ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರ 170ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯದವರು ಸೋಲೂರು ಭಾಗದಲ್ಲಿ 10 ಎಕರೆ ಜಮೀನನ್ನು ಮಂಜೂರು ಮಾಡಲು ಕೇಳಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಲು ಸೂಚಿಸಿದ್ದೇನೆ. ಸಮುದಾಯ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದರು.
’ಈಡಿಗ ಸಮುದಾಯದವರೊಬ್ಬರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಈಗಿನ ಸದಸ್ಯರ ಅವಧಿ ಮುಗಿದ ನಂತರ, ಸಮುದಾಯದವರನ್ನು ಸದಸ್ಯರನ್ನಾಗಿ ಮಾಡೋಣ’ ಎಂದರು.
‘ಬುದ್ದ, ಬಸವ, ಕನಕದಾಸರಂತೆ, ನಾರಾಯಣ ಗುರುಗಳು ಕೂಡ ಸಂತರು. ಅವರು ಸಮಾಜದಲ್ಲಿ ಅಸಮಾನತೆ ಹೋಗಬೇಕು ಎಂದು ಬೋಧಿಸಿದ್ದರು. ಅವರು ತೋರಿದ ದಾರಿಯಲ್ಲಿ ಸಾಗುವುದೇ ನಾವು ಅವರಿಗೆ ಸಲ್ಲಿಸುವ ಗೌರವ’ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ‘ಹಿಂದುಳಿದ ವರ್ಗದ ರಾಜ್ಯ ಆಳುವುದಕ್ಕೆ ಪ್ರಾರಂಭಿಸಿದರೆ, ಕೆಲವೊಂದು ಶಕ್ತಿಗಳಿಗೆ ತಡೆದುಕೊಳ್ಳಲಾಗುವುದಿಲ್ಲ. ಬಂಗಾರಪ್ಪನವರು ಆಡಳಿತ ನಡೆಸುವಾಗಲೂ ಏನೇನೋ ಆರೋಪಗಳನ್ನು ಮಾಡಿದರು. ತುಳಿತಕ್ಕೆ ಒಳಗಾದವರಿಗೆ, ಧ್ವನಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ ಮಾಡುವವರೆಲ್ಲರ ಮೇಲೂ ಆಪಾದನೆಗಳು ಬರುತ್ತಲೇ ಇವೆ. ಹಿಂದುಳಿದ ವರ್ಗದವರು ಗಟ್ಟಿಯಾಗಿ ನಮ್ಮ ಶಕ್ತಿ ಏನೆಂದು ತೋರಿಸಬೇಕು’ ಎಂದರು.
ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ, ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಎಂ.ವೇದಕುಮಾರ್, ಪ್ರೊ. ಗಣೇಶ್ ಅಮೀನ್ ಸಂಕಮಾರ್, ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಭಾಗವಹಿಸಿದ್ದರು.
ಅಸ್ಪೃಶ್ಯತೆ ಮೂಢನಂಬಿಕೆ ವಿರುದ್ಧ ಹೋರಾಟ ಆರಂಭಿಸಿ ಈಳವ ಶಿವನನ್ನು ಸ್ಥಾಪಿಸಲು ಮುಂದಾದ ನಾರಾಯಣ ಗುರುಗಳನ್ನೇ ಬಿಡದ ಸಮಾಜ ಹಿಂದುಳಿದ ವರ್ಗದ ಬಂಗಾರಪ್ಪ ಸಿದ್ದರಾಮಯ್ಯನವರನ್ನು ಬಿಟ್ಟೀತೇ ?ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.