ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸ್‌ ಪರ ಪ್ರಚಾರ: ಮೆಹದಿ ಮಸ್ರೂರ್ ಬಿಸ್ವಾಸ್ ಅಪರಾಧ ಸಾಬೀತು

ಶಿಕ್ಷೆ ಪ್ರಮಾಣ ಕಾಯ್ದಿರಿಸಿದ ಎನ್‌ಐಎ ನ್ಯಾಯಾಲಯ
Published 18 ಜನವರಿ 2024, 22:31 IST
Last Updated 18 ಜನವರಿ 2024, 22:31 IST
ಅಕ್ಷರ ಗಾತ್ರ

ಬೆಂಗಳೂರು: ಟ್ವಿಟರ್‌ (ಈಗಿನ ‘ಎಕ್ಸ್‌’ ಖಾತೆ)ನಲ್ಲಿ ನಿಷೇಧಿತ ಸಂಘಟನೆಯಾದ ಐಸಿಸ್‌ ಪರ ಪ್ರಚಾರ ನಡೆಸುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್ (33) ಎಂಬಾತನನ್ನು ಎನ್‌ಐಎ ವಿಶೇಷ ನ್ಯಾಯಾಲಯ ದೋಷಿ ಎಂದು ಹೇಳಿದ್ದು, ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿದೆ. ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಉಗ್ರ ಸಂಘಟನೆಗೆ ಯುವಕರ ನೇಮಕ ಮಾಡುತ್ತಿದ್ದ ಆರೋಪದ ಅಡಿ ದೇಶದಲ್ಲೇ ಮೊದಲ ಬಾರಿಗೆ ಐ.ಟಿ. ಕಾಯ್ದೆ ಅಡಿ ದಾಖಲಾದ ಪ್ರಕರಣದಲ್ಲಿ 10 ವರ್ಷಗಳ ಹಿಂದೆ ಕೊಲ್ಕತ್ತದ ನಿವಾಸಿ, ಮೆಹದಿ ಮಸ್ರೂರ್ ಬಿಸ್ವಾಸ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಮೆಹದಿ, ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದ. ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2012-2014ರ ಅವಧಿಯಲ್ಲಿ ಟ್ವಿಟರ್‌ನಲ್ಲಿ ಐಸಿಸ್ ಪರ ಪ್ರಚಾರ ನಡೆಸಿ ಸಂಘಟನೆಯ ನೇಮಕಾತಿಗೆ ಪ್ರೋತ್ಸಾಹ ನೀಡುತ್ತಿದ್ದ ಎಂಬುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿತ್ತು.

‘ಶಮ್ಮಿ ವಿಟ್ನೆಸ್‌’ ಎಂಬ ಹೆಸರಿನಲ್ಲಿ ಖಾತೆ ತೆರೆದು, ಅದನ್ನು ಆತನೇ ನಿರ್ವಹಣೆ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು 2014ರ ಡಿ.13ರಂದು ಜಾಲಹಳ್ಳಿಯ ಆತನ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಬಳಿಕ, ವಿಶೇಷ ತಂಡವು ತನಿಖೆ ನಡೆಸಿ ಆತನ ವಿರುದ್ಧ 36 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು.

1.24 ಲಕ್ಷ ಟ್ವೀಟ್‌ ಮಾಡಿದ್ದ ಅಪರಾಧಿ:

ಮೆಹದಿ ಮಸ್ರೂರ್ ಬಿಸ್ವಾಸ್, ಟ್ವಿಟರ್‌ನಲ್ಲಿ 1.24 ಲಕ್ಷ ಟ್ವೀಟ್ ಮಾಡಿದ್ದ. ಅದರಲ್ಲಿ 15 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳು ಐಸಿಸ್ ಪರವಾಗಿದ್ದವು ಎಂದು ಮೂಲಗಳು ಹೇಳಿವೆ.

ಐ.ಟಿ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ(ಯುಎಪಿಎ), ಭಾರತೀಯ ದಂಡ ಸಂಹಿತೆ 121ರ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅದರಲ್ಲಿ ಐಪಿಸಿ 121 ಮತ್ತು ಐ.ಟಿ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣಗಳಲ್ಲಿ ನ್ಯಾಯಾಲಯವು ಮೆಹದಿ ಮಸ್ರೂರ್ ಬಿಸ್ವಾಸ್‌ನನ್ನು ಖುಲಾಸೆ ಮಾಡಿದೆ. ಆದರೆ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ಇತರೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ‘ತಪ್ಪಿತಸ್ಥ’ ಎಂದು ಹೇಳಿದೆ. ಗಂಗಮ್ಮನ ಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT