ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ತಂಬಾಕು ಉತ್ಪನ್ನ: ಡಾ. ಪ್ರತಿಮಾ ಮೂರ್ತಿ

ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಕಳವಳ
Published 28 ಮೇ 2024, 16:08 IST
Last Updated 28 ಮೇ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ತಂಬಾಕು ಉತ್ಪನ್ನಗಳಿಂದ ಅಂತರ ಕಾಯ್ದುಕೊಂಡು, ಆರೋಗ್ಯಕಾರಿ ಜೀವನ ವಿಧಾನ ಅಳವಡಿಸಿಕೊಳ್ಳಬೇಕು’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ತಿಳಿಸಿದರು. 

ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ತಂಬಾಕು ಉತ್ಪನ್ನಗಳ ಸೇವನೆ ಅಭ್ಯಾಸವಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ತಂಬಾಕಿನ ದುಷ್ಪರಿಣಾಮದ ಬಗ್ಗೆ ಜಾಗೃತಿ ಹೆಚ್ಚಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಉಸಿರಾಟದ ತೊಂದರೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಲಿವೆ. ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕು ಉತ್ಪನ್ನಗಳಿಂದ ಯುವಜನರು ದೂರ ಇರಬೇಕು’ ಎಂದು ಹೇಳಿದರು. 

‘ಪರೋಕ್ಷ ಧೂಮಪಾನವೂ ನೇರ ಧೂಮಪಾನಕ್ಕೆ ಸಮಾನ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪರೋಕ್ಷ ಧೂಮಪಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ. ಕುಟುಂಬದ ಸದಸ್ಯರೊಬ್ಬರು ತಂಬಾಕು ಉತ್ಪನ್ನಗಳನ್ನು ಸೇವಿಸಿದರೆ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಆಗುತ್ತದೆ. ಒಟಿಟಿ ವೇದಿಕೆಯಂತಹ ಮನರಂಜನೆ ಮಾಧ್ಯಮಗಳು ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ಸಂದೇಶ ಪ್ರಸಾರ ಮಾಡಿ, ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು. 

‌ಮಾರ್ಗದರ್ಶನ ಅಗತ್ಯ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶಿವರಾಮು ಎಂ.ಆರ್., ‘13ರಿಂದ 15 ವರ್ಷ ಇರುವಾಗ ಮಕ್ಕಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಈ ಅವಧಿಯಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ. ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಹೊಗೆಸೊಪ್ಪು ಬೆಳೆಯುವುದನ್ನೇ ನಿಲ್ಲಿಸಲು ಸಾಧ್ಯವಿಲ್ಲ. ಇದು ಕೆಲ ಔಷಧಗಳಿಗೆ ಬಳಕೆಯಾಗುತ್ತದೆ. ಆದ್ದರಿಂದ ಹೊಗೆಸೊಪ್ಪು ಬೆಳೆಯುವ ಪ್ರದೇಶ ಕಡಿಮೆ ಮಾಡಬಹುದು’ ಎಂದು ಹೇಳಿದರು. 

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ, ‘ಶಾಲಾ–ಕಾಲೇಜುಗಳು ಕಲಿಕೆಯ ತಾಣ ಮಾತ್ರವಾಗಿರದೆ, ಜೀವನ ರೂಪಿಸುವ ತಾಣವಾಗಿವೆ. ಆದ್ದರಿಂದ ಶಿಕ್ಷಕರು ಪಠ್ಯ ಬೋಧನೆ ಜತೆಗೆ ಉತ್ತಮ ನಾಗರಿಕನನ್ನಾಗಿ ರೂಪಿಸಬೇಕು. ತಂಬಾಕು ಮುಕ್ತ ವಾತಾವರಣ ನಿರ್ಮಾಣವಾಗಬೇಕು’ ಎಂದು ತಿಳಿಸಿದರು. 

ಸಂಸ್ಥೆಯ ಮನೋವೈದ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವಿವೇಕ್ ಬೆನೆಗಲ್, ‘ವಿಶ್ವ ಆರೋಗ್ಯ ಸಂಸ್ಥೆಯ ‘ಗ್ಲೋಬ‌ಲ್ ಅಡಲ್ಟ್ ಟೊಬ್ಯಾಕೊ’ ಸಮೀಕ್ಷೆ ಪ್ರಕಾರ ದೇಶದಲ್ಲಿ ತಂಬಾಕು ಉತ್ಪನ್ನ ಸೇವಿಸುವ ಯುವಜನರ ಪ್ರಮಾಣ ಕಡಿಮೆಯಾಗಿದೆ. ಶಾಲಾ–ಕಾಲೇಜುಗಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡುತ್ತಿದೆ’ ಎಂದರು. 

ಬಳಿಕ ತಂಬಾಕ ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳು ಹಾಗೂ ತಡೆಗೆ ಕೈಗೊಳ್ಳಬೇಕಾದ ಚರ್ಚೆಗಳು ನಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT