ಬೆಂಗಳೂರು: ಖಾಸಗಿತನದ ಹಕ್ಕು, ಸಾಕ್ಷಿ ಮತ್ತು ಸಾಕ್ಷ್ಯಗಳ ಸಂರಕ್ಷಣೆ, ಆನ್‌ಲೈನ್ ಗೇಮಿಂಗ್ ನಿಯಂತ್ರಣ ಸೇರಿದಂತೆ ಅನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕೆಲವು ಪ್ರಮುಖ ಕಾನೂನುಗಳ ಕುರಿತು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ಅಧ್ಯಯನ ಆರಂಭಿಸಿದೆ.
ವಿಧಾನಸೌಧದಲ್ಲಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಕಚೇರಿಯಲ್ಲಿ ಮಂಗಳವಾರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಕೆ. ದ್ವಾರಕಾನಾಥ್ ಬಾಬು ಈ ವಿಷಯ ತಿಳಿಸಿದರು.
‘ಕಾನೂನು ಮತ್ತು ಸಂಸದೀಯ ವ್ಯವಹಾರಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಸದನದಲ್ಲಿ ಶಾಸಕರ ಕಡ್ಡಾಯ ಹಾಜರಾತಿ, ಅಧಿವೇಶನಗಳಲ್ಲಿ ಸಕ್ರಿಯ ಭಾಗವಹಿಸುವುದು, ಉತ್ತಮ ಶಾಸಕರ ಕರ್ತವ್ಯಗಳ ಕುರಿತೂ ಅಧ್ಯಯನ ನಡೆಸಲಾಗುತ್ತಿದೆ. ಕೆಲವು ವಿಷಯಗಳ ಕುರಿತು ಸಂಸ್ಥೆಯಿಂದಲೇ ಅಧ್ಯಯನ ನಡೆದರೆ, ಕೆಲವು ವಿಷಯಗಳ ಕುರಿತು ಅಧ್ಯಯನದ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಗೆ ವಹಿಸಲಾಗಿದೆ’ ಎಂದರು.
ಕೆಲ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನಗಳು ನಡೆಯುತ್ತಿವೆ. ಕೆಲವೇ ತಿಂಗಳುಗಳಲ್ಲಿ ವರದಿ ನೀಡ
ಲಾಗುವುದು ಎಂದು ತಿಳಿಸಿದರು. ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಕ್ಯಾಲೆಂಡರ್ ಅನ್ನು ಜೆ.ಸಿ.ಮಾಧುಸ್ವಾಮಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.