ಕೆಂಗೇರಿ: ‘ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಸರ್ಕಾರ ಭಾಷೆ, ಕಲೆ, ಸಾಹಿತ್ಯ, ಜನಪದಂತಹ ನಾಡಿನ ಅಸ್ಮಿತೆಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಬಿಡಿಗಾಸು ನೀಡಲೂ ಹಿಂದೇಟು ಹಾಕುತ್ತಿರುವುದು ದುರ್ದೈವ’ ಎಂದು ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಬೇಸರ ವ್ಯಕ್ತಪಡಿಸಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಲಾಗ್ರಾಮ ದಲ್ಲಿ ಆಯೋಜಿಸಿದ ತೃತೀಯ
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕನ್ನಡದ ಕೆಲಸಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ವಾಸ್ತವ ಹಾಗೂ ಸಮಕಾಲೀನ ವಿಷಯಗಳ ಪ್ರತಿಬಿಂಬವಾಗಿರುವ ಪುಸ್ತಕಗಳ ಖರೀದಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ’ ಎಂದು ದೂರಿದರು.
‘ವೋಟ್ ಬ್ಯಾಂಕಿಗಾಗಿ ಗಡಿ ನಾಡು ಜನರ ಭಾವನೆಗಳೊಡನೆ ಚೆಲ್ಲಾಟವಾಡುತ್ತಿರುವ ರಾಷ್ಟ್ರೀಯ ಪಕ್ಷಗಳು ಕನ್ನಡದ ಅವಗಣನೆ ಮಾಡುತ್ತಿವೆ. ಮತಕ್ಕಾಗಿ ಶಿವಾಜಿ ಪುತ್ಥಳಿಗೆ ಎರಡೆರಡು ಬಾರಿ ಉದ್ಘಾ ಟನೆ ಭಾಗ್ಯ ನೀಡುವ ರಾಜಕೀಯ ಪಕ್ಷಗಳು ಮಹಾಜನ್ ವರದಿ ಜಾರಿಗೆ ಏಕೆ ಉತ್ಸಾಹ ತೋರುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ಕ್ಷೇತ್ರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸು ವಂತೆ ಒತ್ತಾಯಿಸಿದರು.
ಕನ್ನಡ ಪ್ರೀತಿ ಅಭಿಮಾನ ಮನೆ ಯಿಂದಲೇ ಜಾಗೃತವಾಗಬೇಕು. ಅಂತಹ ವಾತಾವರಣವನ್ನು ಎಲ್ಲಾ ಕನ್ನಡಿಗರು ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.
‘ಸಂಸ್ಕೃತ ಈಗಾಗಲೇ ಮೃತಭಾಷೆಯಾಗಿದೆ. ಈ ಭಾಷೆಯ ಬೆಳವಣಿಗೆಗೆ ನೂರಾರು ಕೋಟಿ ನೀಡುವ ಕೇಂದ್ರ ಸರ್ಕಾರ, ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತ ವಾಗಿರುವ ಹಾಗೂ ಜಗತ್ತಿನ ಶ್ರೇಷ್ಠ ಭಾಷೆಗಳ ಪೈಕಿ 21ನೇ ಸ್ಥಾನ ಪಡೆದಿರುವ ಕನ್ನಡದ ಅಭಿವೃದ್ಧಿಗೆ ಪುಡಿಗಾಸು ನೀಡಲೂ ಮೀನ ಮೀಷ ಎಣಿಸುತ್ತಿದೆ’ ಎಂದು ನಾರಾಯಣಘಟ್ಟ ಆಕ್ರೋಶ ವ್ಯಕ್ತ
ಪಡಿಸಿದರು.
‘ಮಾನವೀಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಇಂದಿನ ತುರ್ತಾಗಿದೆ; ಧಾರ್ಮಿಕ ಪ್ರಜ್ಞೆ
ಯನ್ನಲ್ಲ’ ಎಂದು ತಿಳಿಸಿದರು.
ಸಾಹಿತಿ ಡಾ.ದೊಡ್ಡರಂಗೇಗೌಡ ಮಾತನಾಡಿ, ‘ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಅಧಿಕಾರಿಗೆ ಕನ್ನಡ ಭಾಷೆಯ ಅರಿವಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ‘ಆಂದೋಲನದ ಮೂಲಕ ನಮ್ಮ ಭಾಷೆ, ಸಂಸ್ಕೃತಿ ಯನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದು ಸಾಹಿತಿ ಜಾಣಗೆರೆ ವೆಂಕಟ ರಾಮಯ್ಯ ತಿಳಿಸಿದರು.
ಇದೇ ವೇಳೆ ಕಸಾಪ ರಾಜ್ಯ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರ ಕಾರ್ಯ ವೈಖರಿಗೆ ಎಲ್ಲಾ ಗಣ್ಯರಿಂದ ಭಾರಿ ವಿರೋಧ ವ್ಯಕ್ತವಾಯಿತು
ನಲ್ಲೂರು ಪ್ರಸಾದ್, ಎಸ್.ಜಿ. ಸಿದ್ದರಾಮಯ್ಯ, ಕೆ.ಎಂ.ನಾಗರಾಜ್, ಕರೀಗೌಡ ಬೀಚನಹಳ್ಳಿ, ಎ.ಪ್ರಕಾಶ್ ಮೂರ್ತಿ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಕಸಾಪ ಅಧ್ಯಕ್ಷ ಉದಂತ ಶಿವಕುಮಾರ್, ಶಿವರಾಜ್ ಬ್ಯಾಡರಹಳ್ಳಿ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.