ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಸರ್ಕಾರದ ಮಾಲೀಕ. ಅವರು ನೀಡುವ ತೆರಿಗೆ ಹಣದಿಂದಲೇ ನೌಕರರಿಗೆ ವೇತನ. ಅವರು ಕಚೇರಿಗೆ ಬಂದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೆರಿಗೆ ನೀಡುವ ಜನರೇ ಸರ್ಕಾರದ ನಿಜವಾದ ಮಾಲೀಕರು. ಆಡಳಿತ ವ್ಯವಸ್ಥೆ ರೂಪಿತವಾಗಿರುವುದೇ ಜನಸಾಮಾನ್ಯರಿಗೆ. ಮಹಿಳೆಯರು, ಮಕ್ಕಳು, ದುರ್ಬಲರಿಗೆ ಯೋಜನೆ ರೂಪಿಸಲು, ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲು ಇದರಿಂದ ಸಾಧ್ಯವಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಎರಡು ಚಕ್ರಗಳು, ಎರಡೂ ಚಕ್ರಗಳು ಒಟ್ಟಿಗೆ, ಒಂದೇ ದಿಕ್ಕಿನಲ್ಲಿ, ಒಂದೇ ವೇಗದಲ್ಲಿ ಸಾಗಿದರೆ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಕಾರ್ಯಾಂಗದ ಒಂದು ಭಾಗವಾಗಿರುವ ನೌಕರರರು ಪ್ರಾಮಾಣಿಕವಾಗಿ, ನಿಷ್ಠೆಯಿಂದ ನಿತ್ಯವೂ ಒಂದು ತಾಸು ಹೆಚ್ಚಿನ ಅವಧಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭೈರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ ಕಾರ್ಯದರ್ಶಿ ಹೇಮಲತಾ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ರಜನೀಶ್ ಗೋಯಲ್ ಉಪಸ್ಥಿತರಿದ್ದರು.
ಈಗಾಗಲೇ ದೊಡ್ಡ ಸನ್ಮಾನ ಆಗಿದೆಯಲ್ಲ?
ನೌಕರರ ಸಂಘ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊ ಮ್ಮಾಯಿ, ಈಗ ಸನ್ಮಾನ ಏಕೆ? 20 ದಿನಗಳ ಹಿಂದೆ ದೊಡ್ಡ ಸನ್ಮಾನವನ್ನೇ ಮಾಡಿದ್ದೀರಲ್ಲ. ಆ ಸನ್ಮಾನದ ಮುಂದೆ ಈ ಸಣ್ಣ ಸನ್ಮಾನ ಏಕೆ? ಎಲ್ಲ ಸನ್ಮಾನ ಸ್ವೀಕರಿಸುವ ಗುಣ ಬದುಕಿನಲ್ಲಿ ಸಹಜ ಎನ್ನುವ ಮೂಲಕ ನೌಕರರು ನಡೆಸಿದ್ದ ಮುಷ್ಕರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.