ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಹಾದುಹೋದ 14 ಕಿ.ಮೀ ರಸ್ತೆ ಅಭಿವೃದ್ಧಿಗೆ ₹23.50 ಕೋಟಿ ಖರ್ಚು

ರಸ್ತೆ ಅಭಿವೃದ್ಧಿ ಕಾರ್ಯ ಹಗಲು–ರಾತ್ರಿ ನಿರ್ವಹಿಸಿದ ಬಿಬಿಎಂಪಿ
Last Updated 21 ಜೂನ್ 2022, 15:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಹಾದುಹೋದ 14 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿ ₹23.50 ಕೋಟಿ ಖರ್ಚು ಮಾಡಿದೆ. ಆರು ಹೆಲಿಪ್ಯಾಡ್ ನಿರ್ಮಿಸಲು ತಲಾ ಒಂದಕ್ಕೆ ₹8 ಲಕ್ಷದಂತೆ ಒಟ್ಟು ₹48 ಲಕ್ಷ ವೆಚ್ಚವಾಗಿದೆ.

‘ಪ್ರಧಾನಿ ಅವರು ಬರುವ ಕಾರ್ಯಕ್ರಮ 15 ದಿನಗಳ ಮುಂಚೆಯೇ ನಿಗದಿಯಾಗಿತ್ತು. ಅವರು ಬಂದು ಹೋಗುವ ದಾರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಶಿಷ್ಟಾಚಾರ. ಮುಖ್ಯ ಆಯುಕ್ತರ ವಿವೇಚನೆಗೆ ಮೀಸಲಿಟ್ಟಿದ್ದ ಅನುದಾನ ಬಳಸಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಅನುಮೋದನೆ ಪಡೆಯಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಎನ್‌.ಬಿ. ರವೀಂದ್ರ ತಿಳಿಸಿದರು.

‘ಬಳ್ಳಾರಿ ರಸ್ತೆಯಲ್ಲಿ 2.4 ಕಿಲೋ ಮೀಟರ್ ಅಭಿವೃದ್ಧಿಗೆ ₹4.06 ಕೋಟಿ, ತುಮಕೂರು ರಸ್ತೆಯಲ್ಲಿ 900 ಮೀಟರ್‌ಗೆ ₹1.55 ಕೋಟಿ, ಜ್ಞಾನಭಾರತಿ ಆವರಣದಲ್ಲಿ 3.60 ಕಿ.ಮೀಗೆ ₹6.05 ಕೋಟಿ, ಮೈಸೂರು ರಸ್ತೆಯಲ್ಲಿ 150 ಮೀಟರ್‌ಗೆ ₹35 ಲಕ್ಷ ಮತ್ತು ಕೊಮ್ಮಘಟ್ಟ ರಸ್ತೆಯಲ್ಲಿ 7 ಕಿ.ಮೀಗೆ ₹11.50 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ವಿವರಿಸಿದರು.

‘ಸರ್ವೀಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಬೀದಿ ದೀಪಗಳ ಅಳವಡಿಕೆ, ರಸ್ತೆ ವಿಭಜಕ, ಅಕ್ಕ–ಪಕ್ಕದ ತಿರುವುಗಳೂ ಅಭಿವೃದ್ಧಿಗೊಂಡಿವೆ. ವಾರದಿಂದ ಹಗಲು–ರಾತ್ರಿ ಕಾಮಗಾರಿ ನಿರ್ವಹಿಸಲಾಯಿತು’ ಎಂದರು.

‘ಈಗ ಅಭಿವೃದ್ಧಿಪಡಿಸಿರುವ ರಸ್ತೆಗಳಲ್ಲೇ ವೈಟ್‌ ಟಾಪಿಂಗ್ ರಸ್ತೆ ನಿರ್ಮಿಸುವ ಉದ್ದೇಶವಿದ್ದರೆ ಪರಿಶೀಲಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಮಗಾರಿ ಪುನರಾವರ್ತನೆಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಸ್ತೆ ಗುಂಡಿಗಳನ್ನು ಮುಚ್ಚಲು ಮಳೆಯ ಕಾರಣ ನೀಡಲಾಗುತ್ತದೆ. ಈ ರಸ್ತೆಗಳ ಅಭಿವೃದ್ಧಿಗೆ ಮಳೆ ಅಡ್ಡಿಯಾಗಲಿಲ್ಲವೇ’ ಎಂಬ ಪ್ರಶ್ನೆಗೆ, ‘ಸಾಮಾನ್ಯ ಜನ ಓಡಾಡುವ ರಸ್ತೆಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ಬಂದು ಹೋದ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗಿದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT