ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್: ಚುನಾವಣಾ ವಿಷಯವಾಗಲಿ

ಪಂಚಾಯತ್ ರಾಜ್ ಪರಿಷತ್ ಸಂಸ್ಥಾಪನಾ ದಿನಾಚರಣೆ l ಮಣಿಶಂಕರ್ ಅಯ್ಯರ್ ಪ್ರತಿಪಾದನೆ
Last Updated 23 ಡಿಸೆಂಬರ್ 2019, 5:55 IST
ಅಕ್ಷರ ಗಾತ್ರ

ಬೆಂಗಳೂರು: ‘ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ವಿಷಯ ಲೋಕಸಭೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚರ್ಚೆಯ ವಿಷಯವಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದರು.‌

ನಗರದಲ್ಲಿ ಭಾನುವಾರ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಜನರ ಬದುಕು ಹಸನುಗೊಳಿಸಲು ಪಂಚಾಯತ್ ರಾಜ್ ವ್ಯವಸ್ಥೆಯೊಂದೇ ನಮ್ಮ ಮುಂದಿರುವ ಮಾರ್ಗ. ಅದನ್ನು ಬಲಪಡಿಸುವ ಇಚ್ಛಾಶಕ್ತಿ ರಾಜಕೀಯ ಪಕ್ಷಗಳಿಗೆ ಬೇಕು. ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದರೆ ಅದು ಚುನಾವಣಾ ವಿಷಯವಾಗಬೇಕು’ ಎಂದು ಅವರು ಹೇಳಿದರು.

‘ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಅಲ್ಲಿನ ಮುಖ್ಯಮಂತ್ರಿಗೆ ಇದು ಆದ್ಯತಾ ವಿಷಯ ಅಲ್ಲವೇ ಅಲ್ಲ. ಇದೇ ಸ್ಥಿತಿ ಹಲವು ರಾಜ್ಯಗಳಲ್ಲೂ ಇದೆ’ ಎಂದರು.

‌‘ಕರ್ನಾಟಕದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಕೆ.ಆರ್.ರಮೇಶ್‌ ಕುಮಾರ್ ನೇತೃತ್ವದ ಸಮಿತಿ ವರದಿ ಆಧರಿಸಿ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಬಿಟ್ಟುಕೊಡಲಾಗಿದೆ. ಆರ್ಥಿಕ ನೆರವೂ ದೊರೆತರೆ ಕರ್ನಾಟಕ ದೇಶದಲ್ಲೇ ಮಾದರಿ ರಾಜ್ಯವಾಗಲಿದೆ’ ಎಂದರು.

ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರು, ‘ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ರಾಜೀವ್ ಗಾಂಧಿ ಅಪಾರ ನಂಬಿಕೆ ಹೊಂದಿದ್ದರು. ಕಾಂಗ್ರೆಸ್ ಸೇರಿ ಯಾವುದೇ ಪಕ್ಷವೂ ಈ ವ್ಯವಸ್ಥೆ ಬಲಪಡಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ’ ಎಂದು ವಿಷಾದಿಸಿದರು.

‘ಆಳುವ ಪಕ್ಷದ ಆದ್ಯತೆ ವಿಷಯಗಳು ಈಗ ಬೇರೆಯೇ ಇವೆ. ರಾಷ್ಟ್ರಧ್ವಜ ಬದಲಾಗಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಗೀತೆ ಬದಲಾದರೂ ಆಶ್ಚರ್ಯ ಇಲ್ಲ. ಇದನ್ನೆಲ್ಲಾ ನೋಡಿದರೆ ರಾಷ್ಟ್ರಪಿತ ಗಾಂಧೀಜಿ ಪ್ರತಿಮೆಗಳನ್ನೆ‌ಲ್ಲಾ ಒಡೆದು ಅಲ್ಲಿ ಗೋಡ್ಸೆ ಪ್ರತಿಮೆಗಳನ್ನು ಸ್ಥಾಪಿಸುವ ಕಾಲ ದೂರ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT