ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ, ₹15 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆರಳಚ್ಚು ಮುದ್ರೆಗಳ ಸಹಾಯದಿಂದ ಪತ್ತೆ
Published 16 ಏಪ್ರಿಲ್ 2024, 15:10 IST
Last Updated 16 ಏಪ್ರಿಲ್ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬೀಗದ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ರಾಮಮೂರ್ತಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

‘ರೌಡಿ ಶ್ರೀನಿವಾಸ್ ಮತ್ತು ಆತನ ಸಹಚರ ವೆಂಕಟೇಶ್ ಬಂಧಿತರು. ಬಂಧಿತರಿಂದ ₹15 ಲಕ್ಷ ಮೌಲ್ಯದ 205 ಗ್ರಾಂ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚೆಗೆ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಮದಕರಿ ನಾಯಕ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಆರೋಪಿಗಳು ಚಿನ್ನಾಭರಣ ಕಳ್ಳತನ ಮಾಡಲು ಪ್ರಯತ್ನಿಸಿದ್ದರು. ಈ ಬಗ್ಗೆ ಮನೆಯ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳಚ್ಚು ಮುದ್ರೆಗಳ ಸಹಾಯದಿಂದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ದಾವಣಗೆರೆಯಲ್ಲಿ ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶ್ರೀನಿವಾಸ್ ಯಶವಂತಪುರ ಪೊಲೀಸ‌್ ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳ ಬಂಧನದಿಂದ ನಾಲ್ಕು ಕಳ್ಳತನ ಪ್ರಕರಣಗಳು ಪತ್ತೆ ಆಗಿವೆ’ ಎಂದು ಮಾಹಿತಿ ನೀಡಿದರು. 

‘ಆರೋಪಿಗಳ ಐಷಾರಾಮಿ ಜೀವನ ನಡೆಸಲು ಬೀಗ ಹಾಕಿದ ಮನೆಗಳನ್ನು ಗುರುತಿಸಿ, ನಂತರ ಮನೆಗೆ ಹಾಕಿದ್ದ ಬೀಗ ಮುರಿದು ಮನೆಯೊಳಗೆ ಸಿಗುವ ಚಿನ್ನಾಭರಣಗಳು ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ರಾಮಮೂರ್ತಿ ನಗರ ಠಾಣೆಯ ಪೊಲೀಸರು ಮತ್ತು ಬೆರಳಚ್ಚು ಘಟಕದವರಿಗೆ ತಲಾ
₹25 ಸಾವಿರ ಬಹುಮಾನ ನೀಡಲಾಗುವುದು’ ಎಂದು ಬಿ. ದಯಾನಂದ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT