ಶುಕ್ರವಾರ, ಏಪ್ರಿಲ್ 16, 2021
29 °C
ಕೃತಕ ಆಮ್ಲಜನಕದ ಕೊರತೆ –ಆತಂಕ ಪಡುವ ಅಗತ್ಯವಿಲ್ಲ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

ಕೋವಿಡ್‌: ಐಸಿಯು ದಾಖಲಾತಿ ಸಂಖ್ಯೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು)  ದಾಖಲಾಗುವವರ ಪ್ರಮಾಣದಲ್ಲಿ ಶೇ 62ರಷ್ಟು ಏರಿಕೆ ಕಂಡು ಬಂದಿದ್ದು, ಕೃತಕ ಆಮ್ಲಜನಕದ ಕೊರತೆ ತಲೆದೋರಿದೆ.

ಐಸಿಯುದಲ್ಲಿ ದಾಖಲಾಗಿದ್ದವರ ಸಂಖ್ಯೆ ಮಾ.28ರಂದು 204 ಇದ್ದರೆ, ಭಾನುವಾರ (ಏ.4) 331ರಷ್ಟಿತ್ತು. ಸೋಮವಾರಕ್ಕೆ ಆಗಲೇ 345ಕ್ಕೆ ಏರಿದೆ.

ಬೆಂಗಳೂರು ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ 100ರಷ್ಟು ಹೆಚ್ಚಾಗಿದೆ. ಅಂದರೆ, ಒಂದು ವಾರದಲ್ಲಿ 79ರಿಂದ 158ಕ್ಕೆ ಹೆಚ್ಚಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಸರಾಸರಿ 814 ಐಸಿಯು ಪ್ರಕರಣಗಳು ಇದ್ದವು. ದಿನಕ್ಕೆ 600 ಟನ್‌ನಷ್ಟು ಆಮ್ಲಜನಕ ಬೇಕಾಗುತ್ತಿತ್ತು. ಈಗಲೂ ಕೃತಕ ಆಮ್ಲಜನಿಕ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಬಗ್ಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆಮ್ಲಜನಕ ವ್ಯವಸ್ಥೆ ಅಳವಡಿಸಿರುವ 135 ಹಾಸಿಗೆಗಳು ಕೋವಿಡ್‌ ರೋಗಿಗಳಿಗೆ ಮೀಸಲಾಗಿಟ್ಟಿದ್ದರೆ, 50 ಹಾಸಿಗೆಗಳನ್ನು ಇತರ ರೋಗಿಗಳಿಗೆ ಮೀಸಲಿರಿಸಲಾಗಿದೆ.

‘ನಮ್ಮಲ್ಲಿ ಎಂಟು ಕಿಲೊಲೀಟರ್‌ ಆಮ್ಲಜನಕ ಸಂಗ್ರಹ ವ್ಯವಸ್ಥೆ ಇದೆ. ಈ ಮೊದಲು ಇಷ್ಟು ಆಮ್ಲಜನಕವನ್ನು ಮೂರರಿಂದ ಐದು ದಿನಗಳವರೆಗೆ ಪೂರೈಸುತ್ತಿದ್ದವು. ರೋಗಿಗಳ ಸಂಖ್ಯೆ ಹೆಚ್ಚಾದಂತೆ ಬಳಕೆ ಪ್ರಮಾಣ ಜಾಸ್ತಿ ಆಗಿದೆ. ಈಗ ಎರಡು ದಿನಗಳಿಗಷ್ಟೇ ಸಾಕಾಗುತ್ತದೆ. ಕೋವಿಡ್‌ಗೆ ಮೀಸಲಿಟ್ಟಿದ್ದ 130 ಹಾಸಿಗೆಗಳು ಭರ್ತಿಯಾಗಿವೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಆರ್. ವೆಂಕಟೇಶಯ್ಯ ಹೇಳಿದರು.

ಆಮ್ಲಜನಕ ಸಿಲಿಂಡರ್‌ ಪೂರೈಕೆದಾರ, ‘ಯುನಿಟಿ ಏರ್‌’ನ ಪವನ್‌ ಮೂರ್ತಿ, ‘ಕಳೆದ ವರ್ಷ 1,500 ಸಿಲಿಂಡರ್‌ ಪೂರೈಸಿದ್ದೆವು. ಈ ವರ್ಷದ ಮಾರ್ಚ್‌ನಿಂದ ಈವರೆಗೆ 400 ಸಿಲಿಂಡರ್‌ ಪೂರೈಸಿದ್ದೇವೆ’ ಎಂದು ಹೇಳಿದರು.

ಆತಂಕ ಪಡುವ ಅಗತ್ಯವಿಲ್ಲ: ‘ಕೃತಕ ಆಮ್ಲಜನಕದ ಸಹಾಯ ಬೇಕಾಗಿರುವ ರೋಗಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಒಂದು ವೇಳೆ ಈ ಪ್ರಕರಣಗಳ ಸಂಖ್ಯೆ ಜಾಸ್ತಿಯಾದರೂ ಎಲ್ಲ ವ್ಯವಸ್ಥೆ ಮಾಡಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು.

‘ನಗರದಲ್ಲಿ ಸದ್ಯ ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟಿರುವ 1,200 ಹಾಸಿಗೆಗಳ ಪೈಕಿ ಶೇ 70ರಷ್ಟು ಹಾಸಿಗೆಗಳಿಗೆ ಕೃತಕ ಆಮ್ಲಜನಕ ವ್ಯವಸ್ಥೆ ಅಳವಡಿಸಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೇಳಿದರು.

5 ತಿಂಗಳ ಬಳಿಕ 5 ಸಾವಿರ ಪ್ರಕರಣ !
ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸೋಮವಾರ ಒಂದೇ ದಿನ 5,279 ಹೊಸ ಪ್ರಕರಣಗಳು ವರದಿಯಾಗಿವೆ. ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳ ಸಂಖ್ಯೆ ಐದು ಸಾವಿರ ದಾಟಿದೆ.

ಅಕ್ಟೋಬರ್‌ನಲ್ಲಿ ದಿನಕ್ಕೆ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ನಂತರ ಈ ಸಂಖ್ಯೆ ಕ್ರಮೇಣ ಕಡಿಮೆಯಾಗಿ ಒಂದು ಸಾವಿರ ಆಸು–ಪಾಸು ಇತ್ತು. ತಿಂಗಳಿಂದೀಚೆಗೆ 3,500ದಿಂದ 4000ದವರೆಗೆ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವು.

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಸಾವಿನ ಸಂಖ್ಯೆ ದಾಖಲಾಗಿದೆ. 32 ಮಂದಿ ಮರಣ ಹೊಂದುವುದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 12,657ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಎರಡೇ ತಿಂಗಳಲ್ಲಿ 6 ಪಟ್ಟು ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ  42,483 ಮುಟ್ಟಿದೆ.

ರಾಜಧಾನಿಯಲ್ಲಿ 3,728 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, 18 ಜನ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 3, ಕಲಬುರ್ಗಿ 2, ಬಳ್ಳಾರಿ, ಬೀದರ್, ಹಾವೇರಿ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯಪುರ ಹಾಗೂ ಯಾದಗಿರಿಯಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ.

ಐಸಿಯು ಪ್ರಕರಣ ಸತತ ಏರಿಕೆ: ಸದ್ಯ 345 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುಗೆ ದಾಖಲಾಗುವವರ ಸಂಖ್ಯೆ ಒಂದು ವಾರದಿಂದ ಸತತ ಏರಿಕೆಯ ಹಾದಿಯಲ್ಲಿದೆ. ಮಾ.28ರಂದು 204 ಜನ ಇದ್ದರೆ, ಭಾನುವಾರ 331 ಇತ್ತು.  ಐಸಿಯುದಲ್ಲಿ ಹಾಸಿಗೆ ಕೊರತೆ ಒಂದೆಡೆಯಾದರೆ, ಕೃತಕ ಆಮ್ಲಜನಕದ ವ್ಯವಸ್ಥೆ ಹೊಂದಿರುವ ಹಾಸಿಗೆಗಳ ಕೊರತೆಯೂ ತಲೆದೋರುತ್ತಿದೆ.

97 ಸಾವಿರ ಪರೀಕ್ಷೆ: ರಾಜ್ಯದಲ್ಲಿ ಸೋಮವಾರ 4,229 ಆ್ಯಂಟಿಜೆನ್‌ ಹಾಗೂ 93,600 ಆರ್‌ಟಿ ಪಿಸಿಆರ್‌ ಸೇರಿದಂತೆ 97,829 ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈವರೆಗೆ 2.19 ಕೋಟಿ ಜನ ಪರೀಕ್ಷೆಗೆ ಒಳಗಾಗಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು