ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

120 ರೌಡಿಗಳ ಮನೆಗಳ ಮೇಲೆ ದಾಳಿ: ಹಾಸಿಗೆ ಕೆಳಗೆ ಲಾಂಗ್‌ ಬಚ್ಚಿಟ್ಟಿದ್ದವನ ಬಂಧನ

Published : 27 ಆಗಸ್ಟ್ 2024, 14:13 IST
Last Updated : 27 ಆಗಸ್ಟ್ 2024, 14:13 IST
ಫಾಲೋ ಮಾಡಿ
Comments

ಬೆಂಗಳೂರು: ಈಶಾನ್ಯ ವಿಭಾಗದ ದೇವನಹಳ್ಳಿ ಹಾಗೂ ಯಲಹಂಕ ಉಪ ವಿಭಾಗದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ಮಂಗಳವಾರ ಬೆಳಿಗ್ಗೆ ಪೊಲೀಸರು ದಿಢೀರ್‌ ದಾಳಿ ನಡೆಸಿ, ತಪಾಸಣೆ ನಡೆಸಿದರು.

ರೌಡಿಯೊಬ್ಬನ ಮನೆಯಲ್ಲಿ ಮಾರಕಾಸ್ತ್ರ ಪತ್ತೆಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಂಬೆಳಿಗ್ಗೆಯೇ ಪೊಲೀಸರ ದಿಢೀರ್‌ ದಾಳಿಯಿಂದ ರೌಡಿಗಳ ಮನೆಯವರು ಬೆಚ್ಚಿಬಿದ್ದರು.

ಯಲಹಂಕ, ಕೊಡಿಗೇಹಳ್ಳಿ, ಅಮೃತಹಳ್ಳಿ, ವಿದ್ಯಾರಣ್ಯಪುರ ಸೇರಿದಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ 120ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.

ವಿದ್ಯಾರಣ್ಯಪುರದ ಶ್ರೀನಿಧಿಲೇಔಟ್‌ ರೌಡಿ ಶಾಹಿಲ್‌ ಎಂಬಾತ ಮಂಚದ ಕೆಳಗೆ ಮಾರಕಾಸ್ತ್ರವೊಂದನ್ನು ಅಡಗಿಸಿಟ್ಟಿದ್ದ. ಅದನ್ನು ಜಪ್ತಿ ಮಾಡಲಾಗಿದೆ. ಶಾಹಿಲ್‌ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಅಲ್ಲದೇ ಠಾಣೆಯ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ರೌಡಿಗಳ ಮನೆಗಳಲ್ಲಿ ತಪಾಸಣೆ ನಡೆಸಿ, ರೌಡಿ ಚಟುವಟಿಕೆಯಲ್ಲಿ ಭಾಗಿ ಆಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳಿ, ಯಲಹಂಕ ನ್ಯೂಟೌನ್, ಪಾಲನಹಳ್ಳಿ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ 20ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಯಲಹಂಕ ವ್ಯಾಪ್ತಿಯ ರೌಡಿಗಳ ಮನೆಗಳಲ್ಲಿ ಯಾವುದೇ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ.

ಅಪರಾಧ ಹಿನ್ನೆಲೆಯುಳ್ಳವರ ವಾಸಸ್ಥಳ, ವಿಳಾಸ, ಆದಾಯದ ಮೂಲ ಮತ್ತಿತರ ಮಾಹಿತಿ ಕಲೆ ಹಾಕಲಾಗಿದೆ. ಕೆಲವರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಣ್ಣಪುಟ್ಟ ಗಲಾಟೆಯಲ್ಲಿ ಭಾಗಿ:
ಕೆಲವು ರೌಡಿಗಳು ಇತ್ತೀಚೆಗೆ ಸಣ್ಣಪುಟ್ಟ ಗಲಾಟೆ ಹಾಗೂ ಹಣ ಸುಲಿಗೆ ದಂಧೆಯಲ್ಲಿ ತೊಡಗಿದ್ದರು. ಈ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅಲ್ಲದೇ ವಾರಂಟ್ ಜಾರಿ ಆಗಿದ್ದರೂ ಕೆಲವು ರೌಡಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದರು. ರೌಡಿ ಚಟುವಟಿಕೆ ನಿಯಂತ್ರಣಕ್ಕೆ ತರಲು ಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿತ್ತು. ಇದಾದ ಮೇಲೆ ಎಚ್ಚೆತ್ತ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದರು.

ರೌಡಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು
ರೌಡಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT