ಗುರುವಾರ , ಡಿಸೆಂಬರ್ 3, 2020
20 °C
ಮಾಸ್ಕ್‌ ಬದಲಾಗಿ ಕರವಸ್ತ್ರ, ಬಟ್ಟೆ ಧರಿಸುವವರಿಗೆ ದಂಡ ಬೇಡ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಸೂಚನೆ

ಮಾಸ್ಕ್‌ ವಿಚಾರದಲ್ಲಿ ಸಾರ್ವಜನಿಕರೊಂದಿಗೆ ಸಂಘರ್ಷ ಬೇಡ: ಬಿಬಿಎಂಪಿ ಆಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೂಗು ಮತ್ತು ಬಾಯಿ ಯನ್ನು ಸಂಪೂರ್ಣವಾಗಿ ಮುಚ್ಚು ವಂತಹ ಯಾವುದೇ ರೀತಿಯ ಮಾಸ್ಕ್/ಕರವಸ್ತ್ರ/ಬಟ್ಟೆ ಧರಿಸುವವರಿಗೆ ದಂಡ ವಿಧಿಸಬಾರದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಮಾರ್ಷಲ್‌ಗಳಿಗೆ ಸೂಚನೆ ನೀಡಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಂಬಂಧ ಪುರಭವನದಲ್ಲಿ ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳು/ಮಾರ್ಷಲ್‌ಗಳ ಮೇಲ್ವಿಚಾರಕರ ಸಮನ್ವಯ ಸಭೆಯಲ್ಲಿ ಮಾತನಾಡಿದರು. 

‘ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಬಗ್ಗೆ ಮಾರ್ಷಲ್‌ಗಳಲ್ಲಿ ಕೆಲ ಗೊಂದಲಗಳಿತ್ತು. ಹೀಗಾಗಿ, ಆರೋಗ್ಯ ಇಲಾಖೆಯ ಸೂಚನೆ ಪ್ರಕಾರ ಪಾಲಿಕೆ ವತಿಯಿಂದ ಆದೇಶ ಹೊರಡಿಸಲಾಗಿದೆ. ಪ್ರಮುಖವಾಗಿ ಜನ ಸಂದಣಿ ಹೆಚ್ಚಿರುವ ಪ್ರದೇಶಗಳಾದ ಮಾರುಕಟ್ಟೆ, ಮಾಲ್‌ಗಳು ಹಾಗೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಹೆಚ್ಚು ಗಮನವರಿಸಿ ಅಲ್ಲಿ ದಂಡ ವಿಧಿಸಲು ಸೂಚನೆ ನೀಡಲಾಗಿದೆ’ ಎಂದರು. 

‘ಮಾಸ್ಕ್ ಹಾಗೂ ಅಂತರ ಕಾಯ್ದುಕೊಳ್ಳದೇ ಇರುವವರಿಗೆ ಮಾರ್ಷಲ್‌ಗಳು ದಂಡ ವಿಧಿಸುವ ವೇಳೆ ವಾಗ್ವಾದಗಳು ನಡೆಯುತ್ತಿದ್ದವು. ನಾಗರಿ ಕರ ಜತೆಗೆ ತಾಳ್ಮೆಯಿಂದ ವರ್ತಿಸುವಂತೆ ಸೂಚಿಸಲಾಗಿದೆ’ ಎಂದರು 

‘ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಕಡಿಮೆ ಆಗುತ್ತಿದೆ. ಸದ್ಯ ಮರಣ ಪ್ರಮಾಣ ಶೇ 1 ರಷ್ಟಿದೆ. ಆಸ್ಪತ್ರೆಗಳ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು, ಅವಶ್ಯಕತೆ ಇರುವವರಿಗೆ ಕೂಡಲೇ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದರು. 

ಹೆಚ್ಚು ಪರೀಕ್ಷೆಗಳನ್ನು ಮಾಡಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿರುವುದರಿಂದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ, ಹೊರ ವಲಯದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂಬಂಧ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದರು. 

ನಗರ ಪೊಲೀಸ್‌ ಕಮಿಷನರ್‌ ಕಮಲ್ ಪಂತ್‌ ಮಾತನಾಡಿ, ‘ಸಾರ್ವಜ ನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಹಾಗೂ ಅಂತರ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ಕಾನೂನಿನಡಿ ಸರಿಯಾಗಿ ಕೆಲಸ ಮಾಡಿ ಕೊರೊನಾ ಸೋಂಕನ್ನು ತಡೆಯಬೇಕಿದೆ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು