ಮಂಗಳವಾರ, ಸೆಪ್ಟೆಂಬರ್ 21, 2021
23 °C
ನಾಡಪ್ರಭು ಕೆಂಪೇಗೌಡ ಬಡಾವಣೆ –ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ

2021ರೊಳಗೆ ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಕಾಮಗಾರಿ ಪೂರ್ಣ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ಮೂಲಸೌಕರ್ಯಗಳನ್ನು 2021ರ ಡಿಸೆಂಬರ್‌ ಒಳಗೆ ಕಲ್ಪಿಸುವುದಾಗಿ ಭರವಸೆ ನೀಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ರಸ್ತೆ ಕಾಮಗಾರಿಗಳನ್ನು ಚುರುಕುಗೊಳಿಸಲು ಮುಂದಾಗಿದೆ.

ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ ಬಿಡಿಎಗೆ ಮೂಲೆ ನಿವೇಶನಗಳ ಹರಾಜಿನಿಂದ ವರಮಾನ ಬರುತ್ತಿದೆ. ಇದನ್ನು ಬಳಸಿ ನಾಡಪ್ರಭು ಬಡಾವಣೆಯ ಮೂಲಸೌಕರ್ಯ ಕಾಮಗಾರಿ ಚುರುಕುಗೊಳಿಸಲು ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲು ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಿಡಿಎ ತೀರ್ಮಾನ ಕೈಗೊಂಡಿದೆ.

ಮೊದಲ ಹಂತದಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ 2018ರ ಒಳಗೆ ಮೂಲಸೌಕರ್ಯ ಕಲ್ಪಿಸುವುದಾಗಿ ಬಿಡಿಎ ಹೇಳಿತ್ತು. ಈ ಗಡುವಿನೊಳಗೆ ಮೂಲಸೌಕರ್ಯ ಕಲ್ಪಿಸದೇ ಇರುವುದನ್ನು ಪ್ರಶ್ನೆ ಮಾಡಿ ನಿವೇಶನದಾರರು ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಮೊರೆ ಹೋಗಿದ್ದರು. ಆಗ ಗಡುವನ್ನು ಪರಿಷ್ಕರಿಸಿದ್ದ ಪ್ರಾಧಿಕಾರ 2021 ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯದ ಬಗ್ಗೆ ನಿವೇಶನದಾರರು ರೇರಾ ಬಳಿ ದೂರಿದ್ದರು. ಈ ಕುರಿತು ಪ್ರಾಧಿಕಾರವನ್ನು ರೇರಾ ತರಾಟೆಗೆ ತೆಗೆದುಕೊಂಡಿತ್ತು.

‘ಪ್ರಮುಖ ರಸ್ತೆಗಳ ಕಾಮಗಾರಿಯನ್ನು ಮೊದಲು ಕೈಗೆತ್ತಿಕೊಂಡಿದ್ದೇವೆ. ಬಡಾವಣೆಯಲ್ಲಿ ಕುಡಿಯುವ ನೀರು ಪೂರೈಕೆ ಕೊಳವೆಗಳು ಹಾಗೂ ಒಳಚರಂಡಿ ಅಳವಡಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅವು ಮುಗಿದ ಬಳಿಕವೇ ಬಡಾವಣೆ ನಿವೇಶನಗಳನ್ನು ಸಂಪರ್ಕಿಸುವ ಒಳ ರಸ್ತೆಗಳನ್ನು ಕೈಗೊಳ್ಳಲು ಬಿಡಿಎ ನಿರ್ಧರಿಸಿತ್ತು. ಹಾಗಾಗಿ ಬಹುತೇಕ ಕಡೆ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಈಗ ರೇರಾಕ್ಕೆ ತಿಳಿಸಿದ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿರುವುದರಿಂದ ಎಲ್ಲ ರಸ್ತೆ ಕಾಮಗಾರಿಗಳನ್ನೂ ಶೀಘ್ರವೇ ಕೈಗೆತ್ತಿಕೊಳ್ಳಲಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ನಿವೇಶನದ ಪೂರ್ತಿ ಶುಲ್ಕವನ್ನು ಕಟ್ಟಿದ್ದೇವೆ. ಇದಕ್ಕಾಗಿ ಬಹುತೇಕ ನಿವೇಶನದಾರರು ಬ್ಯಾಂಕ್‌ಗಳಲ್ಲಿ ಗೃಹ ಸಾಲ ಪಡೆದಿದ್ದಾರೆ. ಮನೆ ಕಟ್ಟಲು ಬ್ಯಾಂಕ್‌ಗಳು ಗರಿಷ್ಠ 36 ತಿಂಗಳುಗಳ ಕಾಲಾವಕಾಶ ನೀಡಿದ್ದವು. ಈಗ ಆ ಅವಧಿಯೂ ಮುಗಿದಿದೆ. ಮನೆ ಕಟ್ಟದಿದ್ದರೆ ಗೃಹಸಾಲವನ್ನು ವಾಣಿಜ್ಯ ಸಾಲವೆಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಬಡ್ಡಿ ಹೆಚ್ಚಿಸುವ ಅಧಿಕಾರ ಬ್ಯಾಂಕ್‌ಗಳಿಗೆ ಇದೆ. ಈಗಾಗಲೇ ಕೆಲವು ಬ್ಯಾಂಕ್‌ಗಳು ನಿವೇಶನದಾರರಿಗೆ ನೋಟಿಸ್‌ ಜಾರಿ ಮಾಡಿವೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ವಕ್ತಾರ ಎ.ಎಸ್‌.ಸೂರ್ಯಕಿರಣ್‌ ವಿವರಿಸಿದರು.

‘ಮನೆ ನಿರ್ಮಾಣಕ್ಕೆ ಸಾಲ ಪಡೆದ ಅನೇಕರು ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಅವರು ಸಾಲದ ಕಂತು ಹಾಗೂ ಮನೆ ಬಾಡಿಗೆಗಳೆರಡರ ವೆಚ್ಚವನ್ನೂ ನಿಭಾಯಿಸಬೇಕಾಗಿದೆ. ಹಾಗಾಗಿ ಮೂಲಸೌಕರ್ಯವನ್ನು ಬೇಗ ಒದಗಿಸಿದಷ್ಟೂ ನಿವೇಶನದಾರರಿಗೆ ಅನುಕೂಲ’ ಎಂದರು.

‘ಈ ಬಡಾವಣೆಯ ನಿವೇಶನದಾರರಿಂದ ಪಡೆದ ಶುಲ್ಕವನ್ನು ಬಿಡಿಎ ಅನ್ಯ ಉದ್ದೇಶಕ್ಕೆ ಬಳಸಿದೆ. ಮೂಲಸೌಕರ್ಯ ಒದಗಿಸುವ ಕಾಮಗಾರಿಯ ಗುತ್ತಿಗೆ ಪಡೆದ ಸಂಸ್ಥೆಗಳೂ ಭಾರಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಸಂಸ್ಥೆಗಳು ಕಾಮಗಾರಿ ಚುರುಕುಗೊಳಿಸಲು ಹಿಂದೇಟು ಹಾಕುತ್ತಿವೆ. ಬಡಾವಣೆಯಲ್ಲಿ ನಿವೇಶನಗಳನ್ನು ಸಂಪರ್ಕಿಸುವ ರಸ್ತೆಗಳೇ ನಿರ್ಮಾಣವಾಗಿಲ್ಲ. ಒಳಚರಂಡಿ ಹಾಗೂ ನೀರು ಪೂರೈಸುವ ಕೊಳವೆ ಅಳವಡಿಸುವ ಕಾಮಗಾರಿಯೂ ಶೇ 40ರಷ್ಟೂ ಪೂರ್ಣವಾಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಹಣಕಾಸಿನ ಕೊರತೆ ಇಲ್ಲ. ಈ ಬಡಾವಣೆಯ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ’ ಎಂದು ಪ್ರಾಧಿಕಾರದ ಆಯುಕ್ತ ಎಚ್‌.ಆರ್‌.ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಗಳನ್ನು 2021ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲು ಬಿಡಿಎ ಬದ್ಧವಾಗಿದೆ. ಇದರ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಿದ್ದೇವೆ ಎಂದು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್ ನುಡಿದರು.

ಬಡಾವಣೆಯ ಮೂಲಸೌಕರ್ಯ ಕಾಮಗಾರಿಗಳನ್ನು 2021ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವ ಗಡುವಿಗೆ ಬದ್ಧವಾಗಲು ಬಿಡಿಎ ಕ್ರಮಕೈಗೊಳ್ಳುತ್ತಿರುವುದು ಖುಷಿಯ ವಿಚಾರ. ಆದರೆ ಇದು ಹುಸಿ ಭರವಸೆ ಆಗಬಾರದು ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆ ಅಧ್ಯಕ್ಷ ಶ್ರೀಧರ್‌ ನುಗ್ಗೇಹಳ್ಳಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು