ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಬೆಂಗಳೂರಿಗರನ್ನು ಕಾಡುತ್ತಿರುವ ಹೊಸ ಸಮಸ್ಯೆಗಳು

ಹೂವು–ಹಣ್ಣಿನ ವ್ಯಾಪಾರದಿಂದ ಚಿಕ್ಕರಸ್ತೆಗಳಲ್ಲಿ ಸಂಚಾರ ದಟ್ಟಣೆ * ಧರ್ಮರಾಯಸ್ವಾಮಿ ವಾರ್ಡನಲ್ಲೇ ಮಟ್ಕಾ ದಂಧೆ
Last Updated 17 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಗೆ ಅತಿ ದೊಡ್ಡ ಕೊಡುಗೆ ನೀಡಿದ ಕರಗದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ, ಶತಮಾನದ ಇತಿಹಾಸವಿರುವ ಗಾಯನ ಸಮಾಜ, ಸದಾ ಗದ್ದಲದಲ್ಲಿರುವ ಕಲಾಸಿಪಾಳ್ಯ ಮಾರುಕಟ್ಟೆ ಪ್ರದೇಶ, ಪಕ್ಕದಲ್ಲೇ ಪ್ರಶಾಂತವಾಗಿರುವ ವಿಶ್ವೇಶ್ವರಪುರ... ಮುಂತಾದ ಹಲವು ವೈವಿಧ್ಯಗಳನ್ನು ಹೊಂದಿದೆ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರ. ಇತ್ತೀಚಿನ ವರ್ಷಗಳಲ್ಲಿ ಆಧುನಿಕತೆಯನ್ನೂ ಮೈಗೂಡಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಜನಸಂಖ್ಯೆ ಹೆಚ್ಚಿದಂತೆ ವ್ಯಾಪಾರಿಗಳಿಂದ ರಸ್ತೆ ಒತ್ತುವರಿ, ಎಲ್ಲೆಂದರೆಲ್ಲಿ ವಾಹನ ನಿಲುಗಡೆ, ಮಟ್ಕಾ ದಂಧೆ, ಬೀಡಾಡಿ ಹಸುಗಳ ಕಾಟ, ಕಸ ವಿಲೇವಾರಿ ಸೇರಿದಂತೆ ವಿವಿಧ ಸಮಸ್ಯೆಗಳು ಗಂಭೀರ ಸ್ವರೂಪ ತಾಳಿವೆ. ಈ ಕ್ಷೇತ್ರದ ಸುಧಾಮನಗರ, ಧರ್ಮರಾಯಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ ಹಾಗೂ ವಿಶ್ವೇಶ್ವರಪುರ ವಾರ್ಡ್‌ಗಳ ಸ್ಥಿತಿಗತಿಯನ್ನು ವರುಣ್‌ ಹೆಗಡೆ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ವಾರ್ಡ್‌ 118– ಸುಧಾಮನಗರ

ಸುಧಾಮನಗರದಲ್ಲಿ ಹಾದುಹೋಗಿರುವ ರಾಜಾಕಾಲುವೆಯಿಂದ ಹೊರಹೊಮ್ಮುವ ದುರ್ನಾತವೇ ಇಲ್ಲಿನ ನಿವಾಸಿಗಳಿಗೆ ದೊಡ್ಡ ಸಮಸ್ಯೆ. ವಾಹನ ಸವಾರರು ಕೂಡ ಇಲ್ಲಿ ಮೂಗುಮುಚ್ಚಿಕೊಂಡೇ ಸಾಗಬೇಕು. ಈ ರಾಜಕಾಲುವೆಯಿಂದಾಗಿ ರೋಗದ ಭೀತಿ ಇದೆ ಎನ್ನುತ್ತಾರೆ ಸುತ್ತಮುತ್ತಲಿನ ನಿವಾಸಿಗಳು. ರಾಜಕಾಲುವೆಯನ್ನು ಈ ಹಿಂದೆ ಸ್ವಚ್ಛಗೊಳಿಸಿದ್ದರೂ ಮತ್ತೆ ಕಸಗಳು ತುಂಬಿಕೊಂಡಿದೆ. ಜೋರು ಮಳೆ ಬಂದಾಗ ರಾಜಕಾಲುವೆ ಉಕ್ಕಿ, ಸುತ್ತಮುತ್ತಲಿನ ಅಂಗಡಿ, ಮನೆಗಳಿಗೆ ನೀರು ನುಗ್ಗುವ ಅಪಾಯವಿದೆ.

ವಾರ್ಡ್‌ ವ್ಯಾಪ್ತಿಯಲ್ಲಿ18 ಕೊಳೆಗೇರಿಗಳಿವೆ. ಸ್ಥಳದ ಸಮಸ್ಯೆಯಿಂದ ಮಕ್ಕಳಿಗೆ ಆಟದ ಮೈದಾನ ಮರೀಚಿಕೆಯಾಗಿದೆ. ‘ಕಿರಿದಾದ ರಸ್ತೆ, ಅತಿಯಾದ ಸಂಚಾರ ದಟ್ಟಣೆಯಿಂದ ಹೈರಾಣಾಗಿದ್ದೇವೆ. ವಾಯು ಮಾಲಿನ್ಯ ಸಮಸ್ಯೆಯೂ ಹೆಚ್ಚಿದೆ’ ಎಂದು ದೂರುತ್ತಾರೆ ಸ್ಥಳೀಯರು.

ರಸ್ತೆಯ ಇಕ್ಕೆಲಗಳಲ್ಲಿ ತಲೆಯೆತ್ತಿರುವಗ್ಯಾರೇಜ್‌ಗಳೂ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿವೆ. ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ, ದುರಸ್ತಿ ಮಾಡುವುದರಿಂದ ವಾಹನಗಳು ಸಾಗುವುದು ಕಷ್ಟ. ಅಡ್ಡ ರಸ್ತೆಗಳಲ್ಲಿ ಗ್ಯಾರೇಜ್ ಮಾಲೀಕರು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ವಿನೋಬಾನಗರದ ರಸ್ತೆಗಳು ಗುಂಡಿಗಳಿಂದ ಆವೃತವಾಗಿದ್ದು, ರಸ್ತೆಯುದ್ದಕ್ಕೂ ಕಸದ ರಾಶಿಗಳಿವೆ.

‘ವಾರ್ಡ್‌ನಲ್ಲಿ ಅನೇಕ ಕಸಾಯಿಖಾನೆಗಳಿವೆ. ಪ್ರಾಣಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿಯೇ ಎಸೆಯಲಾಗುತ್ತಿದೆ. ಈ ತ್ಯಾಜ್ಯಗಳನ್ನು ಬೀದಿನಾಯಿಗಳು ರಸ್ತೆಗೆ ತಂದು, ಕಚ್ಚಾಡುತ್ತವೆ’ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.

‘ಒಳಚರಂಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಮಳೆಗಾಲದಲ್ಲಿ ಅಂಗಡಿಗಳಿಗೆ ನೀರು ನುಗ್ಗುತ್ತಿದೆ. ಮಳೆಗಾಲದಲ್ಲಿ ಸದಾ ಭಯ ಆವರಿಸಿರುತ್ತದೆ. ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ವಾಹನ ಸವಾರರು ಕೂಡ ಸಮಸ್ಯೆ ಎದುರಿಸುತ್ತಾರೆ’ ಎಂದು ಸಿದ್ಧಯ್ಯ ರಸ್ತೆಯ ಅಂಗಡಿಯೊಂದರ ಮಾಲೀಕ ರಾಜೇಶ್ ತಿಳಿಸಿದರು.

ವಾರ್ಡ್‌ 119- ಧರ್ಮರಾಯ ಸ್ವಾಮಿ ದೇವಸ್ಥಾನ

ಕರಗಕ್ಕೆ ಹೆಸರುವಾಸಿಯಾದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ ರಾಜಧಾನಿ ಬೆಂಗಳೂರಿನ ವಾಣಿಜ್ಯ ಕೇಂದ್ರವೂ ಹೌದು.ಕೆ.ಆರ್‌.ಮಾರುಕಟ್ಟೆ ಹೊರತುಪಡಿಸಿ ಕಲಾಸಿಪಾಳ್ಯದ ಬಹುತೇಕ ಭಾಗವನ್ನು ಈ ವಾರ್ಡ್‌ ಹೊಂದಿದೆ. ಇಲ್ಲಿನಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ಜವಳಿ ಅಂಗಡಿಗಳು, ಆಭರಣ ಮಳಿಗೆಗಳು, ಪಾತ್ರೆ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳೂ ತಲೆಯೆತ್ತಿವೆ.ಪಾದಚಾರಿ ಮಾರ್ಗಗಳನ್ನು ಬಟ್ಟೆ, ಪ್ಲಾಸ್ಟಿಕ್ ಸಾಮಗ್ರಿ, ಮಕ್ಕಳ ಆಟಿಕೆ, ಹಣ್ಣು, ತಿಂಡಿ-ತಿನಿಸು ಮಾರಾಟ ಮಾಡುವ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.ಸರಕು ಇಳಿಸುವ ಗೂಡ್ಸ್ ಗಾಡಿಗಳು ಇಲ್ಲೇ ನಿಂತಿರುತ್ತವೆ. ಹಳ್ಳಕೊಳ್ಳಗಳಿಂದ ಕೂಡಿರುವ ಇಲ್ಲಿನ ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹರಸಾಹಸ ಪಡಬೇಕಾದ ಸ್ಥಿತಿ ಇದೆ.

ಅವೆನ್ಯೂ ರಸ್ತೆಯ ಎರಡು ಬದಿಯಲ್ಲೂ ಬಾನೆತ್ತರದ ಕಟ್ಟಡಗಳಿವೆ. ಕಿಷ್ಕಿಂದೆಯಂತಾಗಿರುವ ಇಲ್ಲಿನ ರಸ್ತೆಯಲ್ಲಿ ವ್ಯಾಪಾರಿಗಳು ಹಾಗೂ ವಾಹನಗಳ ನಡುವೆ ಸಂಚರಿಸುವುದೇ ದುಸ್ತರವಾಗಿದೆ.ಎಲೆಕ್ಟ್ರಾನಿಕ್ ವಸ್ತುಗಳಿಗೆ ಪ್ರಸಿದ್ಧಿ ಪಡೆದಿರುವ ಎಸ್.ಪಿ.ರಸ್ತೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಡಿಸ್ಪೆನ್ಸರಿ ರಸ್ತೆ ಹದಗೆಟ್ಟಿದೆ. ಈ ರಸ್ತೆ ಖಾಸಗಿ ಬಸ್‌ಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ.

‘ಕಲಾಸಿಪಾಳ್ಯದಲ್ಲಿ ಮಟ್ಕಾದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈದಂದೆ ಮುಂಜಾನೆಯಿಂದ ಸಂಜೆಯವರೆಗೆ ಕಷ್ಟಪಟ್ಟು ದುಡಿವ ಬಡವರನ್ನೇ ಗುರಿಯಾಗಿಸಿಕೊಂಡಿದೆ. ಒಂದು ರೂಪಾಯಿಗೆ ಎಂಬತ್ತು ರೂಪಾಯಿ ನೀಡುತ್ತೇವೆ ಎಂದು ಆಮಿಷವೊಡ್ಡಿ ನೂರಾರು ಜನರ ಜೀವನ ಹಾಳು ಮಾಡಲಾಗುತ್ತಿದೆ’ ಎನ್ನುವುದು ಸ್ಥಳೀಯರ ಆರೋಪ.

ಕಲಾಸಿಪಾಳ್ಯದ ವಿವಿ ರಸ್ತೆಯುದ್ದಕ್ಕೂ ಕಸದ ರಾಶಿಗಳಿಗಳದ್ದೇ ಕಾರುಬಾರು. ಜಲಕಂಟೇಶ್ವರ ದೇವಾಲಯದ ಮುಂಭಾಗದಲ್ಲೇ ಬಾರ್‌ಗಳಿವೆ. ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಂತೂ ಅವ್ಯವಸ್ಥೆಯ ಆಗರವಾಗಿದ್ದು, ಎಲ್ಲೆಂದರಲ್ಲಿ ಕೊಳೆತ ತರಕಾರಿಗಳನ್ನು ಎಸೆಯಲಾಗಿದೆ.

ವಾರ್ಡ್‌ 142– ಸುಂಕೇನಹಳ್ಳಿ

ಬೀದಿಬದಿ ವ್ಯಾಪಾರಿಗಳಿಗೆ ಮಾರುಕಟ್ಟೆ ಒದಗಿಸಿರುವ ಗಾಂಧಿಬಜಾರ್ ಇದೇ ವಾರ್ಡ್‌ನಲ್ಲಿದೆ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಣ್ಣು ಹಾಯಿಸಿದಷ್ಟು ದೂರಹೂವುಗಳು ಹಾಗೂ ಹಣ್ಣುಹಂಪಲುಗಳ ರಾಶಿ. ಕೆಲವು ಅಂಗಡಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿವೆ. ಇದರಿಂದಾಗಿ ಸಾರ್ವಜನಿಕರು ನಡೆದು ಸಾಗಲು ಸಮಸ್ಯೆ ಎದುರಿಸುವಂತಾಗಿದೆ.

ಹೂವು–ಹಣ್ಣುಗಳನ್ನು ಖರೀದಿಗೆ ಬರುವ ಕೆಲವರು ನಿಲುಗಡೆ ನಿಷೇಧಿಸಿರುವ ಸ್ಥಳದಲ್ಲಿಯೇ ವಾಹನ ನಿಲ್ಲಿಸುತ್ತಾರೆ. ಇದೇ ರಸ್ತೆಯಲ್ಲಿ ಹೋಟೆಲ್‌ಗಳು ಹಾಗೂ ಬಟ್ಟೆ ಅಂಗಡಿಗಳಿವೆ. ಹಬ್ಬಗಳ ಸಂದರ್ಭದಲ್ಲಿ ವಾಹನ ದಟ್ಟಣೆ ಇಲ್ಲಿ ಸಾಮಾನ್ಯ. ಆದರು ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗವಿಪುರಕ್ಕೆ ತೆರಳುವ ರಸ್ತೆಗಳು ಗುಂಡಿಗಳಿಂದ ಕೂಡಿವೆ. ಅದೇ ರೀತಿ, ಕೆ.ಜಿ. ನಗರದ ಟಿ.ಕೆ. ತಿಮ್ಮಯ್ಯ ರಸ್ತೆಯು ಸಂಪೂರ್ಣ ಕಿತ್ತುಹೋಗಿದ್ದು, ಇಲ್ಲಿ ದೂಳಿನ ಸಮಸ್ಯೆ ಇದೆ. ‘ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಕುಡಿಯುವ ನೀರಿನ ಸಮಸ್ಯೆ ಕಡಿಮೆ’ ಎನ್ನುವುದು ಸ್ಥಳೀಯರ ಅಭಿಮತ.

‘ಕೆಂಪಾಂಬುಧಿ ಕೆರೆಯಲ್ಲಿ ನೈರ್ಮಲ್ಯ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ.ವಿಶಾಲವಾದ ಉದ್ಯಾನವೂ ಇಲ್ಲಿದೆ. ಇದರಿಂದ ಸ್ಥಳೀಯರು ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಾಯುವಿಹಾರ ನಡೆಸಲು ಅನುಕೂಲವಾಗಿದೆ. ಆದರೆ, ಕೆಲದಿನಗಳಿಂದಬೀದಿದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ಸಂಜೆ ವೇಳೆ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಲಕ್ಷ್ಮೀಪುರದ ನಿವಾಸಿ ಸತೀಶ್ ತಿಳಿಸಿದರು.

ಕೆಂಪೇಗೌಡ ನಗರದ ಶಾರದಾದೇವಿ ರಸ್ತೆಯನ್ನು ನೀರು ಹಾಗೂ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಸಂಬಂಧ ಅಗೆಯಲಾಗಿದೆ. ರಸ್ತೆಯ ಒಂದು ಭಾಗ ವಾಹನ ನಿಲುಗಡೆ ತಾಣವಾಗಿದೆ.ಇದರಿಂದಾಗಿ ಶನೇಶ್ವರ ದೇವಾಲಯದ ಪ್ರವೇಶ ದ್ವಾರದವರೆಗಿನ ದ್ವಿಮುಖ ಸಂಚಾರ ರಸ್ತೆಯಲ್ಲಿ ವಾಹನಗಳು ಏಕಮುಖವಾಗಿ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ವಾರ್ಡ್‌ 143– ವಿ.ವಿ. ಪುರ

ಧಾರ್ವಿುಕ, ಸಾಂಸ್ಕೃತಿಕ ಹಾಗೂ ವಾಣಿಜ್ಯ ಕ್ಷೇತ್ರಗಳಿಂದ ಕೂಡಿರುವ ವಿಶ್ವೇಶ್ವರಪುರ ವಾರ್ಡ್ ಬೆಳೆದಂತೆ ಸಮಸ್ಯೆಗಳೂ ಹೆಚ್ಚುತ್ತಿವೆ.ಮಾವಳ್ಳಿ, ಬಸವನಗುಡಿ, ಪಾರ್ವತಿಪುರ, ಶಂಕರಪುರ, ಲಾಲ್‌ಬಾಗ್, ವಿಶ್ವೇಶ್ವರಪುರ, ಚಿಕ್ಕಣ್ಣ ಗಾರ್ಡನ್, ಪಟ್ಟಾಭಿರಾಮಯ್ಯ ಬಡಾವಣೆ, ನಂಜೇಗೌಡ ಬಡಾವಣೆ, ಸಿದ್ದೇಗೌಡ ಬಡಾವಣೆ, ಆರ್.ವಿ. ರಸ್ತೆಯ ಕೆಲ ಪ್ರದೇಶಗಳನ್ನು ಈ ವಾರ್ಡ್‌ ಒಳಗೊಂಡಿದೆ.ಬಸಪ್ಪ ಸರ್ಕಲ್‌ನಿಂದ ಬನಶಂಕರಿ ಬಸ್‌ ನಿಲ್ದಾಣದವರೆಗಿನ ವೈಟ್‌ಟಾಪಿಂಗ್‌ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಜನರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಇಲ್ಲಿ ಸದಾ ಸಂಚಾರ ದಟ್ಟಣೆ ಉಂಟಾಗುತ್ತಿದೆ.ವಾಹನ ಪಾರ್ಕಿಂಗ್, ಬೀಡಾಡಿ ಹಸುಗಳ ಕಾಟದಂತಹ ಸಮಸ್ಯೆಗಳೂ ಇಲ್ಲಿವೆ.

ಸಜ್ಜನರಾವ್‌ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಜನರು ನಡುರಸ್ತೆಯಲ್ಲಿಯೇ ಸಾಗಬೇಕಾಗಿದೆ. ಕೃಷ್ಣರಾವ್ ಪಾರ್ಕ್‌ಗೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗವು ಹೂವು–ಹಣ್ಣು ವ್ಯಾಪಾರಿಗಳ ಮಾರಾಟದ ತಾಣವಾಗಿದೆ. ರಸ್ತೆಯಲ್ಲಿಯೇ ಜನತೆ ಖರೀದಿಗೆ ತೊಡಗುವುದರಿಂದ ಅಪಘಾತದ ಭೀತಿ ಕೂಡ ಉಂಟಾಗಿದೆ.

ಇಲ್ಲಿರುವ ಫುಡ್‌ಸ್ಟ್ರೀಟ್‌ನಲ್ಲಿ ಸಿಗುವ ವೈವಿಧ್ಯಮಯ ಖಾದ್ಯಗಳು ಅತ್ಯಂತ ಜನಪ್ರಿಯ. ತಡರಾತ್ರಿವರೆಗೂ ಇಲ್ಲಿ ಖಾದ್ಯಗಳು ಲಭ್ಯ. ಸಾವಿರಾರು ಮಂದಿ ಖಾದ್ಯಗಳನ್ನು ಸವಿಯಲು ಇಲ್ಲಿಗೆ ಬರುತ್ತಾರೆ. ‘ಸಂಜೆಯಾಗುತ್ತಿದ್ದಂತೆ ಸಂಚಾರ ದಟ್ಟಣೆ ಹೆಚ್ಚುತ್ತದೆ. ರಾತ್ರಿ 12ಗಂಟೆಗೆ ಅಂಗಡಿಗಳ ಬಾಗಿಲು ಮುಚ್ಚುವಂತೆ ಅಧಿಕಾರಿಗಳೂ ಸೂಚಿಸಿದರೂ ಕೆಲವರು ರಾತ್ರಿ1 ಗಂಟೆವರೆಗೂ ವ್ಯಾಪಾರ ನಡೆಸುತ್ತಾರೆ. ಪೊಲೀಸರು ಮಾಮೂಲಿ ಪಡೆದು ಹೋಗುತ್ತಾರೆ. ಇದರಿಂದ ಮೊಬೈಲ್‌ಗಳ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ’ ಎನ್ನುವುದು ಸ್ಥಳೀಯರ ಆರೋಪ.

‘ಫುಡ್‌ಸ್ಟ್ರೀಟ್‌ನಲ್ಲಿ ಹೋಟೆಲ್‌ ತ್ಯಾಜ್ಯವನ್ನು ಚರಂಡಿಗಳಿಗೆ ಹಾಕಲಾಗುತ್ತಿದೆ. ಇದರಿಂದ ಸಮಸ್ಯೆ ಬಿಗಡಾಯಿಸಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ ಬಾಬು ತಿಳಿಸಿದರು.

ಪಾರ್ವತಿಪುರದಲ್ಲಿ ಬೀಡಾಡಿ ಹಸುಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕ ಸ್ಥಳದಲ್ಲಿಯೇ ಹಸುಗಳನ್ನು ಕಟ್ಟಲಾಗುತ್ತಿದೆ.

ವಾರ್ಡ್‌ಗಳ ಜನಸಂಖ್ಯೆ (2011ರ ಜನಗಣತಿ ಪ್ರಕಾರ)

– ಸುಧಾಮನಗರ –28,784

– ಧರ್ಮರಾಯ ಸ್ವಾಮಿ ದೇವಸ್ಥಾನ –27,076

– ಸುಂಕೇನಹಳ್ಳಿ – 34,666

– ವಿ.ವಿ. ಪುರ – 32,462

ವಾರ್ಡ್‌ನ ಪ್ರಮುಖ ಮೂರು ಸಮಸ್ಯೆಗಳು

* ಸುಧಾಮನಗರ

1. ಕಿರಿದಾದ ರಸ್ತೆಗಳು

2. ರಸ್ತೆಯನ್ನು ಕಬಳಿಸುವ ಗ್ಯಾರೇಜ್‌ಗಳು

3. ಅವೈಜ್ಞಾನಿಕ ರಾಜಕಾಲುವೆಗಳು

* ಧರ್ಮರಾಯಸ್ವಾಮಿ ದೇವಸ್ಥಾನ

1. ರಸ್ತೆಗಳಲ್ಲಿ ಖಾಸಗಿ ಬಸ್‌ ನಿಲುಗಡೆ

2. ಎಲ್ಲೆಂದರೆಲ್ಲಿ ಕಸದ ರಾಶಿಗಳು

3. ಮಟ್ಕಾ ದಂಧೆ

* ಸುಂಕೇನಹಳ್ಳಿ

1. ಪಾದಚಾರಿ ಮಾರ್ಗಗಳಲ್ಲಿ ಹೂವು–ಹಣ್ಣುಗಳ ಮಾರಾಟ

2. ರಸ್ತೆಗಳಲ್ಲಿ ಬೀಡಾಡಿ ಹಸುಗಳ ಓಡಾಟ

3. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ

* ವಿ.ವಿ.ಪುರ

1. ವೈಟ್‌ಟಾಪಿಂಗ್ ಕಾಮಗಾರಿ ಸ್ಥಗಿತ

2. ರಸ್ತೆಗಳಲ್ಲೇ ವ್ಯಾಪಾರ

3. ವಾಹನ ಪಾರ್ಕಿಂಗ್

ಪಾಲಿಕೆ ಸದಸ್ಯರು ಹೇಳುವುದೇನು?

‘ಶೇ 90ರಷ್ಟು ಕಾಂಕ್ರೀಟ್ ರಸ್ತೆ’

ತಂದೆ ಶಾಸಕರಾಗಿದ್ದ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು, ವಾರ್ಡ್ ಅಭಿವೃದ್ಧಿ ಮಾಡಿರುವೆ. ರಸ್ತೆಗಳು, ಒಳಚರಂಡಿಗಳು ಹಾಗೂ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಬೀದಿ ದೀಪ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸವಾಗಿದೆ. ಶೇ 90ರಷ್ಟು ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಿದ್ದೇವೆ. ಈಗಿನ ಶಾಸಕರು ಕೂಡ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದಾರೆ. ವಿನೋಬನಗರ ಸೇರಿದಂತೆ ಎರಡು ಮೂರು ಕಡೆ ಮಾತ್ರ ಮಳೆ ಬಂದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ.ಜಲಮಂಡಳಿಯಿಂದ ಹೊಸದಾಗಿ ಒಳಚರಂಡಿ ಪೈಪ್‌ಲೈನ್ ಅಳವಡಿಸಲಾಗಿದೆ.ಸಿ.ಎಸ್‌.ಐ ಪಾರ್ಕ್‌ ಮತ್ತುಆರ್‌.ವಿ. ವೆಂಕಟೇಶಪ್ಪ ಪಾರ್ಕ್‌ಗಳ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ಮೀಸಲಿಡಲಾಗಿದೆ.

– ಆರ್‌.ವಿ. ಯುವರಾಜ್,ಸುಧಾಮನಗರ ಪಾಲಿಕೆ ಸದಸ್ಯ

***

‘₹ 22 ಕೋಟಿ ಅನುದಾನ ಬಿಡುಗಡೆ’

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಂದಿರಲಿಲ್ಲ. ಈ ವರ್ಷ ಶಾಸಕರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 22 ಕೋಟಿ ಅನುದಾನ ನೀಡಿದ್ದಾರೆ. ಇನ್ನಷ್ಟು ಬೀದಿದೀಪಗಳ ಅಳವಡಿಕೆಗೆ ಟೆಂಡರ್ ಕರೆಯಲಾಗುತ್ತದೆ. ಈ ಹಿಂದೆ ಇರುವ ಅನುದಾನದಲ್ಲಿಯೇ ವಿವಿಧ ಕಾಮಗಾರಿಗಳನ್ನು ನಡೆಸಲಾಗಿತ್ತು.ಸಜ್ಜನರಾವ್‌ ವೃತ್ತ ಹಾಗೂ ಮೆಟ್ರೊ ನಿಲ್ದಾಣದ ಕೆಳಗಡೆ ಇರುವ ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಬಸಪ್ಪ ವೃತ್ತದಿಂದಬನಶಂಕರಿ ಬಸ್‌ ನಿಲ್ದಾಣದವರೆಗೆ ಹಿಂದಿನ ಸರ್ಕಾರ ಆರಂಭಿಸಿದ್ದ ವೈಟ್‌ಟಾಪಿಂಗ್‌ ಕಾಮಗಾರಿಯಿಂದ ವಾರ್ಡ್‌ ಜನತೆ ಹೈರಾಣವಾದರು.ಕಸದ ಸಮಸ್ಯೆ ಕೂಡ ಕಡಿಮೆ ಆಗುತ್ತಿದೆ.

– ವಾಣಿ ವಿ. ರಾವ್,ವಿ.ವಿ. ಪುರ ಪಾಲಿಕೆ ಸದಸ್ಯೆ

***

‘ಕಸದ ಸಮಸ್ಯೆ ನಿವಾರಣೆಗೆ ಕ್ರಮ’

ಕಳೆದ 4 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಗತ್ಯ ಅನುದಾನ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಾರ್ಡ್‌ಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತ ಸಹಕಾರ ಸಿಗುತ್ತಿದೆ. ವಾರ್ಡ್‌ನಲ್ಲಿ ರಸ್ತೆಗಳಿಗೆ ಡಾಂಬರೀಕರಣ, ಪಾದಚಾರಿ ಮಾರ್ಗಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಕೋಯಿನೂರು ಮೈದಾನದಲ್ಲಿ ಯೋಗ ಹಾಗೂ ವ್ಯಾಯಾಮ ಸಭಾಂಗಣಗಳನ್ನು ಮಾಡಲಾಗುವುದು. ಶಟಲ್‌ ಕಾಕ್‌ ಕೋರ್ಟ್‌ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗುತ್ತಿದೆ. ಬುಲೇವಾರ್ಡ್ ಪಾರ್ಕ್‌ನಲ್ಲಿಯೂ ಶೆಟಲ್‌ ಕಾಕ್‌ ಕೋರ್ಟ್‌ ನಿರ್ಮಿಸಲಾಗುತ್ತದೆ.ಬಸಪ್ಪ ಉದ್ಯಾನವನ್ನೂ ಅಭಿವೃದ್ಧಿ ಪಡಿಸಲಾಗುವುದು. ಕಸದ ಸಮಸ್ಯೆ ನಿವಾರಣೆಯಾಗುತ್ತಿದ್ದು, ಕಸ ರಾಶಿ ಹಾಕುವ 20 ಸ್ಥಳಗಳನ್ನು ಗುರುತಿಸಿ, ಕ್ರಮ ಕೈಗೊಂಡಿದ್ದೇವೆ.ಪಾರ್ಕಿಂಗ್ ಸಮಸ್ಯೆ ಇಡೀ ನಗರವನ್ನು ಕಾಡುತ್ತಿದೆ.

– ಡಿ.ಎನ್.ರಮೇಶ್,ಸುಂಕೇನಹಳ್ಳಿ ಪಾಲಿಕೆ ಸದಸ್ಯ

***

’₹ 25 ಕೋಟಿ ಅನುದಾನಕ್ಕೆ ಮನವಿ’

ಮೋತಿನಗರದ ಕಲಾಸಿಪಾಳ್ಯದಲ್ಲಿ ಬಿಬಿಎಂಪಿಯ ₹ 12 ಕೋಟಿ ಅನುದಾನದಲ್ಲಿ ಎಂ.ಎಸ್‌ ಬಿಲ್ಡಿಂಗ್ ನಿರ್ಮಿಸುತ್ತಿದ್ದು, ಕಾಮಗಾರಿ ಬಹುತೇಕ ‍ಪೂರ್ಣಗೊಂಡಿದೆ. ಆ ಕಟ್ಟಡದಲ್ಲಿ ಪ.ಜಾತಿ ಮತ್ತು ಪ.‍ಪಂಗಡದವರಿಗೆ 125 ಮನೆ ನಿರ್ಮಿಸಲಾಗಿದೆ. ಇನ್ನೂ ₹ 3ಕೋಟಿ ಅನುದಾನವನ್ನು ಶಾಸಕರಲ್ಲಿ ಕೇಳಿದ್ದೇವೆ.ಸಿಲ್ವರ್ ಜುಬ್ಲಿ ಉದ್ಯಾನವನ್ನು ₹ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕಬ್ಬನ್‌ ಪೇಟೆ ಮುಖ್ಯರಸ್ತೆಯಲ್ಲಿ ಹೊಸ ಪೈಪ್‌ಲೈನ್‌ ಅಳವಡಿಕೆ ಮಾಡಲಾಗುತ್ತಿದೆ. ಜಲಮಂಡಳಿ ಅವರಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ವಾಣಿಜ್ಯ ಪ್ರದೇಶವಾದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪಾದನೆ ಆಗುತ್ತದೆ. ಅದನ್ನೂ ನಿಯಂತ್ರಣ ಮಾಡುತ್ತಿದ್ದೇವೆ.

– ಪ್ರತಿಭಾ ಧನರಾಜ್‌, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT