ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕ್ರಾಂತಿಯ ದಾರಿದೀಪ ‘ಪ್ಯಾರಿಸ್ ಕಮ್ಯೂನ್‌’

Last Updated 5 ಜೂನ್ 2021, 22:31 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ಕಾರ್ಮಿಕ ಕ್ರಾಂತಿಗಳ ಅಡಿಪಾಯ ಎನಿಸಿದ ಪ್ಯಾರಿಸ್ ಕಮ್ಯೂನ್‌ಗೆ (ಪ್ಯಾರಿಸ್‌ ಕ್ರಾಂತಿ) 150 ವರ್ಷವಾದ ನಿಮಿತ್ತ ಕ್ರಾಂತಿಯ ಯಶೋಗಾಥೆಯನ್ನು ವಿವರಿಸುವ ‘ಪ್ಯಾರಿಸ್‌ ಕಮ್ಯೂನ್‌ 150’ ಪುಸ್ತಕದ ಕನ್ನಡ ಅವತರಣಿಕೆಯನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

ಕನ್ನಡದಲ್ಲಿ ‘ಋತುಮಾನ’ ಪ್ರಕಾಶನವು ಈ ಕೃತಿಯನ್ನು ಪ್ರಕಟಿಸಿದ್ದು, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದರು. 15 ದೇಶಗಳ 21 ಪ್ರಕಾಶನಗಳು 18 ಭಾಷೆಗಳಲ್ಲಿ ಏಕಕಾಲಕ್ಕೆ ಈ ಪುಸ್ತಕವನ್ನು ಬಿಡುಗಡೆಗೊಳಿಸಿದವು.

ಕಾರ್ಮಿಕ ಮುಖಂಡ ವಸಂತ ರಾಜ್, ‘ದುಡಿಯುವ ಜನರ ಆರ್ಥಿಕ, ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಪರ್ಯಾಯ ಸಾಮಾಜಿಕ ವ್ಯವಸ್ಥೆಗೆ ನಾಂದಿ ಹಾಡಿದ್ದು 1871ರ ಪ್ಯಾರಿಸ್ ಕ್ರಾಂತಿ. ಜರ್ಮನಿ ದಾಳಿಯನ್ನು ಫ್ರಾನ್ಸ್‌ನ ಆಡಳಿತ ವರ್ಗವು ಎದುರಿಸಲು ವಿಫಲವಾದಾಗ, ಕಾರ್ಮಿಕರೇ ಕ್ರಾಂತಿಯೆದ್ದು, ಇಡೀ ವ್ಯವಸ್ಥೆಯನ್ನು ಕೈಗೆ ತೆಗೆದುಕೊಂಡರು. ಕಾರ್ಮಿಕರ ನೇರ ಮತ್ತು ಆಳವಾದ ಪ್ರಜಾಪ್ರಭುತ್ವ ವ್ಯವಸ್ಥೆ ರಚನೆಯಾಗಿತ್ತು. 72 ದಿನಗಳಲ್ಲಿ ಈ ವ್ಯವಸ್ಥೆ ಕುಸಿದರೂ, ಇದು ನಂತರದ ಕಾರ್ಮಿಕ ಕ್ರಾಂತಿಗಳಿಗೆ ದಾರಿದೀಪವಾಯಿತು’ ಎಂದರು.

ಡಾ.ಬಿ.ಆರ್.ಮಂಜುನಾಥ್, ‘ಪ್ಯಾರಿಸ್‌ ಕಮ್ಯೂನ್ ಇತಿಹಾಸದ ದೊಡ್ಡ ಪಾಠ. ಯಾವುದೇ ವರ್ಗದ ಪ್ರಭುತ್ವವನ್ನು, ಮತ್ತೊಂದು ವರ್ಗವು ಬಲಾತ್ಕಾರವಾಗಿ ತನ್ನ ಉದ್ದೇಶ ಸಾಧನೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ಕ್ರಾಂತಿ ನಿರೂಪಿಸಿತು. ಇಂತಹ ಮೈನವಿರೇಳಿಸುವ ಅನೇಕ ಅಂಶಗಳು ಪುಸ್ತಕದಲ್ಲಿವೆ’ ಎಂದರು.

ಈ ಕ್ರಾಂತಿಯ ಸಮಯದಲ್ಲಿ ರಚನೆಯಾಗಿದ್ದ ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಹಾಡನ್ನು ಕನ್ನಡಕ್ಕೆ ಭಾಷಾಂತರಿಸಿ ಕೆ.ನೀಲಾ ಓದಿದರು. ಬ್ರೆಕ್ಟ್‌ ಕವಿಯ ಕವನದ ಕನ್ನಡದ ರೂಪವನ್ನು ಲೇಖಕ ಬಿ. ಪೀರ್‌ ಬಾಷ ವಾಚಿಸಿದರು. ಜನಶಕ್ತಿ ಮಾಧ್ಯಮದ ಕೆ.ಎಸ್. ವಿಮಲಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT