ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿಯಲ್ಲಿ ಸುಗಂಧ ದ್ರವ್ಯ ಡಬ್ಬಿ ಜಜ್ಜುವಾಗ ಸ್ಫೋಟ; ಬಾಲಕನ ಸ್ಥಿತಿ ಚಿಂತಾಜನಕ

Published 19 ಫೆಬ್ರುವರಿ 2024, 15:38 IST
Last Updated 19 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ರಾಮಸಂದ್ರದಲ್ಲಿರುವ ಗುಜರಿ ಮಳಿಗೆಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 10 ವರ್ಷದ ಬಾಲಕನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಭಾನುವಾರ ಸಂಜೆ ಸಂಭವಿಸಿದ್ದ ಅವಘಡದಲ್ಲಿ ಗುಜರಿ ಮಳಿಗೆ ಮಾಲೀಕ ಚಿಕ್ಕಬಸ್ತಿಯ ಸಲೀಂ (32), ಮೆಹಬೂಬ್ ಪಾಷಾ (32) ಹಾಗೂ ಬಾಲಕ ಅರ್ಬಾಜ್ (14) ಸಜೀವ ದಹನವಾಗಿದ್ದಾರೆ. ಮೂವರ ಮೃತದೇಹಗಳು ಸಂಪೂರ್ಣ ಸುಟ್ಟಿದ್ದು, ಅವುಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

‘ಗುಜರಿ ಮಳಿಗೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟು, ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಕ್ಕ– ಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸುವ ಭಯವಿತ್ತು. ಆದರೆ, ಸಿಬ್ಬಂದಿ ತ್ವರಿತವಾಗಿ ಬೆಂಕಿ ಹತೋಟಿಗೆ ತಂದರು’ ಎಂದು ಸ್ಥಳೀಯರು ಹೇಳಿದರು.

ಅವೈಜ್ಞಾನಿಕ ಕೆಲಸ: ‘ಗುಜರಿ ವ್ಯಾಪಾರಿ ಸಲೀಂ, ಸುಗಂಧ ದ್ರವ್ಯದ 500ಕ್ಕೂ ಹೆಚ್ಚು ತಗಡಿನ ಡಬ್ಬಿಗಳನ್ನು ತಂದಿದ್ದರು. ಬಹುತೇಕ ಡಬ್ಬಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅನಿಲ ಇತ್ತು. ಅದನ್ನು ಹೊರಗೆ ತೆಗೆದು, ನಂತರ ಡಬ್ಬಿ ಜಜ್ಜಿ ಸಮತಟ್ಟು ಮಾಡಬೇಕಿತ್ತು’ ಎಂದು ಪೊಲೀಸರು ಹೇಳಿದರು.

‘ಮೂರು ದಿನಗಳಿಂದ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಅವೈಜ್ಞಾನಿಕವಾಗಿ ಡಬ್ಬಿ ಜಜ್ಜುತ್ತಿದ್ದರು. ಇದಕ್ಕಾಗಿ ಕಲ್ಲು ಬಳಸುತ್ತಿದ್ದರು. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಮಳಿಗೆಯಲ್ಲಿ ಕೈಗೊಂಡಿರಲಿಲ್ಲ’ ಎಂದರು.

ಪಕ್ಕದ ಮನೆಯವರ ಜೊತೆ ಬಂದಿದ್ದರು
‘ಮೃತ ಅರ್ಬಾಜ್ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ವರ್ಷಗಳ ಬಾಲಕ, ಪಕ್ಕದ ಮನೆಯವರ ಜೊತೆಯಲ್ಲಿ ಮಳಿಗೆಗೆ ಬಂದಿದ್ದರು ಎಂಬುದಾಗಿ ಸಂಬಂಧಿಕರಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಅನಿಲ ಸೋರಿಕೆಯಿಂದ ಬೆಂಕಿ: ‘ಕಾರ್ಮಿಕರು ಡಬ್ಬಿಯಲ್ಲಿ ಅನಿಲ ಇರುವ ಸ್ಥಿತಿಯಲ್ಲೇ ಜಜ್ಜುತ್ತಿದ್ದರು. ಭಾನುವಾರ ಸಂಜೆ 5.30 ಗಂಟೆ ಸುಮಾರಿಗೆ ಡಬ್ಬಿಯೊಂದನ್ನು ಕಲ್ಲಿನಿಂದ ಜಜ್ಜುವಾಗ ಅನಿಲ ಸೋರಿಕೆಯಾಗಿ ಬೆಂಕಿಯ ಕಿಡಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಚೀಲಗಳಲ್ಲಿ ಡಬ್ಬಿಗಳನ್ನು ತುಂಬಿಡಲಾಗಿತ್ತು. ಒಂದು ಡಬ್ಬಿ ಸ್ಫೋಟವಾಗುತ್ತಿದ್ದಂತೆ, ಉಳಿದ ಡಬ್ಬಿಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ನಂತರ, 10ಕ್ಕೂ ಹೆಚ್ಚು ಡಬ್ಬಿಗಳು ಸರಣಿಯಲ್ಲಿ ಸ್ಫೋಟವಾಗಿದ್ದವು. ಇದರಿಂದಲೇ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿ ಇಡೀ ಮಳಿಗೆ ಸುಟ್ಟು ಹೋಗಿದೆ’ ಎಂದರು.

ಸರಕು ಸಾಗಣೆ ವಾಹನ ಚಾಲಕ: ‘ಮೃತ ಮೆಹಬೂಬ್ ಪಾಷಾ, ಸರಕು ಸಾಗಣೆ ವಾಹನ ಚಾಲಕ. ಗುಜರಿಯಲ್ಲಿದ್ದ ಸುಗಂಧ ದ್ರವ್ಯಗಳ ಡಬ್ಬಿಗಳನ್ನು ಕೊಂಡೊಯ್ಯಲು ಮಳಿಗೆಗೆ ಬಂದಿದ್ದರು. ಕಾರ್ಮಿಕರು, ಜಜ್ಜಿದ್ದ ಡಬ್ಬಿಗಳನ್ನು ಚೀಲದಲ್ಲಿ ತುಂಬಿ ವಾಹನಕ್ಕೆ ತುಂಬುತ್ತಿದ್ದಾಗಲೇ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

ನಿವೇಶನ ಮಾಲೀಕನಿಗಾಗಿ ಹುಡುಕಾಟ: ‘ಅಕ್ರಮವಾಗಿ ಗುಜರಿ ಮಳಿಗೆ ತೆರೆದಿದ್ದ ಮಾಲೀಕ ಸಲೀಂ ಹಾಗೂ ನಿವೇಶನ ಮಾಲೀಕ ವಿಠ್ಠಲ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸಲೀಂ ಈಗಾಗಲೇ ತೀರಿಕೊಂಡಿದ್ದಾರೆ. ವಿಠ್ಠಲ್ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಹುಡುಕಾಟ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

ಬೆಂಕಿ ಅವಘಡ ಸಂಭವಿಸಿದ್ದ ಸ್ಥಳದಲ್ಲಿದ್ದ ಸುಗಂದ ದ್ರವ್ಯ ಡಬ್ಬಿಗಳ ಅವಶೇಷಗಳು
ಬೆಂಕಿ ಅವಘಡ ಸಂಭವಿಸಿದ್ದ ಸ್ಥಳದಲ್ಲಿದ್ದ ಸುಗಂದ ದ್ರವ್ಯ ಡಬ್ಬಿಗಳ ಅವಶೇಷಗಳು

‘ಕಾರಣ ನಿಗೂಢ: ತಜ್ಞರ ವರದಿ ಆಧರಿಸಿ ಕ್ರಮ’

‘ಸುಗಂಧ ದ್ರವ್ಯ ಡಬ್ಬಿಗಳಲ್ಲಿ ಯಾವ ಅನಿಲ ಇತ್ತು ? ದೊಡ್ಡ ಪ್ರಮಾಣದಲ್ಲಿ ಸ್ಫೋಟ ಹೇಗೆ ಸಂಭವಿಸಿತು ? ಡಬ್ಬಿ ಹೊರತಾಗಿ ಬೇರೆ ಯಾವುದಾದರೂ ವಸ್ತುಗಳನ್ನು ಮಳಿಗೆಯಲ್ಲಿ ಸಂಗ್ರಹಿಸಲಾಗಿತ್ತೆ ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಅವಘಡದ ಕಾರಣ ನಿಗೂಢವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಲಾ ₹ 1 ಲಕ್ಷ ಪರಿಹಾರ’

ಅವಘಡದಲ್ಲಿ ಮೃತಪಟ್ಟ ವ್ಯಕ್ತಿಗಳ ಮನೆಗಳಿಗೆ ಸೋಮವಾರ ಭೇಟಿ ನೀಡಿದ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಟಿ. ಸೋಮಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹ 1 ಲಕ್ಷ ಪರಿಹಾರ ಸಹ ನೀಡಿದರು. ಗಾಯಾಳುಗಳಿಗೂ ₹ 50 ಸಾವಿರ ನೀಡಿ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT