ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕ ವ್ಯಾಪಾರ ಪಾತಾಳಕ್ಕೆ

ಪುಸ್ತಕ ವ್ಯಾಪಾರಿಗಳ ಬದುಕು ಬರಡಾಗಿಸಿದ ಕೊರೊನಾ
Last Updated 4 ಜನವರಿ 2021, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಕಾರಣದಿಂದ ಶೈಕ್ಷಣಿಕ ಸಂಸ್ಥೆಗಳು ಆನ್‌ಲೈನ್‌ ತರಗತಿಗಳ ಮೊರೆ ಹೋಗಿವೆ. ಇದರ ಪರಿಣಾಮ 9 ತಿಂಗಳುಗಳಿಂದ ನಗರದ ಅವೆನ್ಯೂ ರಸ್ತೆಯ ಪುಸ್ತಕ ಮಳಿಗೆಗಳಲ್ಲಿ ಪಠ್ಯಪುಸ್ತಕ ಮಾರಾಟ ಕುಸಿದಿದೆ. ‘ಆನ್‌ಲೈನ್‌ ಶಿಕ್ಷಣದಿಂದ ಪುಸ್ತಕಗಳು ಮೂಲೆಗುಂಪಾಗುತ್ತಿವೆ’ ಎಂದುಪುಸ್ತಕ ವ್ಯಾಪಾರಿಗಳು ಕಳವಳಗೊಂಡಿದ್ದಾರೆ.

ಕೊರೊನಾದಿಂದ ಶಾಲಾ ಕಾಲೇಜುಗಳನ್ನು ಮುಚ್ಚಲಾಯಿತು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಉದ್ದೇಶದಿಂದ ಬಹುತೇಕ ಖಾಸಗಿ ಶಾಲಾ ಕಾಲೇಜುಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿ, ಈಗಲೂ ಮುಂದುವರಿಸಿವೆ. ಸ್ಮಾರ್ಟ್‌ಫೋನ್‌ಗಳಲ್ಲೇ ತರಗತಿ ಸಾಧ್ಯವಾಗಿದ್ದು, ಪಠ್ಯಪುಸ್ತಕಗಳು ಪಿಡಿಎಫ್ ರೂಪದಲ್ಲಿ ವಿದ್ಯಾರ್ಥಿಗಳ ಸೈಸೇರಿವೆ.

ಅವೆನ್ಯೂ ರಸ್ತೆಎಲ್ಲ ರೀತಿಯ ಪುಸ್ತಕಗಳಿಗೆ ಹೆಸರುವಾಸಿ. ವಿದ್ಯಾರ್ಥಿಗಳ ಪಾಲಿಗೆ ಇದು ಪುಸ್ತಕ ಲೋಕ. ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಖರೀದಿಗೆ ಜನಜಂಗುಳಿಯಾಗುತ್ತಿದ್ದ ಇಲ್ಲಿನ ಪುಸ್ತಕ ಮಳಿಗೆಗಳು ಭಣಗುಡುತ್ತಿವೆ. ಮಳಿಗೆಗಳಲ್ಲಿ ಇರುವ ಪುಸ್ತಕಗಳು ಖರೀದಿಯಾಗದೆ, ವ್ಯಾಪಾರಿಗಳು ಕಂಗಾಲಾಗಿದ್ದಾರೆ.

‘ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದಲೇ ಪಠ್ಯಪುಸ್ತಕಗಳು ಪೂರೈಕೆಯಾಗುತ್ತವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪೋಷಕರೊಂದಿಗೆ ಬಂದು, ಅಗತ್ಯ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಆನ್‌ಲೈನ್‌ ಶಿಕ್ಷಣ ಆರಂಭಗೊಂಡ ನಂತರ ಪುಸ್ತಕಗಳನ್ನು ಕೇಳುವವರಿಲ್ಲ’ ಎಂದು ಅವೆನ್ಯೂ ರಸ್ತೆಯ ಅಂಜಲಿ ಬುಕ್ಸ್‌ ಸ್ಟೋರ್ಸ್‌ನ ಪುಸ್ತಕ ವ್ಯಾಪಾರಿ ಲಕ್ಷ್ಮಣ್‌ ಅಳಲು ತೋಡಿಕೊಂಡರು.

‘ನರ್ಸರಿಯಿಂದ ಉನ್ನತ ಶಿಕ್ಷಣದವರೆಗಿನ ಪುಸ್ತಕಗಳು ಪ್ರತಿ ವರ್ಷ ಫೆಬ್ರುವರಿಯಿಂದ ಆಗಸ್ಟ್‌ವರೆಗೆ ನಿರಂತರವಾಗಿ ಮಾರಾಟ ಆಗುತ್ತಿದ್ದವು. ಒಂಬತ್ತು ತಿಂಗಳುಗಳಿಂದ ಪುಸ್ತಕಗಳ ಮಾರಾಟ ಪಾತಾಳಕ್ಕಿಳಿದಿದೆ. ದಿನಕ್ಕೆ 150 ಮಂದಿ ಪುಸ್ತಕ ಖರೀದಿಸುತ್ತಿದ್ದರು. ಈಗ ಹೆಚ್ಚೆಂದರೆ 20 ಮಂದಿ ಬರುತ್ತಾರೆ’ ಎಂದರು.

‘ತರಗತಿ ಇದ್ದಾಗ ವಿದ್ಯಾರ್ಥಿಗಳು ತಮ್ಮ ಬಳಿ ಕಡ್ಡಾಯವಾಗಿ ಪಠ್ಯಪುಸ್ತಕ ಹೊಂದಿರುತ್ತಿದ್ದರು. ಆನ್‌ಲೈನ್‌ ತರಗತಿಗಳು ಇರುವುದರಿಂದ ಪಠ್ಯಪುಸ್ತಕಗಳ ಮೇಲೆ ಹೆಚ್ಚು ಅವಲಂಬನೆಯಾಗಿಲ್ಲ. ಇದು ಹೀಗೆಯೇ ಮುಂದುವರಿದರೆ ಪುಸ್ತಕ ವ್ಯಾಪಾರವನ್ನೇ ಅವಲಂಬಿಸಿರುವ ವ್ಯಾಪಾರಿಗಳ ಪಾಡು ಏನಾಗುತ್ತದೆಯೋ ತಿಳಿಯದು’ ಎಂದು ಕಳವಳ ವ್ಯಕ್ತಪಡಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನೂ ಕೇಳುವವರಿಲ್ಲ

ಪಠ್ಯಪುಸ್ತಕಗಳಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಪುಸ್ತಕಗಳು ಅವೆನ್ಯೂ ರಸ್ತೆಯ ಮಳಿಗೆಗಳಲ್ಲಿ ಲಭ್ಯ. ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಯಿಂದ ಹಿಡಿದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳವರೆಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಇಲ್ಲಿಂದಲೇ ಪುಸ್ತಕ ಖರೀದಿಸುತ್ತಾರೆ.

‘ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಪುಸ್ತಕ ಖರೀದಿಗೆ ಬರುತ್ತಿದ್ದರು. ಕೊರೊನಾ ಬಂದ ನಂತರ ಹೊಸ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳೂ ಮಾರಾಟ ಆಗುತ್ತಿಲ್ಲ’ ಎಂದು ಪುಸ್ತಕ ವ್ಯಾಪಾರಿ ಬಾಬು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT