ಬೆಂಗಳೂರು: ‘ದೂರು ನೀಡಲು ಬರುವ ಜನರ ಸಮಸ್ಯೆಗಳನ್ನು ಆಲಿಸಬೇಕು. ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸುವುದು ಕಡ್ಡಾಯ. ದೂರು ದಾಖಲಿಸಲು ನಿರಾಕರಿಸಿ ಜನರನ್ನು ವಾಪಸು ಕಳುಹಿಸಿದ್ದು ಕಂಡುಬಂದರೆ, ಅಂಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಅವರು ಪೊಲೀಸರಿಗೆ ಸೂಚನೆ ನೀಡಿದರು.
ನಗರದ ಪೊಲೀಸ್ ಕಮಿಷನರ್ ಕಚೇರಿಗೆ ಗುರುವಾರ ಭೇಟಿ ನೀಡಿದ ಅಲೋಕ್ ಮೋಹನ್, ಅಧಿಕಾರಿಗಳ ಸಭೆ ನಡೆಸಿದರು. ಕಮಿಷನರ್ ಪ್ರತಾಪ್ ರೆಡ್ಡಿ ಹಾಗೂ ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಸಮ್ಮುಖದಲ್ಲಿ ಹಲವು ಪ್ರಕರಣಗಳ ಪ್ರಗತಿ ಪರಿಶೀಲಿಸಿದರು.
ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಲೋಕ್ ಮೋಹನ್, ‘ಡಿಸಿಪಿ ಅವರು ದಿನಕ್ಕೆ ಒಂದು ಠಾಣೆಗೆ ಭೇಟಿ ನೀಡುವುದು ಕಡ್ಡಾಯ. ಎಸಿಪಿಗಳು ಸಹ ದಿನಕ್ಕೆ ಎರಡು ಠಾಣೆಗೆ ಭೇಟಿ ನೀಡಿ, ಅಲ್ಲಿಯ ಕೆಲಸಗಳ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ’ ಎಂದರು.
‘ಠಾಣೆಯಲ್ಲಿ ದಾಖಲಾಗುವ ಪ್ರಕರಣ ಹಾಗೂ ತನಿಖೆ ಪ್ರಗತಿ ಬಗ್ಗೆ ಪ್ರತಿ ತಿಂಗಳು ವರದಿ ಸಿದ್ಧಪಡಿಸಬೇಕು. ಅದನ್ನು ಕಮಿಷನರ್‌ಗೆ ನೀಡಬೇಕು. ಯಾವುದಾದರೂ ತನಿಖೆ ಬಾಕಿ ಇದ್ದರೆ ಹಾಗೂ ತನಿಖೆಯಲ್ಲಿ ಲೋಪವಾಗಿದ್ದರೆ ಕಮಿಷನರ್ ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅವರು ಹೇಳಿದರು.
‘ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ತಡೆಯಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ’ ಎಂದು ಅಲೋಕ್ ಮೋಹನ್ ತಿಳಿಸಿದರು.
ಹಳೇ ಪ್ರಕರಣಗಳ ಮಾಹಿತಿ: ಬಿಜೆಪಿ ಅಧಿಕಾರ ಅವಧಿಯಲ್ಲಿ ನಗರದಲ್ಲಿ ದಾಖಲಾಗಿದ್ದ ಹಳೇ ಪ್ರಕರಣಗಳ ಬಗ್ಗೆ ಅಲೋಕ್ ಮೋಹನ್ ಮಾಹಿತಿ ಪಡೆದಿದ್ದಾರೆಂದು ಗೊತ್ತಾಗಿದೆ.
‘ಕಾಟನ್‌ಪೇಟೆ ಠಾಣೆಯಲ್ಲಿ ಸ್ಯಾಂಟ್ರೊ ರವಿ ದಾಖಲಿಸಿದ್ದ ಸುಳ್ಳು ಪ್ರಕರಣ, ಬಿಟ್ ಕಾಯಿನ್ ಹಾಗೂ ಇತರೆ ಪ್ರಕರಣಗಳ ಬಗ್ಗೆ ಡಿಜಿ–ಐಜಿಪಿ ಮಾಹಿತಿ ಪಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.