ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಕ್ಕಲಿಗರು ಕೃಷಿಗೆ ಸೀಮಿತವಾಗುವುದು ಬೇಡ: ಆದಿಚುಂಚನಗಿರಿ ಸ್ವಾಮೀಜಿ

‘ಉದ್ಯಮಿ ಒಕ್ಕಲಿಗ– ಫಸ್ಟ್‌ ಸರ್ಕಲ್ ಎಕ್ಸ್‌ಪೊ–2024’ ಉದ್ಘಾಟನೆ
Published 19 ಜನವರಿ 2024, 15:56 IST
Last Updated 19 ಜನವರಿ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃತಕ ಬುದ್ಧಿಮತ್ತೆ, ರೊಬೊಟಿಕ್‌ ತಂತ್ರಜ್ಞಾನದ ಕಾಲಘಟ್ಟದಲ್ಲಿ ಒಕ್ಕಲಿಗರು ಕೃಷಿಗೆ ಸೀಮಿತವಾಗದೆ, ಇಂದಿನ ವೇಗಕ್ಕೆ ಬದುಕನ್ನು ಬದಲಾಯಿಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿ ಆಯೋಜಿಸಿರುವ ‘ಉದ್ಯಮಿ ಒಕ್ಕಲಿಗ– ಫಸ್ಟ್‌ ಸರ್ಕಲ್ ಎಕ್ಸ್‌ಪೊ–2024’  ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಯಂತ್ರ ಮಾನವನ ಜೊತೆ ಸ್ಪರ್ಧೆ ಮಾಡುವ ಕಾಲ ಹತ್ತಿರವಾಗುತ್ತಿದೆ. ಅದಕ್ಕೆ ತಕ್ಕಂತೆ ಬದಲಾಗಿ ಸ್ಪರ್ಧೆ ಎದುರಿಸಲು ಸನ್ನದ್ಧರಾಗಬೇಕು. ಒಕ್ಕಲಿಗ ಉದ್ಯಮಿಯಾದರೆ ಹಲವು ಮಂದಿಗೆ ಉದ್ಯೋಗ ನೀಡಬಹುದು. ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರದಲ್ಲಿ ನಾಲ್ಕಾರು ಜನರಿಗೆ ಉದ್ಯೋಗ ನೀಡುವಂತಾಗಬೇಕು. ಇಲ್ಲದಿದ್ದರೆ ಡೈನೋಸರ್ ರೀತಿ ಅವನತಿ ಹೊಂದಬೇಕಾಗುತ್ತದೆ’ ಎಂದು ಹೇಳಿದರು.

‘ಗಂಗ ಅರಸರ ಕಾಲದಲ್ಲಿ ಉಪಪಂಗಡಗಳು ಇರಲಿಲ್ಲ. ‘ಉದ್ಯಮಿ ಒಕ್ಕಲಿಗ ಸಮಾವೇಶ’ದಲ್ಲಿ ಎಲ್ಲರೂ ಒಂದಾಗಿದ್ದಾರೆ. ಬೇರೊಬ್ಬರ ಮರ್ಜಿಯಲ್ಲಿದ್ದಾಗ ಜಾತಿ ಅಥವಾ ಗೌಡ ಎಂಬ ಹೆಸರನ್ನು ಹೇಳಿಕೊಳ್ಳಲು ಹಿಂಜರಿಕೆಯಾಗುತ್ತದೆ. ನಾವು ನಾಯಕನ ಸ್ಥಾನದಲ್ಲಿದ್ದಾಗ, ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾದರೆ ‘ಗೌಡ’ ಎಂಬ ಹೆಗ್ಗಳಿಕೆ ಉಳಿಯುತ್ತದೆ’ ಎಂದರು.

‘ಒಕ್ಕಲಿಗ ಸಮಾಜದ ಉದ್ಯಮಿಗಳೆಲ್ಲರೂ ಇಲ್ಲಿ ಸೇರಿರುವುದು ಉತ್ತಮ ಬೆಳವಣಿಗೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದರಂತೆ ನೀವೆಲ್ಲರೂ ಒಟ್ಟಾಗಿ ಚರ್ಚೆ, ಕೆಲಸ ಮಾಡಿದರೆ ಯಶಸ್ಸು ಕಾಣುತ್ತೀರಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಿಮ್ಮದು ಗಟ್ಟಿ ಧ್ವನಿಯಾಗಿರಲಿ. ಇಡೀ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ನಮ್ಮಂತಹವರು ತಪ್ಪು ಮಾಡಿದರೂ ನೇರವಾಗಿ ತಪ್ಪು ಎಂದು ಹೇಳುವ ಶಕ್ತಿ ನಿಮಗಿದೆ. ಒಕ್ಕಲಿಗರ ಸಂಘದವರು ಜೇನು ತಿನ್ನುತ್ತಾ ಕೂರುವುದು ಕಡಿಮೆಯಾಗಿದೆ. ಮತ್ತೆ ಕಿತ್ತಾಡಿದರೆ ಆಡಳಿತಾಧಿಕಾರಿ ಬಂದು ಕೂರುತ್ತಾರೆ’ ಎಂದು ಹೇಳಿದರು.

‘ವಿಶ್ವದಲ್ಲಿ ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತಿದೆ. ಇಲ್ಲಿರುವ ಮಾನವ ಸಂಪನ್ಮೂಲ, ನವೋದ್ಯಮ, ಶಿಕ್ಷಣ, ಆರೋಗ್ಯ, ಪರಿಸರ ಎಲ್ಲರಿಗೂ ಆಕರ್ಷಣೆಯಾಗಿದೆ. ನಮ್ಮ ಸಮಾಜದವರಾದ ನಾಡಪ್ರಭು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ ಅವರನ್ನು ಬೆಂಗಳೂರಿಗರು ಸದಾ ಸ್ಮರಿಸಿಕೊಳ್ಳಬೇಕು. ಬಾಲಗಂಗಾಧರನಾಥ ಸ್ವಾಮೀಜಿ ಸಮಾಜಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಆ ಸ್ಥಾನ ತುಂಬಿದ್ದು, ಸಮಾಜವನ್ನು ಉತ್ತಮವಾಗಿ ರೂಪಿಸುವ ವಿಶ್ವಾಸ ನನಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT