ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನತ ಹುದ್ದೆಗಳಲ್ಲಿ ಕಾಣದ ಈಡಿಗರು: ಶಾಸಕ ವಿ. ಸುನೀಲ್‌ ಕುಮಾರ್‌

ನಾರಾಯಣಗುರು ಮಹಿಳಾ ಸಮಾವೇಶದಲ್ಲಿ ವಿ. ಸುನೀಲ್‌ ಕುಮಾರ್‌
Published : 29 ಸೆಪ್ಟೆಂಬರ್ 2024, 16:22 IST
Last Updated : 29 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ಬೆಂಗಳೂರು: ಐಎಎಸ್‌, ಐಪಿಎಸ್‌ ಸಹಿತ ಉನ್ನತ ಸ್ಥಾನಗಳಲ್ಲಿ ಈಡಿಗ ಸಮುದಾಯದವರು ಬಹಳ ಕಡಿಮೆ ಇದ್ದಾರೆ. ಶಿಕ್ಷಣ ಮತ್ತು ಜಾಗೃತಿಗೆ ಮಹತ್ವ ನೀಡಿದರೆ ಸಂಘಟನೆ ಯಶಸ್ವಿಯಾಗುತ್ತದೆ ಎಂದು ಶಾಸಕ ವಿ. ಸುನೀಲ್‌ ಕುಮಾರ್‌ ತಿಳಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘವು ನಾರಾಯಣಗುರು ಜಯಂತಿ ಪ್ರಯುಕ್ತ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿವರ್ತನಶ್ರೀ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ನಾರಾಯಣ ಗುರು ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಆಯಕಟ್ಟಿನ ಸ್ಥಾನಗಳಲ್ಲಿ ಈಡಿಗ ಸಮುದಾಯದವರು ಇರಬೇಕಿದ್ದರೆ ನಮ್ಮ ತಾಯಂದಿರು ಮಕ್ಕಳಿಗೆ ಶಿಕ್ಷಣ ನೀಡಲು ಮುತುವರ್ಜಿ ವಹಿಸಬೇಕು’ ಎಂದು ಸಲಹೆ ನೀಡಿದರು.

ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾಶ್ರಮದ ವಿನಯ್ ಗುರೂಜಿ ಮಾತನಾಡಿ, ‘ಆಗಿನ ಕಾಲದಲ್ಲಿಯೇ ನಾರಾಯಣ ಗುರುಗಳು ಹೋರಾಟದ ಮೂಲಕ ಮಹಿಳೆಯರಿಗೆ ನ್ಯಾಯ ಒದಗಿಸಿಕೊಟ್ಟಿದ್ದರು. ಶಿವಗಿರಿಯಲ್ಲಿ ಮುಂದಿನ ವರ್ಷನಾರಾಯಣ ಗುರುಗಳ ಜಯಂತ್ಯುತ್ಸವ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದ ಅಧ್ಯಕ್ಷ ಸೈದಪ್ಪ ಗುತ್ತೇದಾರ್ ಮಾತನಾಡಿ, ‘ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಯಲ್ಲಿರುವ ಈಡಿಗ, ಬಿಲ್ಲವ ಸಮಾಜದ 26 ಉಪ ಪಂಗಡಗಳಿವೆ. ಅವೆಲ್ಲ ಒಂದಾಗಬೇಕು. ಈ ಸಮುದಾಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಡವರಿದ್ದಾರೆ. ಸಂಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ಅವರನ್ನು ಮೇಲೆತ್ತುವ ಕಾರ್ಯವಾಗಬೇಕು’ ಎಂದು ಹೇಳಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿ, ‘ಮಹಿಳೆಯರು ಶೋಷಣೆಗೆ ಒಳಗಾಗುವುದು ನಿಂತಿಲ್ಲ ಎಂಬುದಕ್ಕೆ ಪ್ರಜ್ವಲ್ ರೇವಣ್ಣ ಪ್ರಕರಣ ಸಹಿತ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಹಲವು ಪ್ರಕರಣಗಳೇ ಸಾಕ್ಷಿ. ಮಹಿಳೆಗೆ ಇನ್ನೂ ಸಮಾನತೆ ಬಂದಿಲ್ಲ’ ಎಂದು ವಿಷಾದಿಸಿದರು.

ಸೋಲೂರು ಆರ್ಯ ಈಡಿಗ ಪೀಠಾಧಿಪತಿ ವಿಖ್ಯಾತಾನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

‘ಉದ್ಯೋಗಸ್ಥ ಮಹಿಳೆಯರಿಗೆ ವಸತಿ’ ಯೋಜನೆಗೆ ಚಾಲನೆ ನೀಡಲಾಯಿತು. ಮಹಿಳಾ ಸಬಲೀಕರಣಕ್ಕಾಗಿ ‘ಆಚಾರದ ಶರಣೆ ಅಕ್ಕಮ್ಮ ಟ್ರಸ್ಟ್‌’ ಉದ್ಘಾಟಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT