ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಆರ್‌ಆರ್‌– ಬಿಐಎಎಲ್‌ ಮೆಟ್ರೊ: ಮೂರು ಒಪ್ಪಂದ

ಬಿಎಂಆರ್‌ಸಿಎಲ್‌, ಬಿಐಎಎಲ್‌, ರೈಲ್ವೆ, ಎಂಬೆಸಿ ಸಮೂಹದ ಸಹಭಾಗಿತ್ವ
Last Updated 8 ಸೆಪ್ಟೆಂಬರ್ 2020, 16:41 IST
ಅಕ್ಷರ ಗಾತ್ರ

ಬೆಂಗಳೂರು: ಹೊರವರ್ತುಲ ರಸ್ತೆ– ವಿಮಾನ ನಿಲ್ದಾಣ ಮೆಟ್ರೊ ರೈಲು ಸಂಪರ್ಕ ಯೋಜನೆಯಡಿ ₹ 940 ಕೋಟಿ ವೆಚ್ಚದಲ್ಲಿ ಬಿಐಎಎಲ್‌ ಪರಿಧಿಯಲ್ಲಿ ಎರಡು ಹಾಗೂ ಬೆಟ್ಟಹಲಸೂರಿನಲ್ಲಿ ಒಂದು ಮೆಟ್ರೊ ರೈಲು ನಿಲ್ದಾಣಗಳ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಜತೆ ಬಿಐಎಎಲ್‌, ಎಂಬೆ‌ಸಿ ಸಮೂಹ ಹಾಗೂ ರೈಲ್ವೆ ಇಲಾಖೆಗಳು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 56 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗದಲ್ಲಿ ಕೆಲವು ಯೋಜನೆಗಳನ್ನು ಸರ್ಕಾರಿ– ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಅನುಷ್ಠಾನಕ್ಕೆ ತರಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಬಿಎಂಆರ್‌ಸಿಎಲ್‌ ಈ ಒಪ್ಪಂದಗಳನ್ನು ಮಾಡಿಕೊಂಡಿದೆ. ಮುಖ್ಯಮಂತ್ರಿಯವರ ಗೃಹ ಕಚೇರಿ ’ಕೃಷ್ಣಾ‘ದಲ್ಲಿ ಕಾರ್ಯಕ್ರಮ ನಡೆಯಿತು.

ಕೆಐಎಎಲ್ ಪರಿಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ₹ 800 ಕೋಟಿ ವೆಚ್ಚದಲ್ಲಿ 4.95 ಕಿ.ಮೀ. ಉದ್ದದ ಮಾರ್ಗವನ್ನು ಅಭಿವೃದ್ಧಿಪಡಿಸಲಿದೆ. ಇದರಲ್ಲಿ ಎರಡು ಮೆಟ್ರೊ ರೈಲು ನಿಲ್ದಾಣಗಳೂ ಸೇರಿವೆ.

ಬೆಟ್ಟಹಲಸೂರಿನಲ್ಲಿ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ಎಂಬೆಸಿ ಸಮೂಹವು ₹ 140 ಕೋಟಿ ಹೂಡಿಕೆ ಮಾಡಲಿದೆ. ಪ್ರತಿಯಾಗಿ ಅಲ್ಲಿ ಲಭ್ಯವಾಗುವ ಜಾಹೀರಾತು ಪ್ರದೇಶ ಮತ್ತು ವಾಣಿಜ್ಯ ಬಳಕೆ ಪ್ರದೇಶವನ್ನು ಎಂಬೆಸಿ ಸಮೂಹ ಬಳಸಿಕೊಳ್ಳಲಿದೆ.

ಭಾರತೀಯ ರೈಲ್ವೆ ಮತ್ತು ಬಿಐಎಎಲ್‌ ಜಂಟಿಯಾಗಿ ಕೆಐಎಎಲ್‌ ಸಮೀಪದಲ್ಲಿ ರೈಲ್ಬೆ ‘ಹಾಲ್ಟ್‌ ಸ್ಟೇಷನ್‌’ ನಿರ್ಮಿಸುತ್ತಿವೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಯೋಜನೆಗೆ ರೈಲ್ವೆ ಮತ್ತು ಬಿಐಎಎಲ್‌ ಜಂಟಿಯಾಗಿ ಹೂಡಿಕೆ ಮಾಡಿವೆ. ‘ಹಾಲ್ಟ್‌ ಸ್ಟೇಷನ್‌’ನಿಂದ ಕೆಐಎಎಲ್‌ ಮೆಟ್ರೊ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣದ ವಿವಿಧ ಭಾಗಗಳಿಗೆ ಬಿಐಎಎಲ್‌ ಉಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಲಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರಿ ಮರಾರ್‌, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌, ಎಂಬೆಸಿ ಸಮೂಹದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆದಿತ್ಯ ವಿರ್ವಾಣಿ ಒಪ್ಪಂದಗಳಿಗೆ ಸಹಿ ಮಾಡಿದರು. ಕೇಂದ್ರ ಸಚಿವ ಸುರೇಶ್‌ ಅಂಗಡಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡರು.

ಬಿಎಂಆರ್‌ಸಿಎಲ್‌ ₹ 14, 844 ಕೋಟಿ ವೆಚ್ಚದಲ್ಲಿ ಹೊರ ವರ್ತುಲ ರಸ್ತೆ– ವಿಮಾನ ನಿಲ್ದಾಣ ಮೆಟ್ರೊ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. 2021ರ ಮಾರ್ಚ್‌ನಲ್ಲಿ ವಿಮಾನ ನಿಲ್ದಾಣದ ಮೆಟ್ರೊ ರೈಲು ನಿಲ್ದಾಣ ಕಾಮಗಾರಿ ಆರಂಭಿಸುವ ಗುರಿ ಇದೆ. 2024ರಲ್ಲಿ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT