ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ‌ಆಕ್ರೋಶ

ಕಾರ್ಮಿಕ ಸಂಘಟನೆಗಳಿಂದ ಮುಷ್ಕರ l ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ l ಎಂದಿನಂತೆ ಸಾಗಿದ ಜನಜೀವನ
Last Updated 8 ಜನವರಿ 2020, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ‌ದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರ ನಗರದ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ‘ನಮ್ಮ ಮೆಟ್ರೊ’ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆ.ಆರ್. ಮಾರುಕಟ್ಟೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು.

ಪುರಭವನ ಮುಂಭಾಗದಲ್ಲಿ ಮೆರವಣಿಗೆ, ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಕಾರಣಕ್ಕೆ ಪೊಲೀಸ್ ಕಮಿಷನರ್‌ ವಿರುದ್ಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಉದ್ಯಾನ ಬಳಿ ಪ್ರತಿಭಟನೆ ನಡೆಸಿದ ಕಾರ್ಮಿಕ ಸಂಘಟನೆಗಳ ಸದಸ್ಯರು, ರಸ್ತೆಯಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (‌ಎನ್‌ಆರ್‌ಸಿ) ವಿರೋಧಿಸಿ ಕಾರ್ಮಿಕ ಮುಖಂಡರು ಮಾತನಾಡಿದಾಗ ಗದ್ದಲ ಉಂಟಾಯಿತು. ಪೌರತ್ವ ಕಾಯ್ದೆ ವಿಷಯ ಪ್ರಸ್ತಾಪಿಸುವುದು ಸರಿಯಲ್ಲವೆಂದು ಕೆಲವರು ಆಕ್ಷೇಪಿಸಿದಾಗ, ಮಾತಿನ ಚಕಮಕಿಯೂ ನಡೆಯಿತು. ವಿರೋಧ ವ್ಯಕ್ತಪಡಿಸಿದವರನ್ನು ಸ್ಥಳದಿಂದ ಪೊಲೀಸರು ದೂರ ಕರೆದೊಯ್ದರು.

ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ನಾಯಕ ಮೀನಾಕ್ಷಿ ಸುಂದರಂ, ‘ದೇಶದಲ್ಲಿ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದು, ಕಾರ್ಖಾನೆಗಳು ಮುಚ್ಚುತ್ತಿವೆ. ಸಮವಸ್ತ್ರ ಧರಿಸಿರುವ ನೌಕರರು ಬೀದಿಗೆ ಬಂದು ನಿಂತಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಜಾರಿಯಾಗುವಂಥ ಯೋಜನೆಗಳನ್ನು ಜಾರಿಗೆ ತರಬೇಕು. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

‘ಅಧಿಕಾರದಲ್ಲಿರುವವರ ಬೆನ್ನು ಹಿಡಿದು ನಗರ ಪೊಲೀಸ್ ಕಮಿಷನರ್ ಅವರು ಹುದ್ದೆ ಗಿಟ್ಟಿಸಿಕೊಂಡಿ
ದ್ದಾರೆ. ನಾವು ಮನಸ್ಸು ಮಾಡಿದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಕಮಿಷನರ್‌ ವಿರುದ್ಧ ಕಿಡಿಕಾರಿದರು.

ಎಐಟಿಯುಸಿ ಮುಖಂಡ ವಿಜಯಭಾಸ್ಕರ್‌, ‘ಹಲವು ಬಾರಿ ಪ್ರತಿಭಟನೆ ನಡೆಸಿ ಬೇಡಿಕೆ ಮುಂದಿಟ್ಟರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲಿ ನಮ್ಮ ಕೆಂಪು ಬಾವುಟ ಇತ್ತು. ನಿಮ್ಮ ಕೇಸರಿ ಬಾವುಟ ಬ್ರಿಟಿಷರ ಕಾಲ ಕೆಳಗೆ ಮಲಗಿತ್ತು. ಸಂವಿಧಾನ ಬಂದಿದ್ದೇ ನಮ್ಮ ಹೋರಾಟದಿಂದ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಷ್ಕರ ಬೆಂಬಲಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಸ್ ತಡೆಯಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದರು. ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಪೊಲೀಸರು ನಗರದಾದ್ಯಂತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರು. ಕೆ.ಆರ್. ಮಾರುಕಟ್ಟೆಯಲ್ಲಿ ಪೊಲೀಸ್ ಹಾಗೂ ಒಂದು ಕೆಎಸ್ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.

ಮುಷ್ಕರಕ್ಕೆ ವಿರೋಧ: ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ ಕರುನಾಡ ಸಂಘಟನೆಗಳ ಒಕ್ಕೂಟದ ಸದಸ್ಯರು, ಕೆ.ಆರ್‌. ಮಾರ್ಕೆಟ್‍ಗೆ ಬಂದ ವಾಹನ ಸವಾರರಿಗೆ, ಗ್ರಾಹಕರಿಗೆ, ವ್ಯಾಪಾರಿಗಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು.

ಬ್ಯಾಂಕ್ ಸೇವೆ ವ್ಯತ್ಯಯ

ಎಸ್‍ಬಿಐ ಹೊರತುಪಡಿಸಿ ಎಲ್ಲ ಬ್ಯಾಂಕ್, ಅಂಚೆ, ಎಲ್‍ಐಸಿ ನೌಕರರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬಹುತೇಕ ಗ್ರಾಹಕರು ತೊಂದರೆ ಅನುಭವಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT