ಶುಕ್ರವಾರ, ಜೂನ್ 25, 2021
27 °C

ಪಡಿತರಕ್ಕಾಗಿ ಬೆಳಿಗ್ಗೆ 6 ಗಂಟೆಯಿಂದಲೇ ಸರದಿಯಲ್ಲಿ ನಿಂತ ಫಲಾನುಭವಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ಕಾರಣ ಪಡಿತರ ಪಡೆಯಲು ರಾಜ್ಯದಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಫಲಾನುಭವಿಗಳು ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ಗುರುವಾರ ಬೆಳ್ಳಂಬೆಳಿಗ್ಗೆ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ರಸ್ತೆಯುದ್ದಕ್ಕೂ ಮೈಲುದ್ದದ ಸಾಲು ಕಂಡುಬಂತು.

ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗುತ್ತಿದ್ದು, ಈ ಅವಧಿಯಲ್ಲಿ ಆಹಾರ ಧಾನ್ಯ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಹೀಗಾಗಿ, ಈ ಅವಧಿಯ ಒಳಗೆ ರೇಷನ್‌ ಪಡೆದು ಮರಳಿ ಮನೆ ಸೇರುವ ಧಾವಂತದಲ್ಲಿ ಜನರಿದ್ದರು.

ಸರದಿಯಲ್ಲಿ ನಿಂತ ಫಲಾನುಭವಿಗಳ ಮಧ್ಯೆ ಅಂತರ ಕಾಪಾಡಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಗುರುತು ಹಾಕಲಾಗಿದೆ. ಆದರೆ, ಕೆಲವು ಕಡೆ ಜನರು ಅಂತರ ಮರೆತು, ಗುಂಪುಗೂಡಿ ಕಾಯುತ್ತಿದ್ದ ದೃಶ್ಯ ಕಂಡುಬಂತು.

‘ಪಡಿತರ ಪಡೆಯಲು ನಿಗದಿಪಡಿಸಿದ ಕಾಲಾವಕಾಶ ಕಡಿಮೆ ಇರುವುದರಿಂದ ಮೊದಲ ಬಾರಿಗೆ ಸರದಿ ಸಾಲಿನಲ್ಲಿ ನಿಂತು ಆಹಾರಧಾನ್ಯ ಪಡೆಯುತ್ತಿದ್ದೇನೆ. ಸೋಂಕು ಹರಡುವ ಭೀತಿಯ ಕಾರಣಕ್ಕೆ ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಳ್ಳಬೇಕಾಗಿದೆ’ ಎಂದು ಶ್ರೀನಗರದ ನ್ಯಾಯಬೆಲೆ ಅಂಗಡಿಯೊಂದರ ಮುಂದೆ ಸರದಿಯಲ್ಲಿ ನಿಂತಿದ್ದ ಫಲಾನುಭವಿ ನಾಗರಾಜು ತಿಳಿಸಿದರು.

ರಾಜ್ಯದ ಪಡಿತರದ ಜೊತೆಗೆ ಕೇಂದ್ರ ಸರ್ಕಾರ ಪ್ರತಿ ಬಿಪಿಎಲ್‌ (ಆದ್ಯತಾ) ಮತ್ತು ಅಂತ್ಯೋದಯ ಅನ್ನ ಯೋಜನೆಯ (ಎಎವೈ)ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್‌ ತಿಂಗಳಲ್ಲಿ ಹೆಚ್ಚುವರಿಯಾಗಿ ತಲಾ 5 ಕಿಲೋ ಅಕ್ಕಿ ವಿತರಿಸಲಾಗುತ್ತಿದೆ. ಕೊರೊನಾ ಕಾರಣದಿಂದ ಬಯೋಮೆಟ್ರಿಕ್‌ ಪಡೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಆಧಾರ್‌ ಜೊತೆ ಸಂಪರ್ಕ ಕಲ್ಪಿಸಿದ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿ ಸಂಖ್ಯೆ ಪಡೆದು ಪಡಿತರ ವಿತರಿಸಲಾಗುತ್ತಿದೆ.

ವೃದ್ಧರು, ಅನಾರೋಗ್ಯಪೀಡಿತರು ಮತ್ತು ಅಂಗವಿಕಲರಿಗೆ ವಿನಾಯಿತಿ ಸೌಲಭ್ಯದಡಿ ಪಡಿತರ ವಿತರಿಸಲಾಗುತ್ತಿದ್ದು, ಪಡಿತರಚೀಟಿದಾರರ ಪರಿಶೀಲನಾ ಪಟ್ಟಿಯ ಆಧಾರದಲ್ಲಿಯೂ ನೇರವಾಗಿ ಆಹಾರಧಾನ್ಯ ವಿತರಿಸಲಾಗತ್ತಿದೆ. ಅಲ್ಲದೆ, ನಗರದಲ್ಲಿ ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿದ್ದು, ಅವರಿಗೆ ಪೋರ್ಟೆಬಿಲಿಟಿ ಸೌಲಭ್ಯದ ಮೂಲಕ ಪಡಿತರ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಹಾರ ಇಲಾಖೆ ಆಯುಕ್ತರು ತಿಳಿಸಿದರು.

’ರಾಜ್ಯದಲ್ಲಿ ಇದೇ 11ರವರೆಗೆ 17.77ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿದಾರರು ಪಡಿತರ ಪಡೆದುಕೊಂಡಿದ್ದಾರೆ. ಪಡಿತರ ಚೀಟಿದಾರರಿಗೆ ಅನಾನುಕೂಲವಾದರೆ ನಿಯಂತ್ರಣ ಕೊಠಡಿ ಸಂಖ್ಯೆ 1967, 1800-425-9339 ಮತ್ತು 14445 ದೂರು ದಾಖಲಿಸಬಹುದು. ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಥವಾ ತಹಶೀಲ್ದಾರ್‌ಗೂ ದೂರು ಸಲ್ಲಿಸಬಹುದು’ ಎಂದೂ ಅವರು ತಿಳಿಸಿದ್ದಾರೆ.

‘ದುರ್ಬಳಕೆ ತಪ್ಪಿಸಲು ಕ್ರಮ’
‘ಎಲ್ಲರಿಗೂ ಪರಿಶೀಲನಾ ಪಟ್ಟಿ (ಚೆಕ್‍ಲಿಸ್ಟ್) ಅಥವಾ ಯಾವುದಾದರೂ ಮೊಬೈಲ್‍ಗೆ ಒಟಿಪಿ ನೀಡುವ ಮೂಲಕ ಪಡಿತರ ವಿತರಿಸಲು ಅವಕಾಶ ನೀಡಬೇಕೆಂದು ರಾಜ್ಯ ಪಡಿತರ ವಿತರಕರ ಸಂಘ ಮನವಿ ಮಾಡಿತ್ತು. ಆದರೆ, ಯಾವುದಾದರೂ ಮೊಬೈಲ್‍ಗೆ ಒಟಿಪಿ ಸೌಲಭ್ಯ ನೀಡಿ ಪಡಿತರ ವಿತರಿಸಲು ಅವಕಾಶ ನೀಡಿದರೆ ದುರ್ಬಳಕೆಗೆ ಅವಕಾಶ ಆಗುವ ಸಾಧ್ಯತೆ ಇದೆ. ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಈ ಅವಕಾಶ ನೀಡಿದ ಪರಿಣಾಮ, ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಒಂದೇ ಮೊಬೈಲ್ ನಂಬರ್ ಬಳಸಿ ಅನೇಕ ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಿಸಿರುವ ಪ್ರಕರಣಗಳು ನಡೆದಿವೆ. ಹೀಗಾಗಿ, ಈ ಬಾರಿ ಅದಕ್ಕೆ ಅವಕಾಶ ನೀಡಿಲ್ಲ’ ಎಂದೂ ಆಹಾರ ಇಲಾಖೆಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು