ಭಾನುವಾರ, ಜೂಲೈ 5, 2020
27 °C
ಪ್ರತ್ಯೇಕ ಸ್ನಾನದ ಕೋಣೆ, ಶೌಚಾಲಯ ಅಗತ್ಯ

ಪಿ.ಜಿ.ಗಳಿಗೆ ಷರತ್ತುಬದ್ಧ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವ ಜನತೆ ನಗರ ಪ್ರದೇಶಗಳಿಗೆ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಸ್ನಾನದ ಕೋಣೆ, ಶೌಚಾಲಯದ ವ್ಯವಸ್ಥೆ ಸೇರಿದಂತೆ ವಿವಿಧ ಮುಂಜಾಗರೂಕ ಕ್ರಮಗಳೊಂದಿಗೆ ಸೇವೆ ನೀಡಬೇಕು ಎಂದು ಆರೋಗ್ಯ ಇಲಾಖೆಯು ಪೇಯಿಂಗ್‌ ಗೆಸ್ಟ್‌ (ಪಿಜಿ) ಕಟ್ಟಡಗಳ ಮೇಲ್ವಿಚಾರಕರಿಗೆ ಸೂಚಿಸಿದೆ. 

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಬಹುತೇಕ ಪಿ.ಜಿಗಳು ಬಾಗಿಲು ಹಾಕಿದ್ದವು. ಕೆಲವರು ಇದಕ್ಕೂ ಮೊದಲೇ ನಗರ ತೊರೆದರೆ, ಇನ್ನೂ ಕೆಲವರು  ಅನಿವಾರ್ಯವಾಗಿ ಊರುಗಳಿಗೆ ತೆರಳಿದ್ದರು. ಈಗ ಲಾಕ್‌ ಡೌನ್‌ ಸಡಿಲಿಸಿ, ಸಾರ್ವಜನಿಕ ಸಾರಿಗೆ ಪ್ರಾರಂಭಿಸಿರುವುದರಿಂದ ಕೆಲವರು ನಗರ ಪ್ರದೇಶಗಳಿಗೆ ವಾಪಸ್ ಬರುತ್ತಿದ್ದಾರೆ. ಎರಡೂವರೆ ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ್ದ ಪಿ.ಜಿಗಳು ಬಾಗಿಲು ತೆರೆದು, ಬಂದವರಿಗೆ ವ್ಯವಸ್ಥೆ ಮಾಡಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಪಿ.ಜಿ ಕಟ್ಟಡಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಬಿಡುಗಡೆ ಮಾಡಿದೆ.  

ಕೊರೊನಾ ಸೋಂಕಿತ ವ್ಯಕ್ತಿ ಸೀನಿದಾಗ ಹಾಗೂ ಕೆಮ್ಮಿದಾಗ ಹೊರಹೊಮ್ಮುವ ತುಂತುರು ಹನಿಗಳಿಂದ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ. ಅದರಲ್ಲೂ ಪೇಯಿಂಗ್‌ ಗೆಸ್ಟ್ ಕಟ್ಟಡ‌ಗಳಲ್ಲಿ ನೂರಾರು ಮಂದಿ ಆಶ್ರಯ ಪಡೆಯುವ ಜತೆಗೆ ಕೆಲವೆಡೆ ಒಂದೇ ಕೊಠಡಿಯಲ್ಲಿ ಹಲವರು ಇರುತ್ತಾರೆ. ಹಾಗಾಗಿ  ಪರಸ್ಪರ ಅಂತರ, ನೆಲಗಳನ್ನು ಸೋಂಕು ನಿವಾರಕದ ಮೂಲಕ ಸ್ವಚ್ಛಗೊಳಿಸುವಿಕೆ, ಅನ್ಯರಿಗೆ ಪ್ರವೇಶ ನಿರ್ಬಂಧ ಸೇರಿದಂತೆ ವಿವಿಧ ಕ್ರಮಗಳೊಂದಿಗೆ ಸೇವೆ ನೀಡಲು ಇಲಾಖೆ ಸೂಚಿಸಿದೆ. 

ಹಾಸಿಗೆಗಳ ನಡುವೆ 2 ಮೀ. ಅಂತರ

* ಪ್ರತಿ ಕೊಠಡಿಗೂ ಹೊಂದಿಕೊಂಡು ಸ್ನಾನಗೃಹ ಹಾಗೂ ಶೌಚಾಲಯ ಕೊಠಡಿ ಇರಬೇಕು

* ಹಾಸಿಗೆಗಳ ನಡುವೆ ಕನಿಷ್ಠ ಎರಡು ಮೀಟರ್‌ಗಳ ಅಂತರ ಇರಬೇಕು

* ಪ್ರತಿನಿತ್ಯ ಕಟ್ಟಡದ ಹೊರಗೆ ಹಾಗೂ ಒಳಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ, ಸ್ವಚ್ಛಮಾಡಬೇಕು

* ಬಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು

* ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಬೇಕು

* ಸೋಂಕಿತ ವ್ಯಕ್ತಿ ಇದ್ದಲ್ಲಿ ಇಡೀ ಕಟ್ಟಡಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, 24 ಗಂಟೆಯ ಬಳಿಕ ಪುನರಾರಂಭ ಮಾಡಲು ಅವಕಾಶ ನೀಡಲಾಗುತ್ತದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು