ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಿ ನೈಟ್‌ಲೈಫ್ ಮತ್ತೆ ಗರಿಗೆದರುವುದೇ?

ರಾತ್ರಿ ಕರ್ಫ್ಯೂ ತೆರವು: ಜನರ ಅಗತ್ಯಕ್ಕೆ ತಕ್ಕಂತೆ ಬದಲಾಗಬೇಕಿದೆ ಸಾರಿಗೆ ವ್ಯವಸ್ಥೆ
Last Updated 8 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ತಡೆಗಟ್ಟಲು ಹೇರಿದ್ದ ರಾತ್ರಿ ಕರ್ಫ್ಯೂ ಒಂದೂವರೆ ವರ್ಷದ ಬಳಿಕ ತೆರವಾಗಿದೆ. ಇದರಿಂದ ಬೆಂಗಳೂರಿನ ರಾತ್ರಿ ಜಗತ್ತು (ನೈಟ್‌ಲೈಫ್) ‌ಮತ್ತೆ ತೆರೆದುಕೊಳ್ಳುವ ತವಕದಲ್ಲಿದೆ.

ಕೋವಿಡ್‌ ಪೂರ್ವದಲ್ಲಿ ದಿನದ 24 ಗಂಟೆಯೂ ಝಗಮಗಿಸುತ್ತಿದ್ದ ಬೆಂಗಳೂರು ಕಳೆದ ಒಂದೂವರೆ ವರ್ಷದಲ್ಲಿ ಕೆಲ ತಿಂಗಳು ಸಂಪೂರ್ಣ ಸ್ತಬ್ಧವಾಗಿದ್ದರೆ, ಮತ್ತೆ ಕೆಲ ತಿಂಗಳ ಕಾಲ ರಾತ್ರಿ ಕರ್ಫ್ಯೂನಲ್ಲೇ ಸಾಗಿತ್ತು. ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕ ಈಗ ರಾತ್ರಿ ಕರ್ಫ್ಯೂ ಕೂಡ ತೆರವಾಗಿದೆ. ಇದರೆ ಜೊತೆಗೆ ಬೆಂಗಳೂರಿನ ರಾತ್ರಿ ಜೀವನ ಮತ್ತೆ ಕಳೆಗಟ್ಟುವ ದಿನಗಳಿಗೆ ಎದುರಾಗಿದೆ.

ಬೆಂಗಳೂರಿನಲ್ಲಿ ಐ.ಟಿ ಕಂಪನಿಗಳು ಹೆಚ್ಚಾಗುತ್ತಾ ಹೋದಂತೆ ಬೆಂಗಳೂರಿನ ನೈಟ್‌ಲೈಫ್ ಕೂಡ ವಿಸ್ತರಣೆಯಾಗುತ್ತ ಹೋಯಿತು. ಕೋವಿಡ್ ಪೂರ್ವದಲ್ಲಿ 1.30ರ ತನಕ ನೈಟ್‌ಲೈಫ್ ವಿಸ್ತರಣೆಯಾಗಿತ್ತು. ಅಂಗಡಿ ಮುಂಗಟ್ಟು, ಹೋಟೆಲ್‌, ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ಮಳಿಗೆಗಳು, ದಿನಸಿ ಅಂಗಡಿಗಳನ್ನೂ ವಾರದ ಏಳೂ ದಿನ, 24 ಗಂಟೆಯೂ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿತ್ತು.

ಆದರೂ, ಬಡಾವಣೆಗಳಲ್ಲಿ ಎಂದಿನಂತೆ ಗರಿಷ್ಠ 11.30ರ ತನಕ ಮಾತ್ರ ಅಂಗಡಿಗಳು ಅದರಲ್ಲಿ ಮದ್ಯದ ಅಂಗಡಿಗಳು ತೆರೆದಿರುತ್ತಿದ್ದವು. ಆದರೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಇಂದಿರಾನಗರ, ಯು.ಬಿ ಸಿಟಿ, ಎಚ್‌.ಎಸ್.ಆರ್‌. ಲೇಔಟ್‌, ಗಾಂಧಿನಗರದಲ್ಲಿನ ಹೋಟೆಲ್‌ಗಳು, ಬಾರ್, ಪಬ್‌ಗಳು, ಅದರಲ್ಲೂ ಡ್ಯಾನ್ಸ್‌ ಬಾರ್‌ಗಳು ಮಧ್ಯರಾತ್ರಿ ತನಕ ತೆರೆದಿರುತ್ತಿದ್ದವು. ಡ್ಯಾನ್ಸ್‌ಬಾರ್ ಮುಗಿಸಿಕೊಂಡು ಬರುವ ಗ್ರಾಹಕರಿಗೆ ಊಟ ಒದಗಿಸುವ ಕೆಲ ಹೋಟೆಲ್‌ಗಳು ಬೆಳಗಿನ ಜಾವ 2.30ರಿಂದ 3 ಗಂಟೆ ತನಕವೂ ತೆರೆದಿರುತ್ತಿದ್ದವು.

ಕೋವಿಡ್‌ ಮೊದಲನೇ ಲಾಕ್‌ಡೌನ್‌ (2020 ಮಾರ್ಚ್‌) ದಿನಗಳಲ್ಲಿ ಆರಂಭವಾದ ನಿರ್ಬಂಧಗಳ ಹೇರಿಕೆ, 2021ರ ನವೆಂಬರ್‌ ತನಕವೂ ಮುಂದುವರಿದೇ ಇತ್ತು. ನೈಟ್‌ ಕರ್ಫ್ಯೂ ತೆರವುಗೊಳಿಸುವ ಮೂಲಕ ಬಹುತೇಕ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದಂತಾಗಿದೆ.

ಕೋವಿಡ್ ತಂದೊಡ್ಡಿದ ನಿರುದ್ಯೋಗ, ವೇತನ ಕಡಿತದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಸವಾಲಿನ ನಡುವೆ ರಾತ್ರಿ ಜಗತ್ತಿಗೆ ಜನ ಮತ್ತೆ ತೆರೆದುಕೊಳ್ಳುವರೇ ಎಂಬ ಪ್ರಶ್ನೆ ಕೂಡ ಎದುರಾಗಿದೆ. ರಾತ್ರಿ ಕರ್ಫ್ಯೂ ತೆರವುಗೊಳಿಸಿರುವ ಸರ್ಕಾರ, ಜನರ ಅಗತ್ಯಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆಯನ್ನೂ ಬಲಗೊಳಿಸಬೇಕಿದೆ ಎನ್ನುತ್ತಾರೆ ತಜ್ಞರು.

‘ಮೆಟ್ರೊ ರೈಲು ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರ ಇಡೀ ರಾತ್ರಿ ಇಲ್ಲ. ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳನ್ನೇ ಜನ ಆಶ್ರಯಿಸಬೇಕಿದೆ. ತೈಲ ಬೆಲೆ ಏರಿಕೆ ನೆಪದಲ್ಲಿ ಪ್ರಯಾಣ ದರವನ್ನು ಎಗ್ಗಿಲ್ಲದೆ ಏರಿಕೆ ಮಾಡಲಾಗಿದೆ. ರಾತ್ರಿ ವೇಳೆಯಂತೂ ಮನಬಂದಂತೆ ದರ ನಿಗದಿ ಮಾಡಲಾಗುತ್ತದೆ. ಇವುಗಳಿಗೆ ನಿಯಂತ್ರಣವನ್ನೂ ಹೇರಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

ವಿಸ್ತರಣೆ ಆಗಬೇಕಿದೆ ಮೆಟ್ರೊ ರೈಲು ಸಮಯ

ರಾತ್ರಿ ಕರ್ಫ್ಯೂ ತೆರವುಗೊಳಿಸಿರುವ ಸರ್ಕಾರ, ಮೆಟ್ರೊ ರೈಲು ಸಂಚಾರ ಅವಧಿಯನ್ನು ವಿಸ್ತರಣೆ ಮಾಡಿಲ್ಲ. ಈ ಹಿಂದಿನಂತೆ ರಾತ್ರಿ 11 ಗಂಟೆ ವಿಸ್ತರಣೆ ಮಾಡಬೇಕು ಎಂಬ ಒತ್ತಡ ಆರಂಭವಾಗಿದೆ.

ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ರಾತ್ರಿ 9ರ ವರೆಗೆ ಮೆಟ್ರೊ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಪ್ರಯಾಣಿಕರ ಒತ್ತಾಯ ಹೆಚ್ಚಿದ ಬಳಿಕ ರೈಲು ಸೇವೆಯನ್ನು (ಸೆ.18) ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ವಿಸ್ತರಣೆ ಮಾಡಲಾಯಿತು.

ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣಗಳಿಂದ ರಾತ್ರಿ 9.30ಕ್ಕೆ ಹಾಗೂ ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ (ಮೆಜೆಸ್ಟಿಕ್‌) ರಾತ್ರಿ 10ಕ್ಕೆ ಕೊನೆಯ ರೈಲು ಹೊರಡುತ್ತಿವೆ.

ರಾತ್ರಿ ಕರ್ಫ್ಯೂ ತೆರವುಗೊಳಿಸಿರುವ ಸರ್ಕಾರ, ಮೆಟ್ರೊ ರೈಲು ಸಂಚಾರದ ಅವಧಿಯನ್ನು ಕನಿಷ್ಠ 1 ಗಂಟೆ ಅಂದರೆ ರಾತ್ರಿ 11ರ ತನಕ ವಿಸ್ತರಣೆ ಮಾಡಬೇಕು ಎಂಬುದು ಪ್ರಯಾಣಿಕರ ಒತ್ತಾಯ.

ಮಧ್ಯರಾತ್ರಿ ವರೆಗೆ ಬಸ್‌ ಸಂಚಾರ

ರಾತ್ರಿ ಕರ್ಫ್ಯೂ ಇದ್ದ ಕಾರಣ ಬಿಎಂಟಿಸಿ ಬಸ್‌ಗಳ ಸಂಚಾರ ರಾತ್ರಿ 10 ಗಂಟೆ ಮಾತ್ರ ಇತ್ತು. ಇದೀಗ ಅದನ್ನು ಕೋವಿಡ್‌ ಪೂರ್ವದಲ್ಲಿ ಇದ್ದಂತೆ ಮಧ್ಯ ರಾತ್ರಿ ವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಪೂರ್ವದಲ್ಲಿ ಕೆಲವು ಮಾರ್ಗಗಳಲ್ಲಿ ಮಧ್ಯರಾತ್ರಿ ತನಕ ಬಸ್‌ಗಳ ಕಾರ್ಯಾಚರಣೆ ಇತ್ತು. ಅವುಗಳನ್ನು ಈಗ ಮತ್ತೆ ಆರಂಭಿಸಲಾಗಿದೆ ಎಂದು ಹೇಳಿದರು.

ಎರಡನೇ ಅಲೆ ಕಡಿಮೆಯಾದ ಬಳಿಕ ನಿಧಾನವಾಗಿ ಬಿಎಂಟಿಸಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ದಿನದ ವರಮಾನ ಕೂಡ ಗಣನೀಯವಾಗಿ ಏರಿಕೆಯಾಗಿದೆ. ದಿನಕ್ಕೆ ₹3 ಕೋಟಿ ವರಮಾನ ಸಂಗ್ರಹವಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್‌ ಪೂರ್ವದಲ್ಲಿ ದಿನಕ್ಕೆ ₹3.50 ಕೋಟಿ ವರಮಾನ ಸಂಗ್ರಹವಾಗುತ್ತಿತ್ತು. ವೋಲ್ವೊ ಬಸ್‌ಗಳ ಸಂಚಾರ, ವಿಮಾನ ನಿಲ್ದಾಣ ಮಾರ್ಗದ ಕಾರ್ಯಾಚರಣೆ ಸುಸ್ಥಿರಗೊಳ್ಳಬೇಕಿದೆ ಎಂದು ತಿಳಿಸಿದರು.

‘ತಡರಾತ್ರಿಯೂ ಬಸ್ ಸಂಚಾರ ಇರಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ. ರಾತ್ರಿ 10ರ ಬಳಿಕ ಬಿಎಂಟಿಸಿ ಬಸ್‌ಗಳು ಯಾವ ರಸ್ತೆಯಲ್ಲೂ ಕಾಣಿಸುವುದಿಲ್ಲ. ದೂರದ ಊರುಗಳಿಂದ ಬಂದಿಳಿಯುವ ಪ್ರಯಾಣಿಕರು ದುಬಾರಿ ದರ ಪಾವತಿಸಿ ಆಟೋ ರಿಕ್ಷಾ ಅಥವಾ ಟ್ಯಾಕ್ಸಿಯಲ್ಲೇ ಹೋಗಬೇಕಾದ ಅನಿವಾರ್ಯತೆ ಇದೆ’ ಎಂದು ಪ್ರಯಾಣಿರಕರು ದೂರುತ್ತಾರೆ.

ಹೆಚ್ಚಬೇಕಿದೆ ಪೊಲೀಸ್ ಗಸ್ತು

ಒಂದೂವರೆ ವರ್ಷದಿಂದ ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇತ್ತು. ಈಗ ರಾತ್ರಿಯಲ್ಲೂ ಜನರ ಓಡಾಟ ಹೆಚ್ಚಾಗಬಹುದು. ಪೊಲೀಸರಿಗೆ ರಾತ್ರಿ ಗಸ್ತಿನ ಕೆಲಸ ಈಗ ಮತ್ತೆ ಹೆಚ್ಚಾಗಲಿದೆ.

ರಾತ್ರಿ ಸಂಭವಿಸಬಹುದಾದ ಗಂಭೀರವಾದ ಅಪರಾಧ ತಡೆಯಲು ಹೆಚ್ಚಿನ ಸಿದ್ಧತೆ ಮಾಡಬೇಕಿದೆ. ಪೂರ್ಣ ಪ್ರಮಾಣದ ಮೂರು ಶಿಫ್ಟ್‌ಗಳಲ್ಲಿ ಪೊಲೀಸರು ಕೆಲಸ ಮಾಡಬೇಕಾಗುತ್ತದೆ. ಗಸ್ತು ವ್ಯವಸ್ಥೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಇತರ ಸಂಪನ್ಮೂಲಗಳನ್ನು ಪೊಲೀಸ್‌ ಇಲಾಖೆ ಸಿದ್ಧ ಮಾಡಿಕೊಳ್ಳಬೇಕಿದೆ.

ತಪ್ಪಲಿದೆಯೇ ಪೊಲೀಸ್ ಕಿರಿಕಿರಿ

ರಾತ್ರಿ ಕರ್ಫ್ಯೂ ನೆಪದಲ್ಲಿ ಪೊಲೀಸರು ರಸ್ತೆ ಬದಿಯ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ನೀಡಿದ್ದ ಕಿರಿಕಿರಿ ತಪ್ಪಲಿದೆಯೇ ಎಂಬುದು ಈಗಿರುವ ಪ್ರಶ್ನೆ.

‘ರಾತ್ರಿ 10 ಗಂಟೆ ನಂತರ ಕರ್ಫ್ಯೂ ಇದ್ದರೂ 9.30ರಿಂದಲೇ ಪೊಲೀಸರ ಕಿರಿಕಿರಿ ಆರಂಭವಾಗುತ್ತಿತ್ತು. ಅವರಿಗೆ ಮಾಮೂಲಿ ನೀಡದಿದ್ದರೆ ಠಾಣೆಗೆ ಕರೆದೊಯ್ದು ಕೂರಿಸಿಕೊಳ್ಳುತ್ತಿದ್ದರು’ ಎಂದು ಮದ್ಯದ ಅಂಗಡಿ ಮಾಲೀಕರು ಆರೋಪಿಸುತ್ತಾರೆ.

‘ಬೆಂಗಳೂರಿನಲ್ಲಿ ಶೇ 95ರಷ್ಟು ಮದ್ಯದ ಅಂಗಡಿಗಳು ರಾತ್ರಿ 11.30ಕ್ಕೆ ಮುಚ್ಚುತ್ತವೆ. ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳ ಕಿರುಕುಳದ ಬಗ್ಗೆ ಅಬಕಾರಿ ಸಚಿವರಿಗೆ ಮನವಿ ನೀಡಿ ಮನವರಿಕೆ ಮಾಡಿಕೊಟ್ಟಿದ್ದೆವು. ಬಳಿಕ ಸರ್ಕಾರ ರಾತ್ರಿ ಕರ್ಫ್ಯೂ ವಾಪಸ್ ಪಡೆದಿದೆ. ಪೊಲೀಸರ ಕಿರುಕುಳ ತಪ್ಪಿದಂತಾಗಿದೆ’ ಎಂದು ಬೆಂಗಳೂರು ನಗರ ಜಿಲ್ಲೆ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದರು.

ರಾತ್ರಿ ನಂಬಿರುವ ದುಡಿಯುವ ಕೈಗಳು

ಪಬ್‌, ಕ್ಲಬ್‌, ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಬೆಂಗಳೂರಿನ ರಾತ್ರಿ ಜಗತ್ತನ್ನು ನಂಬಿಕೊಂಡಿದ್ದಾರೆ.

ಅದರಲ್ಲೂ ಡ್ಯಾನ್ಸ್‌ಬಾರ್‌ಗಳಲ್ಲಿ ಕೆಲಸ ಮಾಡುವವರಿಗೆ ಗ್ರಾಹಕರು ನೀಡುವ ಟಿಪ್ಸ್‌ ಬಿಟ್ಟರೆ ಸಂಬಳ ಎಂಬುದೇ ಇರುವುದಿಲ್ಲ. ಇದನ್ನು ನಂಬಿ ಜೀವನ ಕಟ್ಟಿಕೊಂಡಿದ್ದವರ ಪರಿಸ್ಥಿತಿ ಶೋಚನೀಯವಾಗಿತ್ತು.

ಪ್ರಮುಖ ವೃತ್ತಗಳಲ್ಲಿ ಟೀ, ಸಿಗರೇಟು ಮತ್ತು ಬನ್ ಮಾರಾಟ ಮಾಡಿಕೊಂಡೇ ಜೀವನ ನಡೆಸುವ ಜನರಿದ್ದಾರೆ. ಅಲ್ಲಲ್ಲಿ ಸೈಕಲ್ ಅಥವಾ ಸ್ಕೂಟರ್ ನಿಲ್ಲಿಸಿಕೊಂಡೇ ರಾತ್ರಿ ಇಡೀ ವ್ಯಾಪಾರ ವಹಿವಾಟು ನಡೆಸುತ್ತಾರೆ. ಒಂದೂವರೆ ವರ್ಷದಿಂದ ಅವರ ಬದುಕಿಗೆ ಕವಿದಿದ್ದ ಕಾರ್ಮೋಡ ಈಗ ಸರಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT