ಬೆಂಗಳೂರು: ‘ಬಿಲಾಲ್, ಮನ್ಸೂರ್ ಚಾಹಿಯೇ... ಪಾಕಿಸ್ತಾನ್ ಜಾನಾ ಹೈ’ ಎಂಬುದಾಗಿ ಘೋಷಣೆ ಕೂಗಿದ್ದ ಆರೋಪದಡಿ ಅಂಕುಶ್ (25) ಎಂಬುವವರನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
‘ಪಶ್ಚಿಮ ಬಂಗಾಳದ ಅಂಕುಶ್, ಹೋಟೆಲ್ ನಿರ್ವಹಣೆ ವಿಷಯದಲ್ಲಿ ಪದವೀಧರ. ವೈದ್ಯರೊಬ್ಬರ ಮಗನಾದ ಈತ, ಕೆಲಸ ಹುಡುಕಿಕೊಂಡು ಜನವರಿಯಲ್ಲಿ ನಗರಕ್ಕೆ ಬಂದಿದ್ದ. ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪಾಕಿಸ್ತಾನ ಪರ ಘೋಷಣೆ ಕೂಗಿರುವುದಾಗಿ ಸಾರ್ವಜನಿಕರು ನೀಡಿದ್ದ ಮಾಹಿತಿಯಂತೆ ಈತನನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಫರ್ಜಿ ವೆಬ್ ಸರಣಿಯಲ್ಲಿ ಬರುವ ಸಂಭಾಷಣೆಯನ್ನು ಯುವಕ ಪುನರುಚ್ಚರಿಸಿದ್ದನೆಂಬುದು ವಿಚಾರಣೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.
‘ಆರೋಪಿ ಪಾಕ್ ಪರ ಘೋಷಣೆ ಕೂಗಿಲ್ಲವೆಂಬುದು ತನಿಖೆಯಿಂದ ತಿಳಿದುಬಂದಿದೆ. ಮಾನಸಿಕ ಅಸ್ವಸ್ಥನಂತಿರುವ ಅಂಕುಶ್ ವರ್ತನೆಯಿಂದ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಈತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು, ಯಾವುದೇ ಅಪರಾಧದಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಇಲ್ಲ. ಈತನನ್ನು ವಶಕ್ಕೆ ಪಡೆದಿರುವ ಬಗ್ಗೆ ತಂದೆಗೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ನಂತರ, ಮುಚ್ಚಳಿಕೆ ಬರೆಸಿಕೊಂಡು ಯುವಕನನ್ನು ಬಿಟ್ಟು ಕಳುಹಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಆಗಿದ್ದೇನು?: ‘ಬಿಟಿಎಂ ಲೇಔಟ್‌ನ ಎರಡನೇ ಹಂತದಲ್ಲಿ ವಾಸವಿರುವ ಅಂಕುಶ್, ಚಹಾ ಕುಡಿಯಲು ಅಂಗಡಿಗೆ ಹೋಗಿದ್ದ. ಟೀ ಕುಡಿಯುತ್ತ ಇಯರ್‌ಫೋನ್ ಹಾಕಿಕೊಂಡು ‘ಫರ್ಜಿ’ ವೆಬ್ ಸರಣಿ ನೋಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ವೆಬ್ ಸರಣಿಯ ಎಸಿಪಿ ಪಾತ್ರಧಾರಿಯೊಬ್ಬ, ‘ಬಿಲಾಲ್, ಮನ್ಸೂರ್ ಚಾಹಿಯೇ... ಪಾಕಿಸ್ತಾನ್ ಜಾನಾ ಹೈ...’ ಎಂದು ಹೇಳಿದ್ದ. ಅದನ್ನೇ ಅಂಕುಶ್ ಪುನರುಚ್ಚರಿಸಿ ಜೋರಾಗಿ ಹಲವು ಬಾರಿ ಕೂಗಾಡಿದ್ದ. ಅಕ್ಕ–ಪಕ್ಕದಲ್ಲಿದ್ದ ಜನ, ಪಾಕ್ ಪರ ಘೋಷಣೆ ಕೂಗುತ್ತಿದ್ದಾನೆಂದು ತಪ್ಪಾಗಿ ಗ್ರಹಿಸಿ ಸುತ್ತುವರಿದಿದ್ದರು. ಠಾಣೆಗೆ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಅಂಕುಶ್‌ನನ್ನು ವಶಕ್ಕೆ ಪಡೆದಿದ್ದರು. ಇದರಿಂದಾಗಿ ಸ್ಥಳ ದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು’ ಎಂದು ಅವರು ತಿಳಿಸಿದರು.
‘ಫರ್ಜಿ ವೆಬ್ ಸರಣಿ ವೀಕ್ಷಿಸಲಾಗಿದೆ. ಅದರಲ್ಲಿ ಈ ಸಂಭಾಷಣೆ ಇದೆ. ಹೀಗಾಗಿ, ಯುವಕನ ಮೇಲೆ ಸದ್ಯಕ್ಕೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.