ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಖಾಲಿ ಮಾಡಿಸಿದ್ದಕ್ಕೆ ಕೊಲೆ ಸಂಚು: ಅರೋಪಿಗಳ ಸೆರೆ, ಪೆಟ್ರೋಲ್ ಬಾಂಬ್‌ ಜಪ್ತಿ

Last Updated 10 ಮೇ 2022, 4:24 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಮೂವರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು, ಅವರಿಂದ ಪೆಟ್ರೋಲ್ ಬಾಂಬ್‌ಗಳನ್ನು ಜಪ್ತಿ ಮಾಡಿದ್ದಾರೆ.

ಸ್ಥಳೀಯ ನಿವಾಸಿಗಳಾದ ಸೈಯದ್ ಅಸ್ಗರ್, ಫಯಾಜ್ ಉಲ್ಲಾ ಹಾಗೂ ಮುನಾವರ್ ಬಂಧಿತರು.

‘ಆರೋಪಿ ಫಯಾಜ್ ಉಲ್ಲಾ, ಸಾರಾಯಿಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ಹಲವು ವರ್ಷಗಳಿಂದ ವಾಸವಿದ್ದ. ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದರೂ ಕ್ಯಾರೆ ಎಂದಿರಲಿಲ್ಲ. ಮಾಲೀಕರಿಗೇ ಬೆದರಿಕೆ ಹಾಕುತ್ತಿದ್ದ. ಇದು ಗೊತ್ತಾಗುತ್ತಿದ್ದಂತೆ ಮಹಮ್ಮದ್ ಅಜೀಮುದ್ದಿನ್ ಎಂಬುವವರು, ಫಯಾಜ್‌ಗೆ ಎಚ್ಚರಿಕೆ ನೀಡಿ ಮನೆ ಖಾಲಿ ಮಾಡಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಅಪರಾಧ ಹಿನ್ನೆಲೆಯುಳ್ಳ ಫಯಾಜ್, ಮನೆ ಖಾಲಿ ಮಾಡಿಸಿದರೆಂಬ ಕಾರಣಕ್ಕೆ ಮಹಮ್ಮದ್ ಅಜೀಮುದ್ದಿನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಇತರ ಆರೋಪಿಗಳಿಂದಲೂ ಸಹಕಾರ ಪಡೆದಿದ್ದ’ ಎಂದೂ ತಿಳಿಸಿದರು.

‘ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಪಿಎಸ್‌ಐ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ. ನಾಡ ಪಿಸ್ತೂಲ್, ಮಚ್ಚು, 2 ಲಾಂಗ್, ಜೀವಂತ ಪೆಟ್ರೋಲ್ ಗುಂಡು ಹಾಗೂ ಪೆಟ್ರೋಲ್ ತುಂಬಿಟ್ಟಿದ್ದ 10 ಬಿಯರ್ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

8 ಪ್ರಕರಣದಲ್ಲಿ ಆರೋಪಿ: ‘ಬಂಧಿತ ಫಯಾಜ್ ವಿರುದ್ಧ ಬಾಗಲೂರು, ಸಿಟಿ ಮಾರ್ಕೆಟ್, ಬಾಣಸವಾಡಿ ಹಾಗೂ ಕಾಟನ್‌ ಪೇಟೆ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಇನ್ನೊಬ್ಬ ಬಂಧಿತ ಸೈಯದ್ ಅಸ್ಗರ್ ವಿರುದ್ಧವೂ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT