ಗುರುವಾರ , ಸೆಪ್ಟೆಂಬರ್ 16, 2021
29 °C
ಅನಿರ್ದಿಷ್ಟಾವಧಿ ಮುಷ್ಕರ: ಬಿಬಿಎಂಪಿ ನೌಕರರ ಸಂಘ ಎಚ್ಚರಿಕೆ

ಬಿಬಿಎಂಪಿಯ ನಗರ ಯೋಜನಾ ವಿಭಾಗದಲ್ಲಿ 39 ಹೊಸ ಹುದ್ದೆ ಸೃಷ್ಟಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಯ ನಗರ ಯೋಜನಾ ವಿಭಾಗದಲ್ಲಿ 39 ಹೊಸ ಹುದ್ದೆಗಳನ್ನು ಸೃಷ್ಟಿಸುವುದಕ್ಕೆ ಸಂಸ್ಥೆಯ ನೌಕರರಿಂದಲೇ ವಿರೋಧ ವ್ಯಕ್ತವಾಗಿದೆ. ‘ಈ ಹುದ್ದೆಗಳ ಅಗತ್ಯವೇ ಇಲ್ಲ. ಇದರಿಂದ ಬಿಬಿಎಂಪಿಯ ಆರ್ಥಿಕ ಹೊರೆ ಹೆಚ್ಚಲಿದೆ’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಹೊಸತಾಗಿ 39 ಹುದ್ದೆ ಸೃಷ್ಟಿಸುವ ಮೂಲಕ ನಗರ ಯೋಜನಾ ವಿಭಾಗವನ್ನು ಬಲವರ್ಧನೆ ಮಾಡಿದರೆ ಪಾಲಿಕೆಯ ಯೋಜನೆಗಳಲ್ಲಿ ಹಿಂದಿನ ಮತ್ತು ವರ್ತಮಾನದ ಉಲ್ಲಂಘನೆಗಳನ್ನು ಸರಿಪಡಿಸಲು ಅನುಕೂಲವಾಗುತ್ತದೆ. ಶುಲ್ಕ ಹಾಗೂ ದಂಡ ವಿಧಿಸುವಿಕೆ ಹೆಚ್ಚಿಸುವ ಮೂಲಕ ಪಾಲಿಕೆ ಆದಾಯ ಜಾಸ್ತಿ ಮಾಡುವ ಸಂಪೂರ್ಣ ಹೊಣೆ ಯೋಜನಾ ವಿಭಾಗದ್ದಾಗಿರುತ್ತದೆ ಎಂದು ಆಡಳಿತ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ನಿಯೋಜನೆ ಮೂಲಕ ಈ ಹುದ್ದೆಗಳನ್ನು ಸೃಷ್ಟಿಸುವ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಇದೇ ಸೆ.1ರಂದು ಅನುಮೋದನೆ ನೀಡಿದ್ದರು.

ಈ ಪ್ರಸ್ತಾವ ಕೈಬಿಡದೇ ಹೋದರೆ ಇದೇ 7ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಎಚ್ಚರಿಕೆ ನೀಡಿದೆ.

‘ಹೊಸ ವೃಂದ ಮತ್ತು ನೇಮಕಾತಿ ನಿಯಾಮಾವಳಿ ಪ್ರಕಾರ ಬಿಬಿಎಂಪಿಯಲ್ಲಿ 5,219 ಹೆಚ್ಚುವರಿ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.‌ ಆದರೂ, ಇದುವರೆಗೂ ಯಾವುದೇ ಹುದ್ದೆಗೂ ಸರ್ಕಾರ ಮಂಜೂರಾತಿ ನೀಡಿಲ್ಲ. ಎಂಜಿನಿಯರ್‌, ಕಂದಾಯ ನಿರೀಕ್ಷಕ, ಆರೋಗ್ಯಾಧಿಕಾರಿ ಸೇರಿ ಒಟ್ಟು 4,452 ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಆದರೆ, ನಗರ ಯೋಜನೆ ವಿಭಾಗದಲ್ಲಿ ಏಕಾಏಕಿ 39 ಹೊಸ ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆಯವರು ಮಂಜೂರಾತಿ ನೀಡಿದ್ದು ಅವೈಜ್ಞಾನಿಕ ಕ್ರಮ’ ಎಂದು ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್‌ ಟೀಕಿಸಿದರು.

‘ಈ 39 ಹೊಸ ಹುದ್ದೆಗಳಿಂದಾಗಿ ಬಿಬಿಎಂಪಿಗೆ ತಿಂಗಳಿಗೆ ಏನಿಲ್ಲವೆಂದರೂ ₹ 1 ಕೋಟಿಗೂ ಅಧಿಕ ಹೊರೆ ಬೀಳಲಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿ ಈ ಹೊರೆಯನ್ನು ಹೊರುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು. 

‘ಬಿಬಿಎಂಪಿಯಲ್ಲಿ 1,066 ಗ್ರೂಪ್‌ ಡಿ ನೌಕರರು, 409 ಪ್ರಥಮ ದರ್ಜೆ ಸಹಾಯಕರು, 350 ದ್ವಿತೀಯ ದರ್ಜೆ ಸಹಾಯಕರು, 145 ವ್ಯವಸ್ಥಾಪಕರು, ನರ್ಸರಿ ಮತ್ತು ಅಂಗನವಾಡಿ ಶಿಕ್ಷಕಿಯರ 196 ಹುದ್ದೆಗಳು, 248 ಶುಶ್ರೂಷಕರು, 435 ಕಿರಿಯ ಆರೋಗ್ಯ ಸಹಾಯಕಿಯರು, 104 ಕಿರಿಯ ಆರೋಗ್ಯ ಪರಿವೀಕ್ಷಕರು, 184 ಆಯಾಗಳು, 245 ಚಾಲಕರು, 25 ಚಿತಾಗಾರ ನಿರ್ವಾಹಕರು ಸೇರಿದಂತೆ ಒಟ್ಟು 4,660 ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರದ ಮುಂದಿಟ್ಟಿತ್ತು. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಗೆ ಉತ್ತಮ ಸೇವೆ ಒದಗಿಸಲು ಅನಿವಾರ್ಯವಾಗಿರುವ ಈ ಹುದ್ದೆಗಳನ್ನು ಸೃಜಿಸುವ ಬದಲು ನಗರ ಯೋಜನೆ ವಿಭಾಗಕ್ಕೆ ಮಾತ್ರ ಹೊಸ ಹುದ್ದೆಗಳನ್ನು ಸೃಜಿಸುವುದು ಸಮಂಜಸವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು