ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಆಗಮನ ಹಿನ್ನೆಲೆ: ವಿಮಾನ ನಿಲ್ದಾಣ ರಸ್ತೆಯಲ್ಲಿ ದಟ್ಟಣೆ ಸಾಧ್ಯತೆ

ನಗರಕ್ಕೆ ಪ್ರಧಾನಿ ಮೋದಿ ಆಗಮನ l ಪರ್ಯಾಯ ಮಾರ್ಗ ಬಳಕೆಗೆ ಸೂಚನೆ
Last Updated 19 ಜೂನ್ 2022, 21:24 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನ ಮಂತ್ರಿನರೇಂದ್ರ ಮೋದಿ ಅವರು ನಗರಕ್ಕೆ ಸೋಮವಾರ ಆಗಮಿಸಲಿದ್ದು, ಈ ವೇಳೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲಿ
ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಕೋರಿದ್ದಾರೆ.

ಕೊಮ್ಮಘಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದು, ಅವರು ತೆರಳುವ ಮಾರ್ಗದಲ್ಲಿ ಸಂಚಾರ ಬದಲಾವಣೆ ಸಹ ಮಾಡಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಸಂಚಾರಕ್ಕೆ ಸಿಗ್ನಲ್ ಮುಕ್ತ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಕಾವೇರಿ ಜಂಕ್ಷನ್, ಮೇಖ್ರಿ ವೃತ್ತ, ಹೆಬ್ಬಾಳ ಮೇಲ್ಸೇತುವೆ ಹಾಗೂ ಸುತ್ತಮುತ್ತ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು, ಪರ್ಯಾಯ
ಮಾರ್ಗ ಬಳಸಬೇಕು’ ಎಂದುಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರು ಸಾರ್ವಜನಿಕರಲ್ಲಿ
ಕೋರಿದ್ದಾರೆ.

‘ಮೈಸೂರು ರಸ್ತೆ ಮತ್ತು ನೈಸ್ ರಸ್ತೆ ಕಡೆಯಿಂದ ಕೆಂಗೇರಿ ಕಡೆಗೆ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗಿನ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ಮಧ್ಯಾಹ್ನ 12.30 ಗಂಟೆಯಿಂದ 2.30 ಗಂಟೆಯವರೆಗೆ ನಿರ್ಬಂಧಿಸಲಾಗಿದೆ’ ಎಂದೂ ತಿಳಿಸಿದ್ದಾರೆ.

‘ಮೈಸೂರು ರಸ್ತೆ ಹಾಗೂ ವಿಮಾನ ನಿಲ್ದಾಣ ರಸ್ತೆಯಲ್ಲಿ‌ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ಪೊಲೀಸರ ಬಿಗಿ ಭದ್ರತೆ

ಕೆಂಗೇರಿ ಬಳಿಯ ಕೊಮ್ಮಘಟ್ಟದ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದು, ಈ ಸ್ಥಳದಲ್ಲಿ ಭದ್ರತೆಗಾಗಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಕಮಿಷನರ್ ಪ್ರತಾಪ್ ರೆಡ್ಡಿ ಅವರು ಕಾರ್ಯಕ್ರಮ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು.

‘ತಲಾ ಇಬ್ಬರು ಹೆಚ್ಚುವರಿ ಕಮಿಷನರ್‌ಗಳು, ಜಂಟಿ ಕಮಿಷನರ್‌ಗಳು, 8 ಡಿಸಿಪಿಗಳು, 25 ಎಸಿಪಿಗಳು, 123 ಇನ್‌ಸ್ಪೆಕ್ಟರ್‌ಗಳು, 125 ಸಬ್‌ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆಯಲ್ಲಿರಲಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆ, ರಾಜ್ಯ ಪೊಲೀಸ್ ಮೀಸಲು ಪಡೆ ಸಿಬ್ಬಂದಿಯನ್ನೂ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಕೆಲಸ ಮಾಡುವ ‘ಗರುಡ’ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗುತ್ತಿದೆ’ ಎಂದೂ ತಿಳಿಸಿದರು.

ಬೆಂಗಳೂರು ವಿವಿಗೆ ರಜೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಜೂನ್‌ 20ರಂದು ರಜೆ ನೀಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT