ಮಂಗಳವಾರ, ಜೂನ್ 28, 2022
28 °C
ಟೆಂಡರ್‌ ಕರೆದು ಶೀಘ್ರವೇ ಅನುಷ್ಠಾನ– ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಹೊರವರ್ತುಲ ರಸ್ತೆ: ಟರ್ಕಿ, ಇಸ್ರೇಲ್‌ ಕಂಪನಿ ಆಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆರಿಫೆರಲ್‌ ರಿಂಗ್‌ ರಸ್ತೆ

ಬೆಂಗಳೂರು: ನಗರದ ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆ ಅನುಷ್ಠಾನಕ್ಕೆ ಟರ್ಕಿ, ಇಸ್ರೇಲ್‌ ಮತ್ತು ಸ್ವಿಸ್‌ ದೇಶಗಳ ಕಂಪನಿಗಳು ಆಸಕ್ತಿ ತೋರಿಸಿದ್ದು, ಶೀಘ್ರವೇ ಈ ಯೋಜನೆಯ ಟೆಂಡರ್‌ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

‘ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಭೂಸ್ವಾಧೀನ ಪ್ರಕ್ರಿಯೆ ಚುರುಕು ಗೊಳಿಸಲಾಗುವುದು’ ಎಂದೂ ಹೇಳಿದರು.

ಪ್ರಾಧಿಕಾರದ ಆದಾಯ ಹೆಚ್ಚಿಸಬೇಕಾಗಿರುವ ಕಾರಣ ಖಾಲಿ ನಿವೇಶನಗಳು, ಫ್ಲ್ಯಾಟ್‌ಗಳು, ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ಚುರುಕುಗೊಳಿಸಬೇಕು. ಬಿಡಿಎ ಕಳೆದ ಸಾಲಿನಲ್ಲಿ ₹2,066.72 ಕೋಟಿ ವರಮಾನ ಗಳಿಸಿದ್ದು, ₹1,322.44 ಕೋಟಿ ವೆಚ್ಚ ಮಾಡಿದೆ. ಈ ವರ್ಷ ₹9,530 ಕೋಟಿ ವರಮಾನ ಗಳಿಕೆಯನ್ನು ನಿರೀಕ್ಷಿಸಿದೆ ಎಂದರು.

ಅಲ್ಲದೆ, ಬಿಡಿಎಗೆ ಸೇರಿದ ವಾಣಿಜ್ಯ ಸಂಕೀರ್ಣಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಪರಿಶೀಲಿಸಬೇಕು. ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಡಾ.ಕೆ.ಶಿವರಾಮ ಕಾರಂತ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳಾದ ಒಳಚರಂಡಿ, ವಿದ್ಯುತ್‌ ಸಂಪರ್ಕ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡುವಂತೆ ಸೂಚಿಸಿದರು.

ಮಳೆಗಾಲ ಆರಂಭವಾಗುವುದರಿಂದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳೆತ್ತಿ ವಿಲೇವಾರಿ ಮಾಡುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಚಿಕ್ಕಬಾಣಾವರ, ಕೊಮ್ಮಘಟ್ಟ ಮತ್ತು ರಾಮಸಂದ್ರ ಕೆರೆಗಳ ಅಭಿವೃದ್ಧಿಗೂ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು.

ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಲ್ಯಾಂಡ್‌ ಆಡಿಟ್‌ ಸಮೀಕ್ಷೆಯ ವರದಿಯಂತೆ ಪ್ರಾಧಿಕಾರಕ್ಕೆ ಲಭ್ಯವಿರುವ ಒಟ್ಟು ಆಸ್ತಿಯ ಮಾಹಿತಿಯನ್ನು ಒದಗಿಸಲು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಮತ್ತು ಇತರ ಅಧಿಕಾರಿಗಳು ಇದ್ದರು.

‘ಕಾನೂನು ವಿಭಾಗ ಬಲಪಡಿಸಿ’

ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 6,431 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವುದರಿಂದ ಕಾನೂನು ವಿಭಾಗವನ್ನು ಬಲಪಡಿಸಲು ಉತ್ತಮ ವಕೀಲರನ್ನು ನೇಮಿಸಿಕೊಳ್ಳಬೇಕು. ಪ್ರಾಧಿಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಕೈಗೆತ್ತಿಕೊಳ್ಳಲಾಗಿರುವ ಗಣಕೀಕರಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು