ಶನಿವಾರ, ಜೂನ್ 25, 2022
25 °C
ತಲಘಟ್ಟಪುರ: ₹ 1.22 ಕೋಟಿ ಮೌಲ್ಯದ ಆಭರಣ ಜಪ್ತಿ

ಬ್ಯಾಂಕ್‌ ಎದುರು ಕಳ್ಳತನ: ‘ಓಜಿಕುಪ್ಪಂ’ ದಂಪತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾರಿನ ಗಾಜು ಒಡೆದು ಚಿನ್ನಾಭರಣವಿದ್ದ ಬ್ಯಾಗ್‌ ಕದ್ದಿದ್ದ ಆರೋಪದಡಿ ರತ್ನಕುಮಾರ್ ಅಲಿಯಾಸ್ ರೆಡ್ಡಿ (40) ಹಾಗೂ ಆತನ ಪತ್ನಿ ತಾಸಿನ್ ಫಾತಿಮಾ ಅಲಿಯಾಸ್ ತನು (36) ಅವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ‘ಓಜಿಕುಪ್ಪಂ’ ನಿವಾಸಿಗಳಾದ ಆರೋಪಿಗಳು, ತಮ್ಮದೇ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಇವರಿಬ್ಬರಿಂದ ₹ 1.22 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.

‘ಉದ್ಯಮಿಯೊಬ್ಬರು ತಲಘಟ್ಟಪುರ ರಘುವನಹಳ್ಳಿಯ ಯೂನಿಯನ್ ಬ್ಯಾಂಕ್ ಇಂಡಿಯಾ ಶಾಖೆಯ ಲಾಕರ್‌ನಲ್ಲಿ ಚಿನ್ನ ಹಾಗೂ ವಜ್ರದ ಆಭರಣ ಇರಿಸಿದ್ದರು. ಕಾರ್ಯಕ್ರಮ ನಿಮಿತ್ತ ಏಪ್ರಿಲ್ 28ರಂದು ಲಾಕರ್‌ನಲ್ಲಿದ್ದ ಆಭರಣ ಬಿಡಿಸಿಕೊಂಡಿದ್ದರು. ಆಭರಣವಿದ್ದ ಬ್ಯಾಗ್‌ ಕಾರಿನಲ್ಲಿರಿಸಿದ್ದರು.’

‘ಬ್ಯಾಂಕ್ ಮುಂದೆಯೇ ಕಾರು ನಿಲ್ಲಿಸಿದ್ದ ಉದ್ಯಮಿ, ಕೆಲಸ ನಿಮಿತ್ತ ಸಮೀಪದಲ್ಲಿದ್ದ ನರ್ಸರಿಗೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಆರೋಪಿಗಳು, ಕಾರಿನ ಗಾಜು ಒಡೆದು ಬ್ಯಾಗ್ ಕದ್ದೊಯ್ದಿದ್ದರು. ಉದ್ಯಮಿ ಸ್ಥಳಕ್ಕೆ ಬಂದಾಗ ವಿಷಯ ಗೊತ್ತಾಗಿತ್ತು’ ಎಂದೂ ತಿಳಿಸಿದರು.

ಆಭರಣ ಮಾರಾಟದ ಸುಳಿವು: ‘ಆಭರಣ ಸಮೇತ ಪರಾರಿಯಾಗಿದ್ದ ಆರೋಪಿಗಳು, ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದರು. ಕದ್ದ ಆಭರಣಗಳನ್ನು ಮಾರಿ, ಫ್ಲ್ಯಾಟ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

‘ಚೆನ್ನೈನ ಮೊಹಮ್ಮದ್ ಹರ್ಷದ್ ನದೀಮ್ ಎಂಬಾತನ ಮೂಲಕ ಆಭರಣ ಮಾರಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ನದೀಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆತ, ಆರೋಪಿ ತಾಸಿನ್ ತಮ್ಮನೆಂಬುದು ಗೊತ್ತಾಯಿತು. ಆತನೇ ಆರೋಪಿಗಳ ಸುಳಿವು ನೀಡಿದ್ದ’ ಎಂದೂ ತಿಳಿಸಿದರು.

‘ಫ್ಲ್ಯಾಟ್‌ ಮೇಲೆ ದಾಳಿ ಮಾಡಿ ದಂಪತಿಯನ್ನು ಬಂಧಿಸಿ, 978 ಗ್ರಾಂ ತೂಕದ ಚಿನ್ನಾಭರಣ, 176 ಗ್ರಾಂ ವಜ್ರದ ಆಭರಣ ಜಪ್ತಿ ಮಾಡಲಾಯಿತು’ ಎಂದೂ ಹೇಳಿದರು.

ಗಮನ ಬೇರೆಡೆ ಸೆಳೆದು ಕೃತ್ಯ: ‘ಓಜಿಕುಪ್ಪಂ ತಂಡದ ಸದಸ್ಯನಾಗಿದ್ದ ರತ್ನಕುಮಾರ್, ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬ್ಯಾಂಕ್‌ಗೆ ಬಂದು ಹೋಗುತ್ತಿದ್ದ ಸಾರ್ವಜನಿಕರ ಮೇಲೆ ಕಣ್ಣಿಟ್ಟು, ಅವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದವು’ ಎಂದೂ ತಿಳಿಸಿದರು.

‘ರತ್ನಕುಮಾರ್ ಕೃತ್ಯಕ್ಕೆ ಪತ್ನಿ ತಾಸಿನ್ ಸಹಕಾರ ನೀಡುತ್ತಿದ್ದಳು. ಇವರ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು