ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಲ್‌ಎಸ್‌ಐಯು: ತಿದ್ದುಪಡಿ ಕೋರಿ ಕಾನೂನು ಸಚಿವರಿಗೆ ಮನವಿ

Last Updated 25 ಜನವರಿ 2023, 22:05 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ‘ (ಎನ್‌ಎಲ್‌ಎಸ್‌ಐಯು) ಕಾರ್ಯಕಾರಿ ಸಮಿತಿ ಮಂಡಳಿಯನ್ನು ಪುನರ್ ರಚಿಸಲು ಮತ್ತು ನೂತನ ಆಡಳಿತ ಮಂಡಳಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೂ ಒಳಗೊಂಡಂತೆ ನ್ಯಾಯಾಂಗ ವಲಯದ ಸ್ಥಳೀಯ ಪ್ರತಿನಿಧಿಗಳಿಗೂ ಸ್ಥಾನ ಕಲ್ಪಿಸಬೇಕು’ ಎಂದು ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರು ಆಗ್ರಹಿಸಿದ್ದಾರೆ.

ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ಹಲವು ಸದಸ್ಯರ ಸಹಿಯನ್ನು ಒಳಗೊಂಡ ಮನವಿ ಪತ್ರವನ್ನು ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರಿಗೆ ಸಲ್ಲಿಸಿದ್ದು, ‘ಈ ಸಂಬಂಧದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕಾಯ್ದೆ–1986 ಹಾಗೂ ಕರ್ನಾಟಕ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕೇವಲ ನಾಮಕಾವಸ್ತೆಯ ಪ್ರಾತಿನಿಧ್ಯ ಸಾಲದು. ಕರ್ನಾಟಕ ಮೂಲದ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿಗೂ ಪ್ರಾತಿನಿಧ್ಯ ದೊರಕುವಂತಾಗಬೇಕು. ಆದ್ದರಿಂದ, ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವ ಕುರಿತಂತೆ ಮುಂಬರುವ ಅಧಿವೇಶನದಲ್ಲಿಯೇ ಕ್ರಮ ಕೈಗೊಳ್ಳಬೇಕು‘ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

‘ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯರಿಗೆ ಶೇ 25ರಷ್ಟು ಮೀಸಲು ಕಲ್ಪಿಸಲು ಈ ಹಿಂದೆ ಶಾಸನ ರೂಪಿಸಲಾಗಿತ್ತು. ಆದರೆ, ಇದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ನಂತರ ಎನ್‌ಎಲ್‌ಎಸ್‌ಐಯು ತನ್ನ 2021ರ ವಿಸ್ತರಣಾ ಯೋಜನೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲು ನೀಡಲು ಉದ್ದೇಶಿಸಿದೆ. ಆದರೆ ಇದನ್ನು ಇನ್ನೂ ಜಾರಿಗೊಳಿಸಿಲ್ಲ‘ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT