ಬೆಂಗಳೂರು: ಮನುಷ್ಯರಿಂದ ಸ್ವಚ್ಛಗೊಳಿಸಬೇಕಾದ ಶೌಚಗುಂಡಿಗಳ ಬಗ್ಗೆ ಕೂಡಲೇ ಸರ್ವೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಒಳಚರಂಡಿ ಸಂಪರ್ಕ ಇಲ್ಲದ ಶೌಚಗುಂಡಿಗಳ ಬಗ್ಗೆ ಸರ್ವೆ ನಡೆಸುವಂತೆ 2020ರ ಡಿಸೆಂಬರ್ 9ರಂದು ನೀಡಿದ್ದ ಆದೇಶ ಪಾಲನೆ ಆಗಿರುವ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಇನ್ನೂ ಸರ್ವೆ ಕಾರ್ಯ ನಡೆದಿಲ್ಲ ಎಂಬುದನ್ನು ಗಮನಿಸಿತು.
‘ಈ ರೀತಿಯ ಸರ್ವೆಗಳನ್ನು ತಕ್ಷಣವೇ ನಡೆಸಬೇಕಾಗುತ್ತದೆ ಮತ್ತು ನಿರ್ದಿಷ್ಟ ಸಮಯದೊಳಗೆ ಮುಗಿಸಬೇಕು. ಮನುಷ್ಯರಿಂದಲೇ ಸ್ವಚ್ಛಗೊಳಿಸಬೇಕಾದ ಎಷ್ಟು ಶೌಚಗುಂಡಿಗಳಿವೆ ಎಂಬುದು ತಿಳಿಸಿದರೆ ಅವುಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.