ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಪರ್ಯಾಯ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿಲ್ಲ: ಸಿಎಂ ಸಮರ್ಥನೆ

ಬಿಡಿಎ: ಅಕ್ರಮ ನಡೆದಿಲ್ಲ ಎಂದ ಬಸವರಾಜ ಬೊಮ್ಮಾಯಿ: 5 ವರ್ಷಗಳಲ್ಲಿ 1,428 ಬದಲಿ ನಿವೇಶನ ಹಂಚಿಕೆ
Last Updated 30 ಸೆಪ್ಟೆಂಬರ್ 2022, 5:20 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರ್ಯಾಯ ನಿವೇಶನ ಹಂಚಿಕೆ ಮಾಡಿರುವ ಉದಾಹರಣೆಗಳಿದ್ದರೂ, ‘ಯಾವುದೇ ಅಕ್ರಮ ನಡೆದಿಲ್ಲ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಧಾನಪರಿಷತ್ತಿನ ಸದಸ್ಯ ಕೆ.ಗೋವಿಂದರಾಜು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಬೊಮ್ಮಾಯಿ, ‘ಐದು ವರ್ಷಗಳಲ್ಲಿ ಒಟ್ಟಾರೆ 1,428 ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಯಾವುದೇ ಅಕ್ರಮ ಕಂಡುಬಂದಿಲ್ಲ’ ಎಂದು ತಿಳಿಸಿದ್ದಾರೆ.

ಬಿಡಿಎ ತಪ್ಪಿನಿಂದ ನಿವೇಶನ ಪಡೆದವರಿಗೆ ತೊಂದರೆಯಾಗಿದ್ದರೆ ಪರ್ಯಾಯ ನಿವೇಶನ ನೀಡಲು ಅವಕಾಶ ಇರುವ ಬಿಡಿಎ ಕಾಯ್ದೆಯ ಸೆಕ್ಷನ್ 11(ಎ) ಅನ್ನು ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ. ‘ಯಾವ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆಯೋ ಅದೇ ಬಡಾವಣೆಯಲ್ಲಿ ಅಥವಾ ನಿವೇಶನ ಹಂಚಿಕೆಯಾದ ಬಡಾವಣೆ ರಚನೆಯಾದ ನಂತರ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಲೇಔಟ್‌ಗಳಲ್ಲಿ ಮಾತ್ರ ಪರ್ಯಾಯ ನಿವೇಶನ ನೀಡಬಹುದು’ ಎಂದು ಉತ್ತರದಲ್ಲಿ ವಿವರಿಸಿದ್ದಾರೆ.

ಆರ್‌ಎಂವಿ ಲೇಔಟ್‌ 2ನೇ ಹಂತದಲ್ಲಿ ವಿತರಣೆ ಮಾಡಿರುವ ಸಂಬಂಧ ಚರ್ಚೆಯಲ್ಲಿರುವ ಏಳು ನಿವೇಶನದಾರರ ಹೆಸರು ‌ಬೊಮ್ಮಾಯಿ ಅವರು ನೀಡಿರುವ 1,428 ನಿವೇಶನಗಳ ಪಟ್ಟಿಯಲ್ಲಿ ಇಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಶಾಸಕರಾದ ಅಭಯ ಪಾಟೀಲ, ವೀರಣ್ಣ ಸಿ. ಚರಂತಿಮಠ, ಕೆಪಿಎಸ್‌ಸಿ ಮಾಜಿ ಸದಸ್ಯ ಡಾ.ಎಂ. ನಾಗರಾಜ್, ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಸಂಬಂಧಿ ಗೀತಾ ರೆಡ್ಡಿ ಹೆಸರುಗಳು ಇಲ್ಲ.

ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ 2021ರ ಅಕ್ಟೋಬರ್‌ 29ರಂದು ಆದೇಶ ನೀಡಿದೆ. ಇದಕ್ಕೆ ವಿರುದ್ಧವಾಗಿ ಏಳು ಮಂದಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ ‘ಪ್ರಜಾವಾಣಿ’ ಆಗಸ್ಟ್‌ 8ರಂದು ವರದಿ ಪ್ರಕಟಿಸಿತ್ತು. ಬಿಡಿಎ ಆಯುಕ್ತರಾಗಿದ್ದ ರಾಜೇಶ್‌ಗೌಡ ಅವರ ಎತ್ತಂಗಡಿಗೂ ಕಾರಣವಾಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಸದ್ಯ ವಿಚಾರಣೆಯೂ ನಡೆಯುತ್ತಿದೆ.

ಗೌತಮ್ ಚಂದ್ ಜೈನ್‌ಗೆ ‍ಪರ್ಯಾಯ ನಿವೇಶನ ಹಂಚಿಕೆ ಮಾಡಿರುವುದನ್ನು ಮುಖ್ಯಮಂತ್ರಿ ಅವರ 13 ಪುಟಗಳ ಉತ್ತರ ಉಲ್ಲೇಖಿಸುತ್ತದೆ. ನಿಯಮ ಉಲ್ಲಂಘಿಸಿ ಅವರಿಗೆ ಕೋರಮಂಗಲ 1ನೇ ಬ್ಲಾಕ್‌ನಲ್ಲಿ ವಸತಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಮೂಲ ಮಂಜೂರಾತಿದಾರರಲ್ಲದ ಕಾರಣ ಜೈನ್ ಅವರಿಗೆ ನಿವೇಶನ ಹಂಚಿಕೆ ಮಾಡಿರುವುದು ಅಕ್ರಮ ಎಂಬುದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ವರದಿಯಲ್ಲೂ ಉಲ್ಲೇಖವಾಗಿತ್ತು. ಸುಮಾರು 50 ವರ್ಷಗಳ ಹಿಂದೆ ಬನಶಂಕರಿ ಎರಡನೇ ಹಂತದಲ್ಲಿ ಬಿ.ಆರ್. ಶ್ರೀನಿವಾಸಮೂರ್ತಿ ಅವರಿಗೆ ಮಂಜೂರು ಮಾಡಿದ ಆಸ್ತಿಯ ನಾಲ್ಕನೇ ಖರೀದಿದಾರ ಜೈನ್ ಆಗಿದ್ದಾರೆ.

ಕೆಲವರಿಗೆ ಐಷಾರಾಮಿ ಬಡಾವಣೆಗಳಲ್ಲಿ ಬದಲಿ ನಿವೇಶನ

ಬದಲಿ ನಿವೇಶನ ಪಡೆದಿರುವ 1,428 ಮಂದಿಯಲ್ಲಿ ಬಹುತೇಕರಿಗೆ ಹೊಸದಾಗಿ ಅಭಿವೃದ್ಧಿಗೊಂಡಿರುವ ಅರ್ಕಾವತಿ, ನಾಡಪ್ರಭು ಕೆಂಪೇಗೌಡ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಿವೇಶನ ಮಂಜೂರಾಗಿತ್ತು. ಅವರಲ್ಲೇ ಕೆಲವರು ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ನಿವೇಶನ ಪಡೆದುಕೊಂಡಿದ್ದಾರೆ. ಐಷಾರಾಮಿ ಬಡಾವಣೆಗಳಾದ ಎಚ್ಎಸ್‌ಆರ್‌ ಲೇಔಟ್, ಕೋರಮಂಗಲ 4ನೇ ಬ್ಲಾಕ್, ಜೆ.ಪಿ.ನಗರದಲ್ಲೂ ಪರ್ಯಾಯ ನಿವೇಶನ ಪಡೆದವರ ಹೆಸರುಗಳು ಪಟ್ಟಿಯಲ್ಲಿವೆ. ಆದರೆ, ಅವುಗಳ ಹಂಚಿಕೆ ನ್ಯಾಯ
ಬದ್ಧವಾಗಿದೆಯೇ ಎಂಬುದನ್ನು ತಕ್ಷಣಕ್ಕೆ ಪರಿಶೀಲಿಸುವುದು ಸಾಧ್ಯವಾಗಿಲ್ಲ.

***

ಬೊಮ್ಮಾಯಿ ಅವರು ವಿಧಾನ ಪರಿಷತ್ತಿಗೆ ನೀಡಿದ ಉತ್ತರದಲ್ಲಿ ಏಳು ಬದಲಿ ನಿವೇಶನ ಹಂಚಿಕೆದಾರರ ಹೆಸರುಗಳಿಲ್ಲ. ಏಕೆಂದರೆ ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಜೈನ್ ಅವರಿಗೆ ನಿವೇಶನ ಹಂಚಿಕೆ ಅಕ್ರಮವಾಗಿದ್ದು, ಬಿಡಿಎ ಇವರಿಗೆ ಮಾರಾಟ ಕರಾರು ಮಾಡುವುದಿಲ್ಲ.

ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT