ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ವೇಳೆ ಹೆಚ್ಚುತ್ತಿದೆ ಶಬ್ದ ಮಾಲಿನ್ಯ

ವಾಹನ ದಟ್ಟಣೆ ಪ್ರದೇಶಗಳನ್ನು ವಿಶ್ಲೇಷಣೆಗೆ ಒಳಪಡಿಸಲಿದೆ ಕೆಎಸ್‌ಪಿಸಿಬಿ
Last Updated 22 ನವೆಂಬರ್ 2019, 2:07 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ಕಾಮಗಾರಿ, ವಾಹನ ದಟ್ಟಣೆಯಿಂದ ನಗರದಲ್ಲಿ ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಹಗಲಿಗಿಂತ ರಾತ್ರಿ ವೇಳೆ ಶಬ್ದದ ಪ್ರಮಾಣ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ನಗರದಲ್ಲಿ 80 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿದ್ದು, ವಿವಿಧ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ವಾಯುಮಾಲಿನ್ಯದ ಜತೆ ಜತೆಗೆ ಶಬ್ದ ಮಾಲಿನ್ಯಕ್ಕೂ ವಾಹನಗಳು ಕಾರಣವಾಗುತ್ತಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ಇನ್ನೊಂದೆಡೆ, ನಮ್ಮ ಮೆಟ್ರೊ ಎರಡನೇ ಹಂತದ ಕಾಮಗಾರಿ ನಡೆಯು ತ್ತಿದ್ದು, ಇದರಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ರಾತ್ರಿ ವೇಳೆ ಶಬ್ದ ಉಂಟಾಗುತ್ತಿದೆ. ಕಟ್ಟಡ ನಿರ್ಮಾಣ ಚಟುವಟಿಕೆ, ಡೀಸೆಲ್ ಜನರೇಟರ್‌ಗಳ ಬಳಕೆ, ಕೈಗಾರಿಕಾ ಚಟುವಟಿಕೆ ಹಾಗೂ ಧ್ವನಿವರ್ಧಕ ಬಳಕೆ ಕೂಡಾ ಶಬ್ದ ಮಾಲಿನ್ಯದ ಪ್ರಮಾಣ ಏರಿಕೆಯಾಗಲು ಪ್ರಮುಖ ಕಾರಣಗಳಾಗಿವೆ.

ಹಗಲಿಗೆ ಹೋಲಿಕೆ ಮಾಡಿದಲ್ಲಿ ರಾತ್ರಿ ಅವಧಿಯಲ್ಲಿ ಸಹಜವಾಗಿಯೇ ಶಬ್ದದ ಪ್ರಮಾಣ ಕಡಿಮೆ ಇದೆ. ಆದರೆ, ಹೆಚ್ಚಳದ ಪ್ರಮಾಣದಲ್ಲಿ ರಾತ್ರಿ ಅವಧಿಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.

ನಿಮ್ಹಾನ್ಸ್‌ ಸುತ್ತಮುತ್ತ ಕೆಲ ದಿನ ಹಗಲಿನ ವೇಳೆ ಶೇ 38ರವರೆಗೆ ಡೆಸಿಬಲ್ಸ್‌ ಏರಿಕೆಯಾಗುತ್ತಿದ್ದರೆ, ರಾತ್ರಿ ವೇಳೆ ಶೇ 65ರಷ್ಟು ಹೆಚ್ಚಳವಾಗುತ್ತಿದೆ. ಅದೇ ರೀತಿ,ಮೈಸೂರು ರಸ್ತೆಯಲ್ಲಿ ಹಗಲಿನ ವೇಳೆ ಶೇ 15 ರಷ್ಟು ಹಾಗೂ ರಾತ್ರಿ ವೇಳೆ ಶೇ 30 ರಷ್ಟು ಹೆಚ್ಚಾಗುತ್ತಿದೆ. ದೊಮ್ಮಲೂರು ವಸತಿ ಪ್ರದೇಶ, ಬಿಟಿಎಂ ಬಡಾವಣೆ, ವೈಟ್‌ಫೀಲ್ಡ್, ಮಾರತಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ರಾತ್ರಿ ಅವಧಿಯಲ್ಲಿ ಶಬ್ದಮಾಲಿನ್ಯ ಪ್ರಮಾಣದಲ್ಲಿ
ಹೆಚ್ಚಳವಾಗುತ್ತಿರುವುದು ಬೆಳಕಿಗೆ ಬಂದಿದೆ.ವೈಟ್‌ಫೀಲ್ಡ್‌, ಮಾರತಹಳ್ಳಿಯಲ್ಲಿ ಕೆಲದಿನಗಳು ರಾತ್ರಿವೇಳೆ ಶಬ್ದದ ಪ್ರಮಾಣ 100 ಡೆಸಿಬಲ್ಸ್ ದಾಟುತ್ತಿದೆ.

ಈ ಹಿಂದೆಆಟೊ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳಿಂದಲೇ ಹೆಚ್ಚು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರು ಕೇಳಿಬಂದಿದ್ದರಿಂದ ಹಾರ್ನ್‌ ಸೌಲಭ್ಯವನ್ನು ತೆಗೆದುಹಾಕಲು ಮಂಡಳಿ ಸಾರಿಗೆ ಇಲಾಖೆಗೆ ಸಲಹೆಯನ್ನು ನೀಡಿತ್ತು. ‌ಶಬ್ದ ಮಾಲಿನ್ಯಕ್ಕೆ 125 ಡೆಸಿಬಲ್ಸ್ ಪ್ರಮಾಣವನ್ನು ನಿಗದಿಪಡಿಸಲಾಗಿದ್ದು, ಈ ಪ್ರಮಾಣವನ್ನು ದಾಟಿದರೆ ಅದನ್ನು ಅತೀ ಹೆಚ್ಚು ಶಬ್ದ ಮಾಲಿನ್ಯ ಎಂದು ಗುರುತಿಸಲಾಗುತ್ತದೆ.

ಶ್ರವಣದೋಷ ಸಮಸ್ಯೆ: ‘ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕ ಪ್ರಮಾಣದಲ್ಲಿ ಇದ್ದು, ಆ ಭಾಗಗಳಲ್ಲಿ ಶಬ್ದಮಾಲಿನ್ಯಕ್ಕೆ ವಾಹನದಟ್ಟಣೆ ಪ್ರಮುಖ ಕಾರಣವಾಗಿದೆ. ಅದೇ ರೀತಿ, ನಗರದಲ್ಲಿ ಸಂಚರಿಸುತ್ತಿರುವ 2 ಸ್ಟ್ರೋಕ್ಆಟೊ ರಿಕ್ಷಾ ಕೂಡಾ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ’ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

‘ವಾಯುಮಾಲಿನ್ಯದ ನಿವಾರಣೆಗೆ ಕ್ರಮ ಕೈಗೊಳ್ಳುವ ಜತೆಗೆ ಶಬ್ದ ಮಾಲಿನ್ಯಕ್ಕೆ ಕೂಡಾ ನಿಯಂತ್ರಣ ಹಾಕಬೇಕಿದೆ.ಶಬ್ದ ಮಾಲಿನ್ಯ ಇರುವ ಪ್ರದೇಶಗಳಲ್ಲಿ ಶ್ರವಣದೋಷದಂತಹ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಹಾಗಾಗಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಬಸವರಾಜ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT