ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಪೂರ್ಣಗೊಳಿಸಲು ಸೆಪ್ಟೆಂಬರ್‌ ಗಡುವು

ಹಳೆ ವಿಮಾನ ನಿಲ್ದಾಣ ರಸ್ತೆ ಸಿಗ್ನಲ್ ಮುಕ್ತ ಕಾರಿಡಾರ್
Last Updated 24 ಫೆಬ್ರುವರಿ 2021, 21:19 IST
ಅಕ್ಷರ ಗಾತ್ರ

ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯನ್ನು ಸಿಗ್ನಲ್‌ರಹಿತ ಕಾರಿಡಾರ್‌ ಆಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಬುಧವಾರ ಪರಿಶೀಲಿಸಿದರು.

ಈ ಯೋಜನೆಯಡಿ ವಿಂಡ್‌ ಟನಲ್ ರಸ್ತೆ ಜಂಕ್ಷನ್, ಸುರಂಜನ್‌ದಾಸ್ ಜಂಕ್ಷನ್ ಮತ್ತು ಕುಂದಲಹಳ್ಳಿ ಜಂಕ್ಷನ್‌ಗಳಲ್ಲಿ ಕೆಳಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಮೂರೂ ಕಾಮಗಾರಿಗಳ ತಪಾಸಣೆ ನಡೆಸಿದ ಆಡಳಿತಾಧಿಕಾರಿ, ಈ ಯೋಜನೆಯನ್ನು 2021ರ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿದರು.

ವಿಂಡ್‌ ಟನಲ್ ರಸ್ತೆ ಜಂಕ್ಷನ್

ವಿಂಡ್‌ಟನಲ್ ಜಂಕ್ಷನ್ ಕೆಳಸೇತುವೆ ನಿರ್ಮಾಣಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತುನ್ಯಾಷನಲ್‌ ಏರೊನಾಟಿಕಲ್‌ ಲಿಮಿಟೆಡ್‌ (ಎನ್ಎಎಲ್) ಸಂಸ್ಥೆಗೆ ಸೇರಿದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಂದು ಭಾಗದಲ್ಲಿ ಕೆಳಸೇತುವೆಯ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ.

‘ರಸ್ತೆಯ ಇನ್ನೊಂದು ಭಾಗದಲ್ಲಿ ವಾಹನ ಸಂಚಾರಕ್ಕೆಬದಲಿ ಮಾರ್ಗ ಗುರುತಿಸಿ, ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕಾಂಕ್ರೀಟ್‌ ಬಾಕ್ಸ್‌ ಅನ್ನು ಮೊದಲೇ ಸಿದ್ಧಪಡಿಸಿ ಸ್ಥಳಕ್ಕೆ ತಂದು ಜೋಡಿಸುವ ತಂತ್ರಜ್ಞಾನ ಬಳಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಗೌರವ್ ಗುಪ್ತ ಸೂಚಿಸಿದರು.

ಸುರಂಜನ್‌ ದಾಸ್ ಜಂಕ್ಷನ್

ಸುರಂಜನ್ ದಾಸ್ ಜಂಕ್ಷನ್‌ನ ಕೆಳ ಸೇತುವೆಯಲ್ಲಿ ಮಾರತಹಳ್ಳಿ ಕಡೆಯಿಂದ ನಗರದತ್ತ ಬರುವ ಮಾರ್ಗದ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಮತ್ತೊಂದು ಭಾಗದಲ್ಲಿ ಕೆಲವು ಮರಗಳ ಸ್ಥಳಾಂತರ ಮಾಡಬೇಕಿದೆ. ಮರಗಳನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ ಸ್ವಾಮಿ ಅವರಿಗೆ ಆಡಳಿತಾಧಿಕಾರಿ ಸೂಚನೆ ನೀಡಿದರು. ಇನ್ನೊಂದು ಬದಿಯ ತಡೆಗೋಡೆ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕುಂದಲಹಳ್ಳಿ ಜಂಕ್ಷನ್

ಕುಂದಲಹಳ್ಳಿ ಜಂಕ್ಷನ್ ಬಳಿಯ ಕೆಳಸೇತುವೆ ಕಾಮಗಾರಿಯ ಎರಡೂ ಬದಿಯ ತಡೆಗೋಡೆ ಕಾಮಗಾರಿಗಳು ಪೂರ್ಣಗೊಂಡಿವೆ. ಇಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ಅನುಷ್ಠಾನಕ್ಕೆ ಇನ್ನೂ 27 ಸ್ವತ್ತುಗಳ ಭೂಸ್ವಾಧೀನ ಮಾಡಬೇಕಿದೆ. ಇವುಗಳ ಭೂಸ್ವಾಧೀನಕ್ಕೆ ಅನುಮತಿ ದೊರೆತಿದೆ. 10 ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಕಾಮಗಾರಿ ನಡೆಸಲು ಬಳಿಕ ಯಾವುದೇ ಅಡ್ಡಿ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಕಾಮಗಾರಿಯನ್ನು ಇದೇ ವರ್ಷದ ಜೂನ್ ಒಳಗೆ ಪೂರ್ಣಗೊಳಿಸುವಂತೆ ಆಡಳಿತಾಧಿಕಾರಿ ಸೂಚಿಸಿದರು. ವಿಶೇಷ ಆಯುಕ್ತ (ಯೋಜನೆ) ಮನೋಜ್ ಜೈನ್, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ಸೂಪರಿಂಟೆಂಡಿಂಗ್‌ ಎಂಜಿನಿಯರ್ ಲೋಕೇಶ್ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT