ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋ ಹೆಲ್ಮೆಟ್, ನೋ ಪೆಟ್ರೋಲ್’ ಅಭಿಯಾನ ಆರಂಭಕ್ಕೂ ಮುನ್ನ ಜಾಗೃತಿ

‘ನೋ ಹೆಲ್ಮೆಟ್, ನೋ ಪೆಟ್ರೋಲ್’ ಜಾರಿ ಸದ್ಯಕ್ಕಿಲ್ಲ * ಗಲಾಟೆಯಾದರೆ ಯಾರು ಹೊಣೆ; ಬಂಕ್ ಮಾಲೀಕರು
Last Updated 4 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್‌ ಇಲ್ಲ’ ಎಂಬ ಪರಿಕಲ್ಪನೆಯೊಂದಿಗೆ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ಅಭಿಯಾನ ಜಾರಿಗೆ ಸಿದ್ಧತೆ ಮಾಡಿಕೊಂಡಿದ್ದ ಸಂಚಾರ ಪೊಲೀಸರು, ಅಭಿಯಾನಕ್ಕೂ ಮುನ್ನ ಸವಾರರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

‘ಅಭಿಯಾನಕ್ಕೆ ಬಂಕ್ ಮಾಲೀಕರು ಹಾಗೂ ತೈಲ ಮಾರಾಟ ಕಂಪನಿಗಳ ಸಹಕಾರ ಬೇಕು. ದಿಢೀರ್ ಅಭಿಯಾನ ಆರಂಭಿಸಿದರೆ ತೊಂದರೆ ಆಗಲಿದೆ. ಹೀಗಾಗಿ, ಪ್ರತಿಯೊಂದು ಬಂಕ್‌ನಲ್ಲಿ ಸವಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶನಿವಾರವಷ್ಟೇ ಬಂಕ್ ಮಾಲೀಕರ ಸಭೆ ನಡೆಸಲಾಗಿದೆ. ‘ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ’ ಎಂದು ಬಂಕ್‌ಗಳಲ್ಲಿ ದ್ವಿಚಕ್ರವಾಹನ ಸವಾರರಿಗೆ ಅರಿವು ಮೂಡಿಸುವುದಾಗಿ ಮಾಲೀಕರು ಹೇಳಿದ್ದಾರೆ. ಪೊಲೀಸರೂ ಬಂಕ್‌ಗಳಿಗೆ ತೆರಳಿ ಸಹಕಾರ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಂಕ್‌ನಲ್ಲಿ ಕ್ಯಾಮೆರಾ ಅಳವಡಿಸಿ ದಂಡ ಹಾಕಿ; ಬೆಂಗಳೂರು ನಗರದಲ್ಲಿರುವ ಬಂಕ್‌ ಮಾಲೀಕರ ಸಭೆ ಕರೆದಿದ್ದ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು, ‘ಯಾರು ಹೆಲ್ಮೆಟ್ ಹಾಕಿಕೊಂಡು ಬರುವುದಿಲ್ಲವೋ ಅವರಿಗೆ ಪೆಟ್ರೋಲ್ ಹಾಕಬೇಡಿ’ ಎಂದು ಹೇಳಿ ಅಭಿಯಾನದ ಬಗ್ಗೆ ವಿವರಿಸಿದರು.

ಅಭಿಯಾನವನ್ನು ಸ್ವಾಗತಿಸಿರುವ ಮಾಲೀಕರು, ‘ಯಾವುದೇ ವಾಹನ ಬಂದರೂ ಪೆಟ್ರೋಲ್ ಹಾಗೂ ಡೀಸೆಲ್ ಹಾಕುವುದಷ್ಟೇ ನಮ್ಮ ಕಾಯಕ. ನಿಮ್ಮ (ಪೊಲೀಸರ) ಅಭಿಯಾನಕ್ಕೆ ನಮ್ಮ ಬೆಂಬಲ ಇದೆ. ಆದರೆ, ಪೆಟ್ರೋಲ್ ಹಾಕುವುದಿಲ್ಲವೆಂದು ಹೇಳಿದಾಗ ಬಂಕ್‌ ಸಿಬ್ಬಂದಿ ಜೊತೆ ಸವಾರರು ಜಗಳ ತೆಗೆದು ಹಲ್ಲೆ ಮಾಡಿದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

‘ಬಂಕ್‌ಗೆ ಬರುವ ಗ್ರಾಹಕರೆಲ್ಲರಿಗೂ ಒಂದೇ ಮನಸ್ಥಿತಿ ಇರುವುದಿಲ್ಲ. ‘ಹೆಲ್ಮೆಟ್ ಹಾಕಿಕೊಂಡು ಬಂದಿಲ್ಲ. ಪೆಟ್ರೋಲ್ ಹಾಕುವುದಿಲ್ಲ’ ಎಂದು ಹೇಳಲಾಗದು. ಇದರಿಂದ ಗಲಾಟೆಗಳು ಹೆಚ್ಚಾಗಿ, ಬಂಕ್‌ಗಳನ್ನೇ ಬಂದ್ ಮಾಡಬೇಕಾಗುತ್ತದೆ’ ಎಂದರು.‌

‘ಅಭಿಯಾನಕ್ಕೆ ಸಹಕಾರ ನೀಡುತ್ತೇವೆ. ಆದರೆ, ಹೆಲ್ಮೆಟ್ ಇಲ್ಲವೆಂದು ಗ್ರಾಹಕರನ್ನು ವಾಪಸ್ ಕಳುಹಿಸುವುದಿಲ್ಲ. ಬೇಕಾದರೆ, ನೀವೇ ಬಂಕ್‌ನಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ. ಅದಕ್ಕೆ ಬೇಕಾದ ಅಂತರ್ಜಾಲ ಹಾಗೂ ವಿದ್ಯುತ್ ಸಂಪರ್ಕವನ್ನೂ ನಾವೇ ಒದಗಿಸುತ್ತೇವೆ. ಕ್ಯಾಮೆರಾದ ನಿಯಂತ್ರಣವನ್ನು ನೀವೇ ಮಾಡಿ. ಯಾರು ಹೆಲ್ಮೆಟ್ ಹಾಕಿಕೊಂಡು ಬರುವುದಿಲ್ಲವೋ ಅವರಿಗೆ ದಂಡ ವಿಧಿಸಿ’ ಎಂದೂ ಮಾಲೀಕರು ಪೊಲೀಸರಿಗೆ ಸಲಹೆ ನೀಡಿದರು.

ಕ್ಯಾಮೆರಾ ಇದೆಯೆಂದು ಫಲಕ ಹಾಕಿ: ಸಭೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ‘ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟ’ದ ಉಪಾಧ್ಯಕ್ಷ ತಾರಾನಾಥ್, ‘ದ್ವಿಚಕ್ರ ಓಡಲು ಪೆಟ್ರೋಲ್ ಬೇಕೇ ಬೇಕು. ಬಂಕ್‌ಗೆ ಬಂದವರಿಗೆ ಪೆಟ್ರೋಲ್ ಹಾಕುವುದಿಲ್ಲವೆಂದು ಹೇಳಲು ಬರುವುದಿಲ್ಲ. ಸವಾರರಿಗೆ ಕಿರುಕುಳ ನೀಡಬೇಕೆಂದ ಮನಸ್ಸೂ ನಮಗಿಲ್ಲ’ ಎಂದರು.


‘ಕ್ಯಾಮೆರಾ ಇದೆ. ಹೆಲ್ಮೆಟ್‌ ಹಾಕಿಕೊಳ್ಳದೇ ಬಂದರೆ ದಂಡ ವಿಧಿಸಲಾಗುವುದು’ ಎಂಬ ಬಂಕ್‌ನಲ್ಲಿ ಫಲಕ ಪ್ರದರ್ಶಿಸಬೇಕು. ಆ ರೀತಿ ಮಾಡಿದರೆ, ದಂಡದ ಭಯದಲ್ಲಿ ಸವಾರರುಹೆಲ್ಮೆಟ್ ಹಾಕಿಕೊಂಡು ಬರುತ್ತಾರೆ. ಈ ಸಲಹೆಯನ್ನೂ ಪೊಲೀಸರಿಗೆ ನೀಡಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT