ಶುಕ್ರವಾರ, ಜನವರಿ 28, 2022
24 °C
20 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ l ನಿವೃತ್ತ ಉಪ ನಿರ್ದೇಶಕನ ವಿರುದ್ಧ ಎಫ್‌ಐಆರ್

ಕಳಪೆ ಬೆಂಚು: ಸರ್ಕಾರಕ್ಕೆ ₹ 28.66 ಲಕ್ಷ ವಂಚನೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 20 ವರ್ಷಗಳ ಹಿಂದೆ ಕಳಪೆ ಮಟ್ಟದ ಬೆಂಚುಗಳನ್ನು ಪೂರೈಸಿ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 28.66 ಲಕ್ಷ ನಷ್ಟವನ್ನುಂಟು ಮಾಡಿದ್ದ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.

ಗುತ್ತಿಗೆದಾರರ ಜೊತೆ ಸೇರಿ ಸರ್ಕಾರಕ್ಕೆ ನಂಬಿಕೆ ದ್ರೋಹ ಎಸಗಿದ್ದ ಆರೋಪದಡಿ ನಿವೃತ್ತ ಉಪನಿರ್ದೇಶಕ ಕೆ. ತೀರ್ಥಪ್ಪ, ಇತರರ ವಿರುದ್ಧ ಕಬ್ಬನ್‌ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರೋಪಿ ತೀರ್ಥಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಕೈಗಾರಿಕಾ ವಿಭಾಗದ ಖಾದಿ ಗ್ರಾಮೋದ್ಯೋಗದ ಉಪ ನಿರ್ದೇಶಕರಾಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಎಸ್‌ಎಂಎಸ್ (ಕೈಗಾರಿಕಾ ಇಲಾಖೆಯ ಅಂಗ ಸಂಸ್ಥೆ) ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಈ ಅಕ್ರಮ ನಡೆದಿರುವುದಾಗಿ ಆರೋಪಿಸಲಾಗಿದೆ.

‘ಅಕ್ರಮದ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸ್ತುತ ಉಪ ನಿರ್ದೇಶಕ (ಆರ್‌.ಐ) ಮೊಹಮ್ಮದ್ ರಫೀಕ್ ಉರ್ ರಹಮಾನ್ ದೂರು ನೀಡಿದ್ದಾರೆ. ನಂಬಿಕೆ ದ್ರೋಹ (ಐಪಿಸಿ 409) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಕೆ. ತೀರ್ಥಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಐಪಿಪಿ’ ಯೋಜನೆಯಡಿ ಅಕ್ರಮ: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆ ಹಾಗೂ ಕಚೇರಿಗಳಿಗೆ ಐಪಿಪಿ ಯೋಜನೆಯಡಿ ಸಾಗುವಾನಿ ಮರದ ಬೆಂಚುಗಳನ್ನು ಪೂರೈಸಲು 2000ರಲ್ಲಿ ಆದೇಶ ಹೊರಡಿಸಲಾಗಿತ್ತು. ಇದೇ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘ಆದೇಶ ಹೊರಡಿಸಿದ್ದ 2000– 2002ರ ಅವಧಿಯಲ್ಲಿ ಕೆ. ತೀರ್ಥಪ್ಪ ಅವರೇ ಡಿಎಸ್‌ಎಂಎಸ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಗುಣಮಟ್ಟದ ಬೆಂಚುಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ತೀರ್ಥಪ್ಪ ಅವರಿಗೆ ವಹಿಸಲಾಗಿತ್ತು.’

‘ಟೆಂಡರ್ ಪ್ರಕ್ರಿಯೆ ನಡೆಸಿದ್ದ ತೀರ್ಥಪ್ಪ, ಶಿವಮೊಗ್ಗದ ವಿನಾಯಕ್ ಇಂಡಸ್ಟ್ರೀಕಡೆಯಿಂದ 1298 ಬೆಂಚುಗಳು, ರಾಜು ಇಂಡಸ್ಟ್ರೀ ಕಡೆಯಿಂದ 702 ಬೆಂಚುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸರಬರಾಜು ಮಾಡಿಸಿದ್ದರು. ಕೆಲ ತಿಂಗಳಿನಲ್ಲೇ ಬೆಂಚುಗಳು ಹಾಳಾಗಿದ್ದವು. ಪರಿಶೀಲನೆ ನಡೆಸಿದಾಗ, ಕಳಪೆ ಮಟ್ಟದ ಬೆಂಚುಗಳು ಪೂರೈಕೆಯಾಗಿದ್ದು ಅಧಿಕಾರಿಗಳ ಗಮನಕ್ಕೆ ಬಂದಿತ್ತು’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

‘ಆಂತರಿಕ ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳ ಸಮಿತಿ, ತೀರ್ಥಪ್ಪ ಅವರೇ ತಯಾರಕರ ಜೊತೆ ಕೈಜೋಡಿಸಿ ಕಳಪೆ ಮಟ್ಟದ ಬೆಂಚುಗಳನ್ನು ಸರಬರಾಜು ಮಾಡಿಸಿದ್ದು ಗೊತ್ತಾಗಿತ್ತು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಮಿತಿ ಹೇಳಿತ್ತು. ಆರಂಭದಲ್ಲಿ ಶೇಷಾದ್ರಿಪುರ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಯಾವುದೇ ತನಿಖೆ ನಡೆದಿರಲಿಲ್ಲ. ಈಗ ಪುನಃ 20 ವರ್ಷಗಳ ನಂತರ ದೂರು ನೀಡಲಾಗಿದೆ’ ಎಂದೂ ಹೇಳಿವೆ.

ದಾಖಲೆ ಕೇಳಿದ ಪೊಲೀಸರು: ‘ವಂಚನೆ ಬಗ್ಗೆ ಎಫ್ಐಆರ್ ಮಾತ್ರ ದಾಖಲಿಸಿಕೊಳ್ಳಲಾಗಿದೆ. ಸೂಕ್ತ ದಾಖಲೆಗಳನ್ನು ನೀಡುವಂತೆ ದೂರುದಾರರನ್ನು ಕೋರಲಾಗಿದೆ. ಎಂದೂ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು