ಬೆಂಗಳೂರು: ಗುಪ್ತಾಂಗದಲ್ಲಿ ಎರಡು ಮೊಬೈಲ್ ಬಚ್ಚಿಟ್ಟುಕೊಂಡು ಕೈದಿಗೆ ನೀಡಲು ಬಂದಿದ್ದ ಸಂದರ್ಶಕಿ ಉಮ್ಮೆಶಾಮ (25) ಎಂಬುವವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.
’ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ನಿವಾಸಿಯಾದ 25 ವರ್ಷದ ಮಹಿಳೆ ಉಮ್ಮೆಶಾಮ, ಕೈದಿ ಮಹಮ್ಮದ್ ನದೇಮ್ ಅಲಿಯಾಸ್ ಬಡ್ಡೆಯನ್ನು ನೋಡಲು ಡಿ. 22ರಂದು ಸಂಜೆ ಜೈಲಿಗೆ ಬಂದಿದ್ದರು. ಮಹಿಳೆ ಮೇಲೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಗುಪ್ತಾಂಗದಲ್ಲಿ ಎರಡು ಬೇಸಿಕ್ ಮೊಬೈಲ್‌ಗಳು ಸಿಕ್ಕವು’ ಎಂದು ಜೈಲಿನ ಮೂಲಗಳು ತಿಳಿಸಿವೆ.
‘ಉಮ್ಮೆಶಾಮ ಅವರನ್ನು ವಶಕ್ಕೆ ಪಡೆದು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ. ಉಮ್ಮೆಶಾಮ ಹಾಗೂ ಕೈದಿ ಮಹಮ್ಮದ್ ನದೇಮ್ ಇಬ್ಬರ ವಿರುದ್ಧವೂ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ’ ಎಂದೂ ಹೇಳಿವೆ.
ಅಕ್ರಮ ಕೃತ್ಯಕ್ಕೆ ಮೊಬೈಲ್: ‘ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲಿಗೆ ಬಂದಿದ್ದ ಮಹಮ್ಮದ್ ನದೇಮ್, ಜೈಲಿನಿಂದಲೇ ಅಕ್ರಮ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. ಇದಕ್ಕಾಗಿ ಮಹಿಳೆ ಉಮ್ಮೆಶಾಮ ಮೂಲಕ ಮೊಬೈಲ್ ತರಿಸಿಕೊಳ್ಳಲು ಮುಂದಾಗಿದ್ದ.ಮಹಿಳೆಯಿಂದ ಮೊಬೈಲ್ ತರಿಸಿ ಕೊಂಡರೆ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವುದಿಲ್ಲವೆಂದು ಕೈದಿ ಅಂದುಕೊಂಡಿದ್ದ. ಆದರೆ, ಮಹಿಳಾ ಭದ್ರತಾ ಸಿಬ್ಬಂದಿಯೇ ಉಮ್ಮೆಶಾಮ ಅವರನ್ನು ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಕೃತ್ಯ ಬಯಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.