ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು: ಪ್ರಾಧ್ಯಾಪಕ ವಿಲಿಯಂ ಗ್ಯಾಂಜೆ

ನಾರ್ತ್ ಡಕೋಟ ಸ್ಟೇಟ್‌ ಯೂನಿರ್ವಸಿಟಿ ಪ್ರಾಧ್ಯಾಪಕ ವಿಲಿಯಂ ಗ್ಯಾಂಜೆ
Published 27 ಆಗಸ್ಟ್ 2024, 15:58 IST
Last Updated 27 ಆಗಸ್ಟ್ 2024, 15:58 IST
ಅಕ್ಷರ ಗಾತ್ರ

ಯಲಹಂಕ: ‘ಸಣ್ಣ ಮತ್ತು ಸ್ವಾರ್ಥರಹಿತ ನಡೆಯು ಇಡೀ ಜಗತ್ತನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಬಲ್ಲದು. ಯಶಸ್ಸು ಎಂದಿಗೂ ಉಡುಗೊರೆಯ ರೂಪದಲ್ಲಿ ಬರುವಂತಹದ್ದಲ್ಲ. ಅದು ಕಠಿಣ ಪರಿಶ್ರಮದಿಂದ ಮಾತ್ರ ಲಭಿಸಲು ಸಾಧ್ಯ‘ ಎಂದು ಅಮೆರಿಕಾದ ನಾರ್ತ್‌ ಡಕೋಟ ಸ್ಟೇಟ್‌ ಯೂನಿವರ್ಸಿಟಿಯ ಪ್ರಾಧ್ಯಾಪಕ ವಿಲಿಯಂ ಗ್ಯಾಂಜೆ ಅಭಿಪ್ರಾಯಪಟ್ಟರು.

ನಿಟ್ಟೆ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ನ 2022–24ನೇ ಸಾಲಿನ 14ನೇ ಪಿ.ಜಿ.ಡಿ.ಎಂ ಸ್ನಾತಕೋತ್ತರ ಪದವೀಧರರ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಶಸ್ಸು ಸಿಕ್ಕ ತಕ್ಷಣ ಅದನ್ನೇ ಅಂತಿಮ ಎಂದು ಭಾವಿಸದೆ, ವೈಫಲ್ಯವನ್ನು ಅಘಾತಕಾರಿ ಎಂದು ಪರಿಗಣಿಸದೆ, ಧೈರ್ಯದಿಂದ ಗುರಿ ತಲುಪುವುದಷ್ಟೇ ಇಲ್ಲಿ ಮುಖ್ಯವಾಗಿದೆ. ವೈಫಲ್ಯಗಳನ್ನು ಛಲದಿಂದ ನಿಭಾಯಿಸಿದಾಗ ಮಾತ್ರ ನಿಮ್ಮ ಕನಸುಗಳು ನನಸಾಗಲು ಸಾಧ್ಯ’ ಎಂದು ತಿಳಿಸಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ವಿಶಾಲ್‌ ಹೆಗ್ಡೆ ಮಾತನಾಡಿ, ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಳ್ಳುವುದಷ್ಟೇ ನಿಮ್ಮ ಗುರಿಯಾಗಬಾರದು. ನಿಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಾಳಜಿಯಿಂದ ನಿಮ್ಮದೇ ಉದ್ಯಮವನ್ನು ಸ್ಥಾಪಿಸುವಂತಾಗಬೇಕು. ಆಗ ನೀವು ಕೇವಲ ಉದ್ಯೋಗಿಗಳಾಗಿ ಉಳಿಯದೆ ಉದ್ಯೋಗಗಳ ಸೃಷ್ಟಿಕರ್ತರಾಗುತ್ತೀರಿ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 58 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಸ್ವೀಕರಿಸಿದರು. ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.

ಪಿ.ಜಿ.ಡಿ.ಎಂ ವಿತ್ತೀಯ ನಿರ್ವಹಣೆ ವಿಭಾಗದ ಪೃಥ್ವಿ, ಪ್ರತಿಷ್ಠಿತ ನಿಟ್ಟೆ ಮೀನಾಕ್ಷಿ ಸ್ಮರಣಾರ್ಥ ಚಿನ್ನದ ಪದಕ ಸ್ವೀಕರಿಸಿದರು. ಕರ್ನಲ್‌ ವೈ.ಕೆ.ಚಂದನ್‌ ಮತ್ತು ತ್ರಿದರ್ಶ್‌ ಡಿ.ಆರ್‌ ಅವರು ಜಸ್ಟಿಸ್‌ ಕೆ.ಎಸ್‌.ಹೆಗ್ಡೆ ಸ್ಮರಣಾರ್ಥ ಚಿನ್ನದ ಪದಕ ಪಡೆದರು.

ನಿಟ್ಟೆ ಮೀನಾಕ್ಷಿ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ.ಎಂ.ವೇಣುಗೋಪಾಲ್‌, ಸಂಸ್ಥೆಯ ಪರೀಕ್ಷಾ ನಿಯಂತ್ರಕ ಪ್ರೊ.ಜಿ.ಕೋಟೇಶ್ವರರಾವ್‌, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್‌ ಪೂಂಜಾ, ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್‌.ಸಿ.ನಾಗರಾಜ್‌, ಹಿರಿಯ ಮಾನವಸಂಪನ್ಮೂಲ ತಜ್ಞ ಪ್ರೊ.ಜಿ.ಗಿರಿನಾರಾಯಣ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT