ಬುಧವಾರ, ಡಿಸೆಂಬರ್ 7, 2022
23 °C

ಕೆಂಪೇಗೌಡರ 108 ಅಡಿಯ ‘ಪ್ರಗತಿಯ ಪ್ರತಿಮೆ’ ಅನಾವರಣ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ (ಪ್ರಗತಿಯ ಪ್ರತಿಮೆ) ಮತ್ತು ಟರ್ಮಿನಲ್‌–2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ.

ವಿಧಾನಸೌಧದ ಆವರಣದಲ್ಲಿರುವ ಸಂತ ಕನಕದಾಸ, ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ ಮತ್ತು ‘ಭಾರತ ಗೌರವ ಕಾಶಿ ದರ್ಶನ’ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಅಮೃತ 2.0 ಯೋಜನೆಗೂ ಚಾಲನೆ ನೀಡಿದ ಬಳಿಕ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಲಿದ್ದಾರೆ.

ಶುಕ್ರವಾರ ಕನಕದಾಸ ಜಯಂತಿಯ ದಿನವೂ ಆಗಿರುವುದರಿಂದ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಕಾಗಿನೆಲೆ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಭಾಗವಹಿಸುವರು. ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸ್ಫಟಿಕಪುರ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಕಳೆದ ಜೂನ್‌ನಲ್ಲೂ ಮೋದಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಆಗ ಬೆಂಗಳೂರು ಉಪನಗರ ರೈಲು ಮಾರ್ಗ ಯೋಜನೆಯ ಕಾಮಗಾರಿಗೆ ಶಿಲಾನ್ಯಾಸ ಸೇರಿ ಸುಮಾರು ₹27 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಚಾಲನೆ ನೀಡಿದ್ದರು. ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದರ ಭಾಗವಾಗಿ ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಮಿಷನ್‌ 150 ಗೆ ಗುರಿ ನೀಡಿದ್ದಾರೆ. ಚುನಾವಣೆ ಸಿದ್ಧತೆಯ ಬಗ್ಗೆ ರಾಜ್ಯದ ವರಿಷ್ಠರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಕಾರ್ಯಕ್ರಮಗಳ ವಿವರ

* 10.30 ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮನ

* 10.36 ರಿಂದ 10.40 ಕನಕದಾಸ ಪ್ರತಿಮೆ ಮತ್ತು ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ

* 10.50 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ವಂದೇ ಭಾರತ್‌’ ರೈಲಿಗೆ ಹಸಿರು ನಿಶಾನೆ

* 11.01 ಕ್ಕೆ ‘ಭಾರತ ಗೌರವ ದರ್ಶನ– ಕಾಶಿ ದರ್ಶನ’ ರೈಲಿಗೆ ಹಸಿರು ನಿಶಾನೆ

* 11.50 ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ರ ಉದ್ಘಾಟನೆ

* 12.22 ಕ್ಕೆ ನಾಡಪ್ರಭು ಕೆಂಪೇಗೌಡರ ‘ಪ್ರಗತಿ ಪ್ರತಿಮೆ’ ಅನಾವರಣ

* 1.09 ಕ್ಕೆ ಅಮೃತ್–2 ಯೋಜನೆಗೆ ಚಾಲನೆ ಮತ್ತು ಸಾರ್ವಜನಿಕ ಸಭೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು