ಸೋಮವಾರ, ಮೇ 10, 2021
26 °C
ಯುಪಿಎಚ್‌ಸಿಗಳ ಮುಂದೆ ಸರತಿ ಸಾಲು

ಕೋವಿಡ್‌ ಪ್ರಕರಣ ದಿಢೀರ್‌ ಹೆಚ್ಚಳ:‌ ಪರೀಕ್ಷೆಗೆ ಕಾದು ಹೈರಾಣಾಗುತ್ತಿರುವ ಜನ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಹೆಚ್ಚಳ ಕಂಡ ಬಂದ ಬೆನ್ನಲ್ಲೇ, ಸ್ವತಃ ಮುಂದೆ ಬಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ಏರಿಕೆ ಕಂಡಿದೆ. ಬಿಬಿಎಂಪಿ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಯುಪಿಎಚ್‌ಸಿ) ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಜನ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ನಾನು ಬಂಗಾರಪ್ಪ ಬಡಾವಣೆಯ ಯು‍ಪಿಎಚ್‌ಸಿಗೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ತೆರಳಿದ್ದೆ. ಅಲ್ಲಿ 100ಕ್ಕೂ ಅಧಿಕ ಮಂದಿ ಪರೀಕ್ಷೆ ಮಾಡಿಸಿಕೊಳ್ಳಲು ಕಾದಿದ್ದರು. ನನ್ನ ಸರದಿಗಾಗಿ ತಾಸುಗಟ್ಟಲೆ ಕಾಯಬೇಕಾದ ಸ್ಥಿತಿ ಇತ್ತು’ ಎಂದು ರಾಜರಾಜೇಶ್ವರಿ ನಗರದ ನಿವಾಸಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕಿನ ತೀವ್ರ ಲಕ್ಷಣ ಇರುವವರೂ ಪರೀಕ್ಷೆ ಮಾಡಿಸಿಕೊಳ್ಳಲು ಯುಪಿಎಚ್‌ಸಿಗಳಿಗೆ ಬರುತ್ತಾರೆ. ಅವರಿಗೆ ಸೋಂಕು ಬಂದಿರುವ ಸಾಧ್ಯತೆ ಜಾಸ್ತಿ ಇರುತ್ತದೆ. ಇಲ್ಲಿಗೆ ಬರುವವರು ಮಾಸ್ಕ್‌ ಧರಿಸಿರುತ್ತಾರೆ. ಆದರೂ, ಯುಪಿಎಚ್‌ಸಿ ಕೇಂದ್ರಗಳ ಮೂಲಕ ಸೋಂಕು ಹರಡದಂತೆ ತಡೆಯಲು ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ದಿಢೀರ್‌ ಹೆಚ್ಚಿದ್ದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹಾಸಿಗೆಗಳ ಕೊರತೆಯೂ ಎದುರಾಗಿದೆ. ಕೋವಿಡ್‌ ದೃಢಪಟ್ಟು ಗಂಭೀರ ಸಮಸ್ಯೆ ಎದುರಾದರೆ ಸರ್ಕಾರದ ಮೂಲಕ ಹಂಚಿಕೆ ಆಗುವ ಹಾಸಿಗೆಗಳನ್ನು ಪಡೆಯಲು ಸುಲಭವಾಗುತ್ತದೆ ಎಂಬ ಕಾರಣಕ್ಕ ಸೋಂಕು ಲಕ್ಷಣ ಇರುವವರೆಲ್ಲ ಬಿಬಿಎಂಪಿಯ ಯುಪಿಎಚ್‌ಸಿಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಬಿಬಿಎಂಪಿ ಪ್ರತಿ ಯುಪಿಎಚ್‌ಸಿ ವ್ಯಾಪ್ತಿಯಲ್ಲಿ ಕನಿಷ್ಠ 800 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಿಸುವಂತೆ ಗುರಿ ನಿಗದಿ ಪಡಿಸಿದೆ. ಬಸ್‌ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ಮುಂತಾದ ಜನಜಂಗುಳಿ ಇರುವ ಪ್ರದೇಶಗಳಿಗೆ ತೆರಳಿ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಪ್ರತಿಯೊಂದು ಯುಪಿಎಚ್‌ಸಿ ವ್ಯಾಪ್ತಿಯಲ್ಲಿ ನಾಲ್ಕೈದು ಸಂಚಾರ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲೂ ಮೂಗಿನ ದ್ರವದ ಮಾದರಿ ಸಂಗ್ರಹಿಸಲು ಒಬ್ಬರು ಹಾಗೂ ಮಾಹಿತಿಯನ್ನು ಸಾಫ್ಟ್‌ವೇರ್‌ನಲ್ಲಿ ಅಳವಡಿಸುವುದಕ್ಕೆ ಒಬ್ಬರು ಸಿಬ್ಬಂದಿ ಇರುತ್ತಾರೆ. ಯುಪಿಎಚ್‌ಸಿಯಲ್ಲೂ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ.

‘ಯುಪಿಎಚ್‌ಸಿಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪರೀಕ್ಷೆ ನಡೆಸುತ್ತೇವೆ. ಸಂಗ್ರಹಿಸಲಾದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲು ಮಧ್ಯಾಹ್ನದ ನಂತರ ವ್ಯವಸ್ಥೆ ಮಾಡುತ್ತೇವೆ. ಒಂದು ವೇಳೆ ಯುಪಿಎಚ್‌ಸಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರೀಕ್ಷೆ ನಡೆಯದಿದ್ದರೆ ಅಲ್ಲಿನ ಸಿಬ್ಬಂದಿ ಸಂಚಾರ ತಂಡಗಳಿಗೆ ಮಾಹಿತಿ ರವಾನಿಸುತ್ತಾರೆ. ಈ ತಂಡಗಳು ನಿಗದಿತ ಗುರಿ ತಲುಪಲು ಅಗತ್ಯವಿರುವಷ್ಟು ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ವಾರದ ಈ ಹಿಂದೆ ಯುಪಿಎಚ್‌ಸಿಗಳಲ್ಲಿ ಸ್ವಯಂಪ್ರೇರಿತವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಏಕಾಏಕಿ ಭಾರಿ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ. ಇದರ ಜೊತೆ ಕೋವಿಡ್‌ ಲಸಿಕೆ ಅಭಿಯಾನವನ್ನೂ ಕೈಗೊಳ್ಳಬೇಕಾಗಿದೆ. ಇಲ್ಲಿಗೆ ಎಲ್ಲ ವಯೋಮಾನದವರೂ ಬರುತ್ತಾರೆ. ಅವರಲ್ಲಿ ಕೆಲವರು ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನೂ ಹೊಂದಿರುತ್ತಾರೆ. ಅವರು ಕಾಯುವುದಕ್ಕೆ ವ್ಯವಸ್ಥೆ ಒದಗಿಸುವುದು ಹಾಗೂ ಯುಪಿಎಚ್‌ಸಿಗಳ ಮೂಲಕ ಸೋಂಕು ಹರಡದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದೇ ದೊಡ್ಡ ಸವಾಲಾಗಿದೆ’ ಎಂದು ಅವರು ತಿಳಿಸಿದರು.

‘ಸದ್ಯಕ್ಕೆ ಕೋವಿಡ್‌ ಪರೀಕ್ಷೆಗಳನ್ನು ನಡೆಸುವುದಕ್ಕೆ ಕಿಟ್‌ಗಳ ಕೊರತೆ ಇಲ್ಲ’ ಎಂದೂ ಅವರು ಮಾಹಿತಿ ನೀಡಿದರು.

ಯುಪಿಎಚ್‌ಸಿಗಳಲ್ಲೂ ಸುರಕ್ಷತಾ ಕ್ರಮಗಳಿಲ್ಲ

ಕೋವಿಡ್‌ ಹರಡದಂತೆ ತಡೆಯಲು ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಜನ ಪಾಲಿಸದಿರುವುದು ಕೆಲವು ಯುಪಿಎಚ್‌ಸಿಗಳ ಬಳಿ ಕಂಡುಬಂತು. ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ನಿಲ್ಲುವುದಕ್ಕೆ ವ್ಯವಸ್ಥೆ ಕಲ್ಪಿಸಿರದ ಕಾರಣ ಜನ ಒತ್ತೊತ್ತಾಗಿ ನಿಂತಿರುವುದು ಕಂಡು ಬಂತು. ಸರದಿ ಸಾಲಿನಲ್ಲಿ ನಿಂತು ಸುಸ್ತಾದವರು ವಿಶ್ರಾಂತಿ ಪಡೆಯುವುದಕ್ಕೆ ಯಾವುದೇ ಆಸನ ವ್ಯವಸ್ಥೆಗಳಿಲ್ಲ.

'ಕೋವಿಡ್‌ ಪರೀಕ್ಷೆ– ಕಟ್ಟೆಚ್ಚರ ವಹಿಸಿ’

‘ಕೋವಿಡ್‌ ಪರೀಕ್ಷಾ ಕೇಂದ್ರಕ್ಕೆ ಬರುವವರಲ್ಲಿ ಕೋವಿಡ್‌ ಸೊಂಕಿತರು ಅಥವಾ ಸೋಂಕು ಇಲ್ಲದವರೂ ಇರಬಹುದು. ಸುರಕ್ಷತಾ ಕ್ರಮಗಳಬನ್ನು ಸರಿಯಾಗಿ ಪಾಲಿಸದೇ ಹೋದರೆ, ಪರೀಕ್ಷೆ ಮಾಡಿಸಿಕೊಳ್ಳಲು ಬಂದವರು ಸೋಂಕು ತಗುಲಿಸಿಕೊಳ್ಳುವ ಅಪಾಯವೂ ಇದೆ. ಹಾಗಾಗಿ ಇಲ್ಲಿ ಕಟ್ಟೆಚ್ಚರ ವಹಿಸಬೇಕು. ಮಾಸ್ಕ್‌ ಧರಿಸಿ, ಕೈಗಳನ್ನು ಸ್ಯಾನಿಟೈಸರ್‌ನಿಂದ ತೊಳೆದುಕೊಂಡರಷ್ಟೇ ಸಾಲದು ಅಂತರ ಕಾಪಾಡುವಿಕೆಗೆ ಮಹತ್ವ ನೀಡಬೇಕು. ಅನಗತ್ಯವಾಗಿ ಇಲ್ಲಿನ ಯಾವುದೇ ವಸ್ತುಗಳನ್ನು ಮುಟ್ಟಬಾರದು’ ಎಂದು ಬಿಬಿಎಂಪಿ ಸಿಬ್ಬಂದಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು