ್ಲಿ ಒಂದನ್ನು 9ನೇ ವಾರ್ಡ್‌ ಹಾಗೂ ಸುತ್ತಮುತ್ತಲ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಲೈನ್‌ಗೆ ಜೋಡಣೆ ಮಾಡಲು ಎಂಜಿನಿಯರ್‌ಗಳನ್ನು ಆಯುಕ್ತ ಮನುಕುಮಾರ್‌ ಕಳುಹಿಸಿದರು. ಬೆತ್ತನಗೆರೆ ರಸ್ತೆಯ ಖಾಸಗಿ ಕೊಳವೆಬಾವಿಯಿಂದಲೂ ಪೈಪ್‌ಲೈನ್‌ ಅಳವಡಿಸಲು ಕ್ರಮ ಕೈಗೊಂಡರು.

ಪ್ರವಾಸಿ ಮಂದಿರದ ಎದುರಿನಲ್ಲಿ ಪಂಪ್‌ಹೌಸ್‌ನ ಲೈನ್‌ಗಳಲ್ಲಿ ಒಂದನ್ನು 9ನೇ ವಾರ್ಡ್‌ ಸಂಪರ್ಕಿಸುವ ಲೈನ್‌ಗೆ ಜೋಡಣೆ ಮಾಡಲಾಯಿತು.
ಪ್ರವಾಸಿ ಮಂದಿರದ ಎದುರಿನಲ್ಲಿ ಪಂಪ್‌ಹೌಸ್‌ನ ಲೈನ್‌ಗಳಲ್ಲಿ ಒಂದನ್ನು 9ನೇ ವಾರ್ಡ್‌ ಸಂಪರ್ಕಿಸುವ ಲೈನ್‌ಗೆ ಜೋಡಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT