ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಕೆಎಲ್‌: ವಿದ್ಯುತ್‌ ಉಪಕರಣಗಳ ಮೇಲೆ ಕಳ್ಳರ ಕಣ್ಣು

ಶಾಶ್ವತ ವಿದ್ಯುತ್ ಸಂಪರ್ಕ ವಿಳಂಬ: ನಾಗರಿಕರ ಅಳಲು
Published 25 ಮಾರ್ಚ್ 2024, 15:52 IST
Last Updated 25 ಮಾರ್ಚ್ 2024, 15:52 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್‌) ವಿದ್ಯುತ್‌ ಉಪಕರಣಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಸಾವಿರಾರು ರೂಪಾಯಿ ಮೌಲ್ಯದ ವಿದ್ಯುತ್‌ ಪರಿಕರಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ.

ಕಳ್ಳರ ಕಾಟಕ್ಕೆ ಬೆದರಿದ ‘ಎಲ್‌ ಆ್ಯಂಡ್ ಟಿ’ ಹಾಗೂ ಎಸ್‌ಪಿಎಂಎಲ್‌ ಅಮೃತ ಕಂಪನಿಯ ಗುತ್ತಿಗೆದಾರರು ವಿವಿಧ ಬ್ಲಾಕ್‌ಗಳಲ್ಲಿ ಅಳವಡಿಸಿದ್ದ ವಿದ್ಯುತ್‌ ಉಪಕರಣಗಳನ್ನು ಸ್ಥಳದಿಂದ ತೆರವು ಮಾಡುತ್ತಿದ್ದಾರೆ.

‘ವಿದ್ಯುತ್‌ ಉಪಕೇಂದ್ರ ಕಾಮಗಾರಿ ಮುಕ್ತಾಯವಾದ ನಂತರವೇ ಮತ್ತೆ ಕಾಮಗಾರಿ ಆರಂಭಿಸುತ್ತೇವೆ’ ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಬಡಾವಣೆಯ ಮನೆ ಮಾಲೀಕರು ಮತ್ತಷ್ಟು ದಿನ ಕಾಯಬೇಕಾದ ಸ್ಥಿತಿ ಎದುರಾಗಿದೆ.

ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿದ್ದ 4,040 ಎಕರೆ ಪ್ರದೇಶದಲ್ಲಿ, 2,694 ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಬಡಾವಣೆಯಲ್ಲಿ ಐದು ಉಪ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಬಡಾವಣೆಯ 1 ರಿಂದ 9ನೇ ಬ್ಲಾಕ್‌ಗಳಿಗೆ ಕೊಮ್ಮಘಟ್ಟದಲ್ಲಿ ನಿರ್ಮಿಸುತ್ತಿರುವ ವಿದ್ಯುತ್‌ ಉಪಕೇಂದ್ರದಿಂದ ಸಂಪರ್ಕ ಕೊಡಲು ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಕಂಬಗಳು, ಲಿಂಕಿಂಗ್‌ ಬಾಕ್ಸ್‌, ಎಲೆಕ್ಟ್ರಿಕ್‌ ವೈರ್‌ಗಳನ್ನು ಅಳವಡಿಕೆ ಮಾಡಲಾಗಿತ್ತು. ಉಪ ಕೇಂದ್ರ ನಿರ್ಮಾಣವಾಗದ ಕಾರಣಕ್ಕೆ ವಿದ್ಯುತ್‌ ಸಂಪರ್ಕ ಇನ್ನೂ ಸಿಕ್ಕಿಲ್ಲ. ವಿದ್ಯುತ್‌ ಪರಿವರ್ತಕ ಅಳವಡಿಕೆ ಸ್ಥಳದಲ್ಲಿ ಜೋಡಿಸಿದ್ದ ತಾಮ್ರದ ತಂತಿ, ರಿಂಗ್‌ಮೈನ್‌ ಯೂನಿಟ್‌, ತಾಮ್ರದ ಪ್ಲೇಟ್‌ಗಳು ಕಳ್ಳರ ಪಾಲಾಗಿವೆ ಎಂದು ನಿವೇಶನದಾರರು ಹೇಳುತ್ತಾರೆ.

ಕಳ್ಳರು ರಿಂಗ್‌ಮೈನ್ ಯೂನಿಟ್‌ಗೆ ಬೆಂಕಿ ಹಚ್ಚಿದ್ದಾರೆ. ಗುತ್ತಿಗೆದಾರರ ಸಿಬ್ಬಂದಿಗೆ ರಾತ್ರಿ ಹೊತ್ತಿನಲ್ಲಿ ಚಾಕು ತೋರಿಸಿ ದರೋಡೆ ನಡೆಸಿದ್ದಾರೆ. ಬೀದಿದೀಪದ ಕಂಬಗಳಿಗೆ ಅಳವಡಿಸಲಾಗಿದ್ದ ಲಿಂಕ್ ಬಾಕ್ಸ್‌ಗೆ ಹಾರೆಯಿಂದ ಒಡೆದು ಹಾಳು ಮಾಡಲಾಗಿದೆ. ಸಣ್ಣ ಮಕ್ಕಳನ್ನು ಕಳುಹಿಸಿ ಕೇಬಲ್‌ ಕಳವು ಮಾಡಿ ಮಾರಾಟ ಮಾಡಿದ್ದಾರೆ ಎಂದು ಎನ್‌ಪಿಕೆಎಲ್‌ ಫೋರಂನ ಸದಸ್ಯರು ಹೇಳಿದರು.

ನಿವೇಶನದಾರರ ಅಳಲು
2022ರ ಮೇನಲ್ಲಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿಯು ಪ್ರಾರಂಭವಾಗಿದ್ದರೂ ಇನ್ನೂ ಕೆಲಸ ಮುಕ್ತಾಯಗೊಂಡು ಕೇಂದ್ರ ಕಾರ್ಯಾರಂಭ ಮಾಡಿಲ್ಲ. ಮನೆ ನಿರ್ಮಿಸಲು ಅಗತ್ಯವಾದ ತಾತ್ಕಾಲಿಕ ವ್ಯವಸ್ಥೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬೆಸ್ಕಾಂಗೆ ಅರ್ಜಿ ಸಲ್ಲಿಸಿದರೆ ಅಕ್ಕಪಕ್ಕದ ಖಾಸಗಿ ಲೇಔಟ್ ಹಾಗೂ ಹಳ್ಳಿಗಳಿಂದ ಸಂಪರ್ಕ ಕಲ್ಪಿಸಲಾಗುತ್ತಿದೆ.

‘ವಿದ್ಯುತ್‌ ಸಂಪರ್ಕಕ್ಕಾಗಿ ಬೆಸ್ಕಾಂ, ಬಿಡಿಎಗೆ ₹50 ಕೋಟಿ ಪಾವತಿಸಿದೆ. ಆದರೆ, ಬಿಡಿಎ ಉಪ ಕೇಂದ್ರ ಕಾಮಗಾರಿಯನ್ನು ಪೂರ್ಣಗೊಳಿಸದೇ ಸಮಸ್ಯೆ ಎದುರಾಗಿದೆ. ನಿವೇಶನದಾರರು ಮನೆ ನಿರ್ಮಿಸಲು ತಾತ್ಕಾಲಿಕ ವ್ಯವಸ್ಥೆ ಅಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿದರೆ ಸಂಪರ್ಕ ದೊರೆಯುವುದು ವಿಳಂಬವಾಗುತ್ತಿದೆ. ಒಂದು ವೇಳೆ ಈ ವ್ಯವಸ್ಥೆ ಅಡಿ ಸಂಪರ್ಕ ಕಲ್ಪಿಸಿದರೂ ಅದರ ಹೊರೆಯನ್ನೂ ನಮ್ಮ ಮೇಲೆಯೇ ಹಾಕಲಾಗುತ್ತಿದೆ’ ಎಂದು ನಿವೇಶನದಾರರು ಹೇಳುತ್ತಾರೆ.

ಬೀದಿ ದೀಪಗಳ ಅಳವಡಿಕೆಯನ್ನೂ ಮಾಡಿಲ್ಲ. ಇದರಿಂದ ಬಡಾವಣೆಯಲ್ಲಿ ಕಗ್ಗತ್ತಲು ವಾತಾವರಣ ಇದೆ. ಬೀದಿ ದೀಪ ಅಳವಡಿವಂತೆ ಮನವಿ ಮಾಡಿದರೆ ಮನೆ ಸಂರ್ಪಕದಿಂದಲೇ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ ಎಂದು ಫೋರಂ ಸದಸ್ಯರೊಬ್ಬರು ಹೇಳಿದರು.

ಎಂಟು ವರ್ಷಗಳ ಹಿಂದೆಯೇ ಬಡಾವಣೆ ಕಾಮಗಾರಿ ಆರಂಭವಾಗಿದ್ದರೂ ಸಮಗ್ರ ಅಭಿವೃದ್ಧಿ ಕಂಡಿಲ್ಲ.

–ಸೂರ್ಯಕಿರಣ್‌ ವಕ್ತಾರ ಎನ್‌ಪಿಕೆಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT