ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷ: ಬೆಂಗಳೂರಿನಲ್ಲಿ ಕಾಣದ ಸಂಭ್ರಮ

ಒಲ್ಲದ ಮನಸ್ಸಿನಿಂದ ಮನೆ ಸೇರಿದ ಜನ * ರಸ್ತೆಗಳಲ್ಲಿ ಮೌನ
Last Updated 1 ಜನವರಿ 2022, 6:17 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಬಾರಿಯೂ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ ಬೆಳಕಿನ ಚಿತ್ತಾರ ಹಾಗೂ ಸಂಗೀತದ ಅಬ್ಬರಕ್ಕೆ ಸಾಕ್ಷಿಯಾಗುತ್ತಿದ್ದ ನಗರದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾನಗರದ ಪ್ರಮುಖ ರಸ್ತೆಗಳು ಶುಕ್ರವಾರ ಬಿಕೋ ಎನ್ನುತ್ತಿದ್ದವು. ಡಿ.ಜೆ. ಸದ್ದಿಗೆ ಮೈ ಕುಣಿಸಿ ನಲಿಯುತ್ತಿದ್ದ ಯುವಕ, ಯುವತಿಯರು ಕತ್ತಲೆ ಕವಿಯುತ್ತಲೇ ಒಲ್ಲದ ಮನಸ್ಸಿನಿಂದ ಮನೆಗಳತ್ತ ಹೆಜ್ಜೆ ಹಾಕಿದರು.

ಕೊರೊನಾ ರೂಪಾಂತರಿ ತಳಿ ಓಮೈಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿತ್ತು. ಡಿಸೆಂಬರ್‌ 28ರಿಂದಲೇ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದ ನಗರ ಪೊಲೀಸರು, ಇದನ್ನು ಮತ್ತಷ್ಟು ಬಿಗಿಗೊಳಿಸಿದ್ದರು. ಜನಸಂದಣಿ ನಿಯಂತ್ರಿಸುವ ಸಲುವಾಗಿ ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಿಷೇದಾಜ್ಞೆ ಜಾರಿಗೊಳಿಸಿದ್ದರು.

ಹೀಗಾಗಿ ಮಧ್ಯಾಹ್ನದಿಂದಲೇ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಇಂದಿರಾನಗರ, ಕೋರಮಂಗಲದತ್ತ ಮುಖ ಮಾಡಿದ್ದ ಯುವಕ, ಯುವತಿಯರು ಪಬ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಒಂದಷ್ಟು ಸಮಯ ಕಳೆದು ಎಂಟು ಗಂಟೆ ಹೊತ್ತಿಗೆ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು.

ಹೊಸ ವರ್ಷಾಚರಣೆಯ ಹೊತ್ತಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದ ಪೊಲೀಸರು, ಬ್ರಿಗೇಡ್‌ ರಸ್ತೆ ಸುತ್ತ ಹದ್ದಿನ ಕಣ್ಣು ನೆಟ್ಟಿದ್ದರು. ರಸ್ತೆಯಲ್ಲಿ ಓಡಾಡುವವರ ಮೇಲೆ ಸಿಸಿಟಿವಿ ಕಣ್ಗಾವಲು ಇಡಲಾಗಿತ್ತು.

‘ಪ್ರತಿ ವರ್ಷ ರಾತ್ರಿ 9 ಗಂಟೆಗೆ ಚರ್ಚ್‌ಸ್ಟ್ರೀಟ್‌ಗೆ ಬಂದು ಮುಂಜಾನೆಯವರೆಗೂ ಪಬ್‌ಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದೆವು. ರಾತ್ರಿ ಕರ್ಫ್ಯೂ ನಮ್ಮೆಲ್ಲಾ ಸಂಭ್ರಮ ಕಸಿದುಕೊಂಡಿದೆ.ಈ ಬಾರಿ ಮಧ್ಯಾಹ್ನ 3ಕ್ಕೆ ಚರ್ಚ್‌ಸ್ಟ್ರೀಟ್‌ಗೆ ಬಂದಿದ್ದೇವೆ. ರಾತ್ರಿ 9ರವರೆಗೂ ಇದ್ದು ಮನೆಗೆ ಹೋಗುತ್ತೇವೆ’ ಎಂದು ಯುವತಿಯೊಬ್ಬರು ತಿಳಿಸಿದರು.

ಎಂ.ಜಿ.ರಸ್ತೆ ಸೇರಿ ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿರುವ (ಸಿಬಿಡಿ) ಹೋಟೆಲ್‌, ಪಬ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ ಮಾಡಲು ಸಾಮರ್ಥ್ಯದ ಶೇ 50 ರಷ್ಟು ಅತಿಥಿಗಳಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಕೆಲ ಪಬ್‌ ಹಾಗೂ ರೆಸ್ಟೋರೆಂಟ್‌ಗಳು ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿದ್ದವು. ಒಳಾಂಗಣವನ್ನು ಸಿಂಗರಿಸಲಾಗಿತ್ತು.

ಯುವಕರ ವಾಗ್ವಾದ: ಪಾನಮತ್ತರಾಗಿದ್ದ ಯುವಕರು ಬ್ರಿಗೇಡ್‌ ರಸ್ತೆಯಲ್ಲಿ ವಾಗ್ವಾದ ನಡೆಸುತ್ತಿದ್ದರು.

ಬ್ಯಾರಿಕೇಡ್‌ ಹಾಕಿ ರಸ್ತೆ ಬಂದ್‌
ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾನಗರ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಜನ ಸೇರುತ್ತಾರೆ ಎಂಬುದನ್ನು ಅರಿತಿದ್ದ ಪೊಲೀಸರು ಸಂಜೆಯ ವೇಳೆಗೆ ಈ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದರು.ಹೀಗಾಗಿ ಈ ರಸ್ತೆಗಳೆಲ್ಲಾ ಬಣಗುಡುತ್ತಿದ್ದವು.

ಸಚಿವರಿಂದ ಭದ್ರತೆ ಪರಿಶೀಲನೆ: ರಾತ್ರಿ 10 ಗಂಟೆ ನಂತರ ಬ್ರಿಗೇಡ್‌ ರಸ್ತೆಗೆ ಭೇಟಿ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಭದ್ರತೆಯನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT