ನೆಲಮಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಲು ಸಿಎಸ್‌ಸಿ ಕೇಂದ್ರಗಳು ಶ್ರಮಿಸುತ್ತಿವೆ ಎಂದು ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಇ) ರಾಜ್ಯ ವ್ಯವಸ್ಥಾಪಕ ಶೈಲೇಂದರ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಿಎಸ್‌ಸಿ ವಿಎಲ್‌ಇ (ವಿಲೇಜ್ ಲೆವೆಲ್ ಎಂಟರ್‌ಪ್ರನರ್) ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಂಗವಾಗಿ ಮೂರು ದಿನಗಳು ಆಯೋಜಿಸಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಇ-ಶ್ರಮ್ ಯೋಜನೆಯ ಉಚಿತ ನೊಂದಣಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಾದ್ಯಂತ ಸುಮಾರು 4 ಲಕ್ಷಕ್ಕೂ ಹೆಚ್ಚು ಸಿಎಸ್‌ಇ ಕೇಂದ್ರಗಳಿವೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಮತ್ತು ಉದ್ಯಮ ಸೇವೆಗಳನ್ನು ಒದಗಿಸಲು ನೆರವಾಗುತ್ತಿವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ 25ಕ್ಕೂ ಹೆಚ್ಚು ಕುಶಲಕರ್ಮಿ ಸಮುದಾಯಕ್ಕೆ ಉಚಿತ ಕೌಶಲ ತರಬೇತಿ ನೀಡಿ 3 ಲಕ್ಷಕ್ಕೂ ಅಧಿಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ದೇಶದಾದ್ಯಂತ ನೋಂದಣಿ ಕಾರ್ಯದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ. 50 ಸಾವಿರಕ್ಕೂ ಹೆಚ್ಚು ನೋಂದಣಿ ಮಾಡಲಾಗಿದೆ ಎಂದರು.
ತಾಲ್ಲೂಕು ಕಾರ್ಮಿಕ ನಿರೀಕ್ಷಕ ಧನಪಾಲ್ ನಾಯಕ್, ಟ್ರಸ್ಟ್‌ನ ಗೌರವಾಧ್ಯಕ್ಷ ಆರ್.ಉಮಾಶಂಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಮೃತ್ಯುಂಜಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಂತರಾಜು, ಸೌಮ್ಯ, ಶೈಲಜಾ, ರತ್ನಮ್ಮ, ಟ್ರಸ್ಟ್‌ನ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ತ್ರಿವಿಕ್ರಂ, ಕಾರ್ಯದರ್ಶಿ ಬಿ.ಎಸ್.ರಾಘವೇಂದ್ರಾಚಾರ್, ಜಂಟಿ ಕಾರ್ಯದರ್ಶಿ ಬಿ.ಎನ್.ಪ್ರದೀಪ್, ಡಿ.ಆರ್.ಅಭಿಷೇಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.